ಹೊಸದಿಲ್ಲಿ: ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಸಿಸ್) ಆದೇಶದಂತೆ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರನ್ನು ಹೈದರಾಬಾದ್‌ನಲ್ಲಿ ರವಿವಾರ ಬಂಧಿಸಲಾಗಿದೆ.
ಮೊಹಮ್ಮದ್ ಅಬ್ದುಲ್ಲಾ ಬಾಸಿತ್(24) ಮತ್ತು ಮೊಹಮ್ಮದ್ ಅಬ್ದುಲ್ ಖಾದಿರ್(19) ಎಂಬವರೇ ಬಂಧಿತರು. ಇವರು ಐಸಿಸ್ ಜತೆ ನಂಟು ಹೊಂದಿದ್ದರು ಎಂದು ಎನ್‌ಐಎ ತಿಳಿಸಿದೆ.
ಉಗ್ರ ಕೃತ್ಯ ಎಸಗಲು ಯುವಕರಿಗೆ ತರಬೇತಿ ನೀಡುತ್ತಿದ್ದ ಆರೋಪದಲ್ಲಿ 2 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಬಂಧಿತರಾಗಿದ್ದ ಮೂವರು ಯುವಕರು ನೀಡಿದ ಸುಳಿವಿನ ಮೇರೆಗೆ ಇವರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಯುವಕರು ಉಗ್ರ ಸಂಘಟನೆ ಯತ್ತ ಸೇರ್ಪಡೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕಾರ್ಯಾಚರಣೆ ಪೈಕಿ ಇದೂ ಒಂದಾಗಿದೆ. ದೇಶದ ಮೇಲೆ ಅಂತಾರಾಷ್ಟ್ರೀಯ ಸಂಘಟನೆ ನಡೆಸಲುದ್ದೇಶಿಸಿರುವ ಉಗ್ರ ದಾಳಿಗಳ ವಿವರಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಇತ್ತೀಚೆಗಷ್ಟೇ, ಅಬ್ದುಲ್ಲಾ ಬಾಸಿತ್, ಅದ್ನಾನ್ ಹಸನ್ ಎಂಬಾತನೊಂದಿಗೆ ಸೇರಿ ಭಾರತದಲ್ಲಿ ಐಸಿಸ್ ಆದೇಶದಂತೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾನೆ ಎಂಬ ಮಾಹಿತಿ ಎನ್‌ಐಎಗೆ ದೊರೆತಿತ್ತು. ಕಳೆದ ವಾರ ಹೈದರಾಬಾದ್‌ನ 7 ಕಡೆ ದಾಳಿ ನಡೆಸಿದ್ದ ಎನ್‌ಐಎ, ಹಲವು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿತ್ತು.