Advertisement

ಶಿವಮೊಗ್ಗ ಸ್ಫೋಟ: ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಎನ್‌ಐಎ ದಾಳಿ

01:14 AM Mar 13, 2023 | Team Udayavani |

ಹೊಸದಿಲ್ಲಿ: ಶಿವಮೊಗ್ಗದಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ಇರಿತ, ಬಾಂಬ್‌ ಸ್ಫೋಟ ಪ್ರಯೋಗ ಮತ್ತು ರಾಷ್ಟ್ರ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಸಿಯೋನಿಯ 4 ಕಡೆ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ಎನ್‌ಐಎ ಶೋಧ ಕಾರ್ಯ ನಡೆಸಿದೆ. ಶನಿವಾರವೇ ಕಾರ್ಯಾಚರಣೆ ನಡೆಸಲಾಗಿದ್ದರೂ ರವಿವಾರ ತನಿಖಾ ಸಂಸ್ಥೆ ವಿವರಗಳನ್ನು ಬಹಿರಂಗಪಡಿಸಿದೆ. ಈ ಮೂರು ಕೇಸುಗಳಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಖೊರೊಸಾನ್‌ ಪ್ರಾವಿನ್ಸ್‌ (ಐಎಸ್‌ಕೆಪಿ)ನ ಕೈವಾಡ ದೃಢಪಟ್ಟಿತ್ತು.

Advertisement

ಮಧ್ಯಪ್ರದೇಶದ ಸಿಯೋನಿಯಲ್ಲಿ ಶಂಕಿತ ವ್ಯಕ್ತಿಗಳಾದ ಅಬ್ದುಲ್‌ ಅಜೀಜ್‌ ಸಲಾಫಿ ಮತ್ತು ಶೋಯಬ್‌ ಖಾನ್‌ ಎಂಬಿಬ್ಬರಿಗೆ ಸೇರಿದ ಮನೆ ಮತ್ತು ವಾಣಿಜ್ಯ ಮಳಿಗೆಗಳಿಗೆ ದಾಳಿ ನಡೆಸಲಾಗಿದೆ. ಇರಿತ ಪ್ರಕರಣದ ಒಟ್ಟಾರೆ ಸಂಚು ವಿದೇಶದಲ್ಲಿ ನಡೆದಿತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಬಂಧಿತನಾಗಿರುವ ಮೊಹಮ್ಮದ್‌ ಶಾರಿಕ್‌, ಮಾಝ್ ಮುನೀರ್‌ ಖಾನ್‌, ಯಾಸಿನ್‌ ಮತ್ತು ಇತರರು ವಿದೇಶದಲ್ಲಿ ಇರುವ ಹ್ಯಾಂಡ್ಲರ್‌ನ ಸೂಚನೆಯನ್ನು ಅನುಸರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಿಯೋನಿಯ ಮಸೀದಿಯೊಂದರ ಮೌಲಾನ ಅಜೀಜ್‌ ಸಲಾಫಿ ಎಂಬಾತ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕುಕೃತ್ಯ ನಡೆಸಲು ಯುಟ್ಯೂಬ್‌ ಮೂಲಕ ಪ್ರೋತ್ಸಾಹ ನೀಡುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರೇರಿತ ಯುವಕರನ್ನೆಲ್ಲ ಮುಂದಿನ ದಿನಗಳಲ್ಲಿ ಸಿಯೋನಿಯಲ್ಲಿ ಸೇರಿಸಲೂ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಮಾಝ್ ಜತೆಗೆ ಸಂಪರ್ಕ?
ಸಲಾಫಿ ಕರ್ನಾಟಕದ ಮಾಝ್ ಮುನೀರ್‌ ಖಾನ್‌ ಜತೆಗೆ ನಿಕಟ ಸಂಪರ್ಕ ಇರಿಸಿದ್ದ ಹಾಗೂ ಬೃಹತ್‌ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ತನಿಖೆಯಿಂದ ಐಸಿಸ್‌ ಜಾಲ ದೇಶದಲ್ಲಿ ಹರಡುವ ಬಗ್ಗೆ ಮತ್ತಷ್ಟು ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. ಪುಣೆಯಲ್ಲಿ ತಾಲ್ಹಾ ಖಾನ್‌ ಎಂಬಾತನಿಗೆ ಸೇರಿದ ಸ್ಥಳದಲ್ಲೂ ದಾಳಿ ನಡೆಸ ಲಾಗಿದೆ. 2 ವರ್ಷಗಳ ಹಿಂದೆ ಐಎಸ್‌ಕೆಪಿ ವಿಚಾರಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಕಾಶ್ಮೀರ ಮೂಲದ ದಂಪತಿ ವಿರುದ್ಧ ದಾಖಲಿ ಸಿದ್ದ ಕೇಸಿಗೆ ಸಂಬಂಧಿಸಿ ಈ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next