ನವದೆಹಲಿ: ಪಂಜಾಬ್ ನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ವಿಕಾಸ್ ಪ್ರಭಾಕರ್ ಅವರನ್ನು ಹತ್ಯೆಗೈದ ಇಬ್ಬರು ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ.
ಇದನ್ನೂ ಓದಿ:Anegundi; ಕೆಂಪೇಗೌಡರನ್ನು ಬಂಧನದಲ್ಲಿಟ್ಟಿದ್ದ ಆನೆಗೊಂದಿ ಸೆರೆಮನೆ ಪತ್ತೆ
ಕೊಲೆ ಪ್ರಕರಣದಲ್ಲಿ ಪಂಜಾಬ್ ನ ನವಾನ್ ಶಹರ್ ನ ಗರ್ ಪಧಾನ್ ಗ್ರಾಮದ ನಿವಾಸಿ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಹಾಗೂ ಯಮುನಾ ನಗರ ನಿವಾಸಿ ಸುಖ್ ವಿಂದರ್ ಸಿಂಗ್ ಪುತ್ರ ಕುಲ್ಬೀರ್ ಸಿಂಗ್ ಅಲಿಯಾಸ್ ಸಿಧು ವಿರುದ್ಧ ಹರ್ಯಾಣದ ಸದಾರ್ ಜಗಧಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ (FIR) ದಾಖಲಾಗಿದೆ ಎಂದು ಎನ್ ಐಎ ಪ್ರಕಟನೆ ತಿಳಿಸಿದೆ.
ಆರೋಪಿಗಳ ಪತ್ತೆಗೆ ಬಹುಮಾನ ಘೋಷಣೆ ಜತೆಗೆ ಎನ್ ಐಎ ಇಬ್ಬರ ಫೋಟೋಗಳನ್ನು ಬಿಡುಗಡೆ ಮಾಡಿದೆ. ನಂಗಾಲ್ ಘಟಕದ ವಿಎಚ್ ಪಿ (VHP) ಅಧ್ಯಕ್ಷರಾಗಿದ್ದ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಅವರ ಮೇಲೆ 2024ರ ಏಪ್ರಿಲ್ 13ರಂದು ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಗುಂಡು ಹಾರಿಸಿದ ನಂತರ ಆರೋಪಿಗಳು ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯ ಎನ್ ಐಎಗೆ ಶಿಫಾರಸು ಮಾಡಿತ್ತು.
ಇಬ್ಬರು ಆರೋಪಿಗಳ ಬಗ್ಗೆ ಚಂಡೀಗಢ ಕಚೇರಿ ಅಥವಾ ಎನ್ ಐಎ ಪ್ರಧಾನ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್ ಐಎ ತಿಳಿಸಿದೆ.