ಬೆಂಗಳೂರು/ ಹೊಸದಿಲ್ಲಿ: ನಿಷೇಧಿತ ಐಸಿಸ್ ಸಂಘಟನೆಯ ಹೆಸರಿನಲ್ಲಿ ವಿಧ್ವಂಸಕ ಚಟುವಟಿಕೆಗಳು ಮತ್ತು ಯುವಕರ ನೇಮಕ ನಡೆಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಸೋಮವಾರ ಬೆಂಗಳೂರಿನ ವೈದ್ಯನ ಸಹಿತ ಒಟ್ಟು ಮೂವರನ್ನು ಕೇರಳದಲ್ಲಿ ಬಂಧಿಸಿದ್ದಾರೆ.
ಭಾರತದಲ್ಲಿ ಐಸಿಸ್ ಸಂಘಟನೆಯನ್ನು ಬಲಪಡಿಸಲು ಸಿದ್ಧತೆ ನಡೆಸಿದ್ದ ಆರೋಪಿಗಳು, ಕರ್ನಾಟಕ ಮತ್ತು ಕೇರಳದ ಕೆಲವು ಪ್ರಸಿದ್ಧರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಸಂಬಂಧ ಸೋಮವಾರ ಬೆಂಗಳೂರಿನ ಕೆಂಗೇರಿ ಮತ್ತು ಬಿಟಿಎಂ ಬಡಾವಣೆಯ ಗುರಪ್ಪನ ಪಾಳ್ಯ ಬಳಿ ಎನ್‌ಐಎ ತಂಡ ಆರೋಪಿಗಳ ಮನೆ ಮತ್ತು ಕ್ಲಿನಿಕ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಆರೋಪಿ ವೈದ್ಯನನ್ನು ಡಾ| ರಹೀಸ್ ರಶೀದ್ ಎಂದು ಗುರುತಿಸಲಾಗಿದೆ. ಈತನ ಜತೆ ಸಹವರ್ತಿಗಳಾದ ಕೇರಳದ ಮೊಹಮ್ಮದ್ ಅಮಿನ್ ಅಲಿಯಾಸ್ ಅಬ್ಬು ಯಹ್ಯಾ (30), ಮುಷಬ್ ಅನ್ವರ್ (36) ಎಂಬವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಾ| ರಹೀಸ್ ರಶೀದ್ ದಂತ ವೈದ್ಯ, ಪತ್ನಿ ಕೂಡ ದಂತ ವೈದ್ಯೆ. ಇವರು ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದು, ಕೆಂಗೇರಿಯಲ್ಲಿ ಕ್ಲಿನಿಕ್ ಹೊಂದಿದ್ದಾರೆ. ರಹೀಸ್ ರಶೀದ್ ಐಸಿಸ್‌ನಲ್ಲಿ ತೊಡಗಿ ಕೊಂಡಿದ್ದು, ರಾಜ್ಯದ ಕೆಲವು ಯುವಕರನ್ನು ಐಸಿಸ್‌ಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದಾನೆ ಎನ್ನಲಾಗಿದೆ.
“ಮಾಸ್ಟರ್ ಮೈಂಡ್’ ಯಹ್ಯಾ ಸೂಚನೆ ಮತ್ತು ಸಲಹೆ ಮೇರೆಗೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಮತ್ತು ಆನ್‌ಲೈನ್ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ. ಈತನ ಮನೆ ಮತ್ತು ಕ್ಲಿನಿಕ್‌ನಲ್ಲಿ ಹಾರ್ಡ್ಡಿಸ್ಕ್, ಪೆನ್ಡ್ರೈವ್, ಸಿಮ್ ಕಾರ್ಡ್, ಮೊಬೈಲ್‌ಗಳು ಸಿಕ್ಕಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಪೆನ್‌ಡ್ರೈವ್ ನಲ್ಲಿ ಕೆಲವು ಸ್ಫೋಟಕ ವಿಚಾರಗಳು ಇವೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕೇರಳದ ಕಣ್ಣೂರು, ಮಲಪುರಂ, ಕೊಲ್ಲಂ ಮತ್ತು ಕಾಸರಗೊಡು ಹಾಗೂ ದಿಲ್ಲಿ ಸೇರಿ 11 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಐಸಿಸ್ ಬಲಪಡಿಸುವ ಮತ್ತು ವಿಧ್ವಂಸಕ ಕೃತ್ಯ ನಡೆಸುವ ಸಂಚಿಗೆ ಸಂಬಂಧಿಸಿ ಮಹತ್ವದ ದಾಖಲೆ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಎಲ್ಲವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.