ನವದೆಹಲಿ: 2007ರಲ್ಲಿ ನಡೆದಿದ್ದ ಸಂಜೋತಾ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚ್ ಕುಲದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ಕೋರ್ಟ್ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲಾ ನಾಲ್ಕು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿ ಜೈಲುಶಿಕ್ಷೆ ಅನುಭವಿಸುತ್ತಿದ್ದ ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಹಾಗೂ ರಾಜೀಂದರ್ ಚೌಧರಿಯನ್ನು ವಿಶೇಷ ಎನ್ ಐಎ ಕೋರ್ಟ್ ದೋಷಮುಕ್ತಗೊಳಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮಾರ್ಚ್ 11 2007ರಂದು ನಡೆದಿದ್ದ ಸಂಜೋತಾ ಸ್ಫೋಟ ಪ್ರಕರಣದ ಕುರಿತಂತೆ ಪಾಕಿಸ್ತಾನದ ಪ್ರತ್ಯಕ್ಷದರ್ಶಿಯ ವಿಚಾರಣೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಪಾಕಿಸ್ತಾನಿ ಪ್ರಜೆಯೊಬ್ಬ ಸಲ್ಲಿಸಿದ್ದ ಅರ್ಜಿಯಿಂದಾಗಿ ಪ್ರಕರಣದ ಬಗ್ಗೆ ನೀಡಬೇಕಾಗಿದ್ದ ಅಂತಿಮ ತೀರ್ಪನ್ನು ಎನ್ ಐಎ ಕೋರ್ಟ್ ಮುಂದೂಡಿತ್ತು.
ಆ ನಿಟ್ಟಿನಲ್ಲಿ ಪಾಕಿಸ್ತಾನದ ಮಹಿಳೆ ರಾಹೀಲಾ ವಾಕೀಲಾ ಎಂಬಾಕೆಯ ವಿಚಾರಣೆಯನ್ನು ಮಾರ್ಚ್ 14ಕ್ಕೆ ನಡೆಸಬೇಕೆಂದು ಎಂದು ಕೋರ್ಟ್ ಸೂಚಿಸಿತ್ತು. ಆದರೆ ತಮ್ಮ ಕಕ್ಷಿದಾರರಿಗೆ ಸಮನ್ಸ್ ದೊರಕಿಲ್ಲ. ಅಲ್ಲದೇ ವೀಸಾ ನೀಡಲು ಅಧಿಕಾರಿಗಳು ನಿರಾಕರಿಸಿದ್ದರಿಂದ ಅವರು ಖುದ್ದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಾಕೀಲಾ ಪರ ವಕೀಲರು ಕೋರ್ಟ್ ಗೆ ತಿಳಿಸಿದರು.
ಈ ಪ್ರಕರಣದ ವಿಚಾರಣೆ ನಡೆದು ಅಂತಿಮ ಹಂತದಲ್ಲಿ ಯಾಕೆ ಈ ಅರ್ಜಿ ಸಲ್ಲಿಸಬೇಕಿತ್ತು? ಈ ಹಿಂದೆಯೇ ಅವಕಾಶ ನೀಡಲಾಗಿತ್ತು ಎಂದು ನ್ಯಾಯಾಧೀಶರು ಪ್ರಶ್ನಿಸಿ, ಪಾಕಿಸ್ತಾನಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನಾಲ್ವರು ಆರೋಪಿಗಳು ಖುಲಾಸೆಗೊಂಡಿರುವುದಾಗಿ ತೀರ್ಪನ್ನು ನೀಡಿದರು.