Advertisement

ನಂದಾವರದಲ್ಲಿ ಎನ್‌ಐಎ ದಾಳಿ ಪ್ರಕರಣ: ತಡರಾತ್ರಿವರೆಗೂ ತನಿಖೆ

01:21 AM Mar 07, 2023 | Team Udayavani |

ಬಂಟ್ವಾಳ: ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ತಂಡವು ಮಾ. 5ರಂದು ನಂದಾವರದ ನಾಲ್ಕೈದು ಮನೆಗಳಿಗೆ ದಾಳಿ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದು ತಡರಾತ್ರಿಯ ವರೆಗೂ ತೀವ್ರ ಸ್ವರೂಪದ ತನಿಖೆ ನಡೆಸಿ, ನಗದು ಸಹಿತ ಕೆಲವು ಸೊತ್ತುಗಳನ್ನು ವಶಪಡಿಸಿಕೊಂಡಿದೆ.

Advertisement

ಬಿಹಾರದ ಪಟ್ನಾದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಬಾಂಬ್‌ ಇರಿ ಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತ ರಾಗಿರು ವವರಿಗೆ ಹಣಕಾಸಿನ ನೆರವು ಒದಗಿಸಿದ್ದಾರೆ ಎಂಬ ಆರೋಪದಲ್ಲಿ ಈ ದಾಳಿ ನಡೆದಿದ್ದು, ನಂದಾವರದ ಒಬ್ಟಾತ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾನೆ. ಉಳಿದವರು ಆತನಿಗೆ ನೆರವಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಂದಾವರ ಭಾಗಕ್ಕೆ ಸಂಜೆಯ ವೇಳೆಗೆ ಪೊಲೀಸ್‌ ವಾಹನಗಳು ತೆರಳಿದ್ದವಾದರೂ ಎನ್‌ಐಎ ಅಧಿಕಾರಿಗಳು ಆರೋಪಿಗಳನ್ನು ಅದಕ್ಕೂ ಮೊದಲೇ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ನಂದಾವರ ನಿವಾಸಿ ಮಹಮ್ಮದ್‌ ಸಿನಾನ್‌, ಇಕ್ಬಾಲ್‌, ಸರ್ಪಾಜ್‌ ನವಾಜ್‌, ನೌಫಲ್‌ನನ್ನು ವಶಕ್ಕೆ ಪಡೆದು ಬಂಟ್ವಾಳ ನಿರೀಕ್ಷಣ ಮಂದಿರದಲ್ಲಿ ತಡರಾತ್ರಿ 12ರ ವರೆಗೂ ವಿಚಾರಣೆ ನಡೆಸಲಾಗಿತ್ತು.

ಆರೋಪಿಗಳನ್ನು ಅಧಿಕಾರಿಗಳು ತಮ್ಮ ವಶದಲ್ಲಿಯೇ ಇರಿಸಿಕೊಂಡಿದ್ದಾರೆಯೇ ಅಥವಾ ಮನೆಗೆ ಕಳು ಹಿಸಿ ದ್ದಾರೆಯೇ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆರೋಪಿಗಳ ಮನೆಯಿಂದ 2 ಮೊಬೈಲ್‌, 2 ಡಿವಿಆರ್‌ ಹಾಗೂ 1.50 ಲಕ್ಷ ರೂ. ವಶಪಡಿಸಿಕೊಂಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿದೆ.

ಸೋಮವಾರ ಬೆಳಗ್ಗೆ ಬಿ.ಸಿ. ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕಚೇರಿಯ ಮುಂಭಾಗದಲ್ಲಿ 2 ಕೆಎಸ್‌ಆರ್‌ಪಿ ಬಸ್‌ಗಳು ನಿಂತಿದ್ದು, ಆರೋಪಿಗಳನ್ನು ಮಹಜರಿಗೆ ತಹಶೀಲ್ದಾರ್‌ ಬಳಿಗೆ ಕರೆದುಕೊಂಡು ಬರುವ ಸಂಶಯ ಹುಟ್ಟಿಕೊಂಡಿತ್ತು. ಆದರೆ ತಾಲೂಕು ಕಚೇರಿಗೆ ಯಾವುದೇ ಆರೋಪಿಯನ್ನು ಕರೆತರದೇ ಇರುವುದರಿಂದ ವಶಕ್ಕೆ ಪಡೆದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ರಿಯಾಜ್‌ ಫರಂಗಿಪೇಟೆ ವಿಚಾರಣೆ ನಡೆಸಿತ್ತು

Advertisement

2022ರ ಸೆ. 8ರಂದು ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎಸ್‌ಡಿಪಿಐ ಮುಖಂಡ ರಿಯಾಜ್‌ ಫರಂಗಿಪೇಟೆ ಅವರ ಬಿ.ಸಿ. ರೋಡಿನ ಪರ್ಲಿಯಾದಲ್ಲಿರುವ ಮನೆಗೆ ಎನ್‌ಐಎ ತಂಡ ದಾಳಿ ನಡೆಸಿ ವಿಚಾರಣೆ ನಡೆಸಿತ್ತು. ಈ ವೇಳೆ ರಿಯಾಜ್‌ ಅವರನ್ನು ವಶಕ್ಕೆ ಪಡೆಯದೆ, ಮೊಬೈಲ್‌ ಫೋನ್‌ಗಳು ಹಾಗೂ ಪಕ್ಷಕ್ಕೆ ಸಂಬಂಧಿಸಿ ಕೆಲವು ಕರಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಫರಂಗಿಪೇಟೆ ಪಕ್ಷದ ಬಿಹಾರ ಉಸ್ತುವಾರಿಯಾಗಿದ್ದ ವೇಳೆ ಬಿಹಾರ ಪ್ರಕರಣದ ಓರ್ವ ಬಂಧಿತ ಆರೋಪಿ ಅಥಾರ್‌ ಪರ್ವೇಜ್‌ನನ್ನು ಭೇಟಿಯಾಗಿದ್ದ ಹಿನ್ನೆಲೆ ಯಲ್ಲಿ ವಿಚಾರಣೆ ನಡೆಸಲಾಗಿತ್ತು. ಪರ್ವೇಜ್‌ ಎಸ್‌ಡಿಪಿಐ ಪಕ್ಷದ ಪಟ್ನಾ ಜಿಲ್ಲೆಯ ಪ್ರಧಾನ ಕಾರ್ಯ ದರ್ಶಿಯಾಗಿರುವುದರಿಂದ ಆತನನ್ನು ಭೇಟಿಯಾಗಿದ್ದೆ ಎಂದು ರಿಯಾಜ್‌ ಅಧಿಕಾರಿಗಳಿಗೆ ತಿಳಿಸಿದ್ದರು.

ಮತ್ತೆ ಈ ಪ್ರಕರಣ ಬಂಟ್ವಾಳದತ್ತ ಮುಖ ಮಾಡಿದ್ದು, ನಂದಾವರ ಆರೋಪಿಗಳು ಎಲ್ಲಿಂದ ಹಣ ವರ್ಗಾಯಿಸುತ್ತಿದ್ದರು, ಅವರಿಗೆ ಹಣಕಾಸಿನ ನೆರವು ಒದಗಿಸಿದವರು ಯಾರು ಎಂಬ ಸತ್ಯಾಂಶ ಹೊರಬೀಳಬೇಕಿದೆ.

ಎನ್‌ಐಎ ವ್ಯವಸ್ಥಿತ ಕಾರ್ಯಾಚರಣೆ
ಆರೋಪಿಗಳಿಗೆ ದುಬಾೖಯ ವ್ಯಕ್ತಿಯ ಜತೆ ಸಂಪರ್ಕ ಇತ್ತು ಎನ್ನಲಾಗಿದ್ದು, ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎನ್ನಲಾಗುತ್ತಿದ್ದರೂ ಅದರ ನಿಖರ ಮೌಲ್ಯ ಎಷ್ಟು? ಅದು ಎಲ್ಲಿಂದ ಬರುತ್ತಿತ್ತು? ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ನಿರ್ದಿಷ್ಟವಾಗಿ ಯಾರ ಖಾತೆಗೆ ವರ್ಗಾವಣೆಯಾಗಿದೆ ಎಂಬುದೂ ಗೊತ್ತಾಗಿಲ್ಲ. ಯಾವುದೇ ಸುಳಿವು ನಾಶವಾಗದಂತೆ ಮತ್ತು ಸೋರಿಕೆಯಾಗದಂತೆ ಎನ್‌ಐಎ ತಂಡ ತನ್ನ ಕಾರ್ಯಾಚರಣೆಯನ್ನು ಗೌಪ್ಯವಾಗಿಯೇ ನಡೆಸಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ.

ಎನ್‌ಐಎ ತಂಡವು ಮೆಲ್ಕಾರ್‌ ಹಾಗೂ ಪಾಣೆಮಂಗಳೂರಿನ ಸೈಬರ್‌ಗಳಿಗೂ ದಾಳಿ ನಡೆಸಿದೆ ಎನ್ನಲಾಗಿದ್ದರೂ ಖಚಿತಗೊಂಡಿಲ್ಲ. ಎನ್‌ಐಎ ಅಧಿಕಾರಿಗಳು ದಾಳಿಯ ವೇಳೆ ಭದ್ರತೆಯ ದೃಷ್ಟಿಯಿಂದ ಸ್ಥಳೀಯ ಪೊಲೀಸರ ನೆರವನ್ನೂ ಪಡೆದುಕೊಂಡಿದ್ದು, ತಾಲೂಕು ಕಚೇರಿಗೂ ಮಾಹಿತಿ ನೀಡಿದ್ದರು. ಆದರೆ ರವಿವಾರ ರಜಾ ದಿನವಾದ ಕಾರಣ ತಾಲೂಕು ಕಚೇರಿಯ ಅಧಿಕಾರಿಗಳು ಪೊಲೀಸ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಇರ್ದೆ ವ್ಯಕ್ತಿಯ ತೀವ್ರ ವಿಚಾರಣೆ
ಪುತ್ತೂರು: ಪಟ್ನಾ ಬಾಂಬ್‌ ಪ್ರಕರಣದ ಆರೋಪಿಗಳಿಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ರಾತ್ರಿ ಪುತ್ತೂರಿನ ಇರ್ದೆಯಲ್ಲಿ ಬಂಧಿತನಾಗಿರುವ ರಫೀಕ್‌ನನ್ನು ಎನ್‌ಐಎ ತೀವ್ರ ವಿಚಾರಣೆಗೆ ಗುರಿಪಡಿಸಿರುವ ಮಾಹಿತಿ ಲಭ್ಯವಾಗಿದೆ.

ಆತನ ಬ್ಯಾಂಕ್‌ ಖಾತೆಯಿಂದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ಮಾಹಿತಿ ಕಲೆ ಹಾಕಿರುವ ಎನ್‌ಎಐ ಹಣದ ಮೂಲದ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ. ಸ್ಥಳೀಯ ಮಾಹಿತಿ ಪ್ರಕಾರ ಆರೋಪಿಯ ಆರ್ಥಿಕ ಸ್ಥಿತಿ ಸಾಧಾರಣವಾಗಿದ್ದು, ಪ್ರಸ್ತುತ ಹೊಸ ಮನೆ ನಿರ್ಮಾಣ ಹಂತದಲ್ಲಿದೆ. ಈತ ಕೆಲವು ವರ್ಷ ವಿದೇಶದಲ್ಲಿ ಕೆಲಸ ಮಾಡಿದ್ದ ಎನ್ನುವ ಮಾಹಿತಿ ಇದೆ.

ಈತ ಹವಾಲಾ ದಂಧೆಯಲ್ಲಿ ತೊಡಗಿರುವ ಶಂಕೆ ಇದೆ. ಕೊಬ್ಬರಿ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದ ಈತನ ಖಾತೆಯ ಮೂಲಕ ಬೇರೆಯವರು ಹಣ ವರ್ಗಾಯಿಸಿ ಈತನಿಗೆ ಕಮಿಷನ್‌ ಪಾವತಿಸಿರ ಲೂಬಹುದು, ಹಣದ ಆಸೆಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಪಟ್ನಾ ಪ್ರಕರಣವಲ್ಲದೆ ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳಿಗೂ ಹಣದ ನೆರವು ಅಥವಾ ಆಶ್ರಯ ನೀಡುವಲ್ಲಿ ಈತ ಸಹಕಾರ ನೀಡಿದ್ದಾನೆಯೇ ಎನ್ನುವ ನಿಟ್ಟಿನಲ್ಲಿಯೂ ತನಿಖೆ ಕೇಂದ್ರೀಕರಿಸಲಾಗಿದೆ. ದೇಶದ ನಾನಾ ಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಸಂಚು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈತನ ಕೈವಾಡ ಇದೆಯೇ ಎನ್ನುವ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next