Advertisement

ವಾಟ್ಸಾಪ್‌-ಫೇಸ್ಬುಕ್‌ ಇಲ್ಲದೆ ನೆಟ್ಟಿಗರ ಚಡಪಡಿಕೆ

10:43 PM Dec 20, 2019 | mahesh |

ಮಹಾನಗರ: ದಿನ ಬೆಳಗಾದರೆ, ಹಾಸಿಗೆಯಿಂದ ಏಳುವ ಮುನ್ನವೇ ವಾಟ್ಸಾಪ್‌, ಫೇಸ್ಬುಕ್‌ನಲ್ಲಿ ಕೈಯಾಡಿಸುವ ಮಂದಿಗೆ ವಾಟ್ಸಾಪ್‌, ಫೇಸ್ಬುಕ್‌ ಇಲ್ಲದಿದ್ದರೆ ಏನಾಗಬಹುದು? ಬಿಟ್ಟಿರಲಾಗದಷ್ಟು ಹಚ್ಚಿಕೊಂಡಿರುವ ನೆಟ್‌ಲೋಕ ಕೈ ತಪ್ಪಿದಾಗ ಚಡಪಡಿಕೆ, ಕಳೆದುಕೊಂಡ ಭಾವ ಕಾಡದೇ ಇರದು.

Advertisement

ದ.ಕ. ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರ ಸ್ಥಿತಿ ಶುಕ್ರವಾರ ಅಕ್ಷರಶಃ ಇದೇ ಆಗಿತ್ತು. ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಯಾವುದೇ ಬರಹ, ಚಿತ್ರಗಳು ಹರಿದಾಡಿ ಸಾಮರಸ್ಯಕ್ಕೆ ಭಂಗ ಉಂಟಾಗಬಾರದೆಂಬ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ದ.ಕ. ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಿ ಗೃಹ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಡಾ| ರಜನೀಶ್‌ ಗೋಯೆಲ್‌ ಅವರು ಗುರುವಾರ ರಾತ್ರಿ ಆದೇಶ ಹೊರಡಿಸಿದ್ದರು.

ಅದರಂತೆ ಗುರುವಾರ ಮಧ್ಯರಾತ್ರಿಯಿಂದಲೇ ಇಂಟರ್ನೆಟ್‌ ಸ್ಥಗಿತಗೊಂಡಿತ್ತು. ಕ್ಷಣ ಕ್ಷಣದ ಸುದ್ದಿಗಳಿಗೆ ಅಂತರ್ಜಾಲ ಮಾಧ್ಯಮವನ್ನೇ ಅವಲಂಬಿಸಿದ್ದ ಜನರಿಗೆ ಇದರಿಂದ ಕಷ್ಟವಾದರೆ, ದಿನನಿತ್ಯ ವಾಟ್ಸಾéಪ್‌, ಫೇಸುºಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲೇ ಕಾಲ ಕಳೆಯುವವರಿಗಂತೂ ನೆಟ್‌ ಸಂಪರ್ಕ ಇಲ್ಲದೆ, ದಿನ ಕಳೆಯುವುದೇ ಕಷ್ಟವಾಗತೊಡಗಿತ್ತು.

48 ಗಂಟೆಗಳ ಅನಂತರ ಸಿಗೋಣ
ಇಂಟರ್‌ನೆಟ್‌ ಸೇವೆ ಸ್ಥಗಿತಗೊಳ್ಳಲಿದೆ ಎಂದು ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಗುರುವಾರ ರಾತ್ರಿ 10 ಗಂಟೆ ಬಳಿಕ ಕೆಲವರು ತಮ್ಮ ವಾಟ್ಸಾಪ್‌, ಫೇಸ್ಬುಕ್‌ ಸ್ಟೇಟಸ್‌ಗಳಲ್ಲಿ “48 ಗಂಟೆಗಳ ನಂತರ ಸಿಗೋಣ’ ಎಂದು ಬರೆದುಕೊಂಡರು. ಪ್ರತಿದಿನ ಆ್ಯಕ್ಟಿವ್‌ ಆಗಿರುವ ಗ್ರೂಪ್‌ಗ್ಳಲ್ಲಿಯೂ ರವಿವಾರ ಭೇಟಿಯಾಗೋಣ ಎಂಬ ಸಂದೇಶ ಕಳುಹಿಸುವುದು ನಡೆದೇ ಇತ್ತು. ನೆಟ್‌ಗಾಗಿ ಫೋನ್‌ ಬಳಕೆ ಮಾಡುವ ಕೆಲ ವಿದ್ಯಾರ್ಥಿಗಳು ಇನ್ನು ಎರಡು ದಿನ ಫೋನ್‌ ಮುಟ್ಟುವುದು ವ್ಯರ್ಥ ಎಂದ ನಿರಾಸೆಗೊಂಡರು.

ಒಳ್ಳೆಯ ಕೆಲಸ
ನೆಟ್‌ ಬಳಕೆದಾರರು ಇಂಟರ್ನೆಟ್‌ ಸಂಪರ್ಕ ಸ್ಥಗಿತದಿಂದಾಗಿ ಪರದಾಡಿದರೆ, ಇನ್ನೊಂದಷ್ಟು ಮಂದಿ ಇಂಟರ್ನೆಟ್‌ ಸಂಪರ್ಕ ಕಡಿತವಾದದ್ದು ಒಳ್ಳೆಯದೇ ಆಯಿತೆಂದು ಮಾತನಾಡಿಕೊಳ್ಳುತ್ತಿದ್ದರು. ಸಮಾಜದಲ್ಲಿ ಸಾಮರಸ್ಯ ಕೆಡಿಸಲು, ಧರ್ಮಗಳ ನಡುವೆ ಹಗೆತನ ಉಂಟಾಗಲು, ಶಾಂತಿ ಕದಡಲು ಹಲವಾರು ಬಾರಿ ಸಾಮಾಜಿಕ ತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳೇ ಕಾರಣವಾಗುತ್ತಿವೆ. ಇತರರನ್ನು ಕೆರಳಿಸುವ ಬರಹಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಸಾಮಾಜಿಕ ಸ್ವಾಸ್ಥ್ಯ ಕೆಡಲು ಕಾರಣರಾಗುವುದು ಮತ್ತು ಇಂತಹವರನ್ನು ಹಿಡಿಯುವುದು ಪೊಲೀಸರಿಗೂ ಸವಾಲಾಗುತ್ತದೆ. ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರೆ, ಇಂತಹ ಯಾವುದೇ ಘಟನೆಗಳಿಗೆ ಆಸ್ಪದ ಸಿಗುವುದಿಲ್ಲ. ಹೀಗಾಗಿ ಇಂಟರ್ನೆಟ್‌ ಸಂಪರ್ಕ ಸ್ಥಗಿತಗೊಳಿಸಿರುವುದು ಒಳ್ಳೆಯ ಬೆಳವಣಿಗೆ ಎಂಬುದಾಗಿ ನಾಗರಿಕ ಸಮಾಜದಿಂದ ಶ್ಲಾಘನೆ ವ್ಯಕ್ತವಾಯಿತು.

Advertisement

ನಾಳೆಯೂ ಇಂಟರ್ನೆಟ್‌ ಇಲ್ಲ
ಗುರುವಾರ ಮಧ್ಯರಾತ್ರಿಯಿಂದ 48 ಗಂಟೆಗಳ ಕಾಲ ಇಂಟರ್ನೆಟ್‌ ಸ್ಥಗಿತವಾಗಿರುವುದರಿಂದ ಶನಿವಾರ ಮಧ್ಯರಾತ್ರಿಯವರೆಗೆ ಇದು ಪಾಲನೆಯಲ್ಲಿರಲಿದೆ. ಹಾಗಾಗಿ ಶುಕ್ರವಾರದಂತೆ ಶನಿವಾರವೂ ವಾಟ್ಸಾಪ್‌, ಫೇಸ್ಬುಕ್‌ ಇನ್ಸಾಗ್ರಾಂ ಬಳಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಮಟ್ಟಿಗೆ ಅಸಾಧ್ಯವಾಗಲಿದೆ.

ಕೆಲಸಕ್ಕೆ ತೊಂದರೆ
ಮೊಬೈಲ್‌ ಇಂಟರ್ನೆಟ್‌ನೆಟ್‌ ಅವಲಂಬಿಸಿದ್ದ ಮತ್ತು ದಿನನಿತ್ಯದ ಕೆಲಸಕ್ಕೆ ಇಂಟರ್ನೆಟ್‌ನ ಅಗತ್ಯತೆ ಹೆಚ್ಚಿದ್ದ ಕೆಲವು ಖಾಸಗಿ ಕಂಪೆನಿಗಳಲ್ಲಿ ನೆಟ್‌ಸೇವೆ ಸ್ಥಗಿತಗೊಂಡಿದ್ದರಿಂದ ದೈನಂದಿನ ಕೆಲಸಗಳಿಗೆ ತೊಂದರೆಯಾಯಿತು. ಸಂಪರ್ಕ ಸಾಧ್ಯವಾಗದ ಕಾರಣ ಕಚೇರಿಗಳಲ್ಲಿ ಸಿಬಂದಿಯ ಕೆಲಸವೂ ಎಂದಿಗಿಂತ ಕಡಿಮೆ ಇತ್ತು.

ನೆಟ್‌ ಇಜ್ಜಿ ಮಾರ್ರೆ
ಇಂಟರ್ನೆಟ್‌ ಸೇವೆ ಆರಂಭವಾದ ಅನಂತರ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಇದರಿಂದ ಇಂಟರ್ನೆಟ್‌ಗೆ ಯುಗಕ್ಕೆ ರೂಢಿಸಿಕೊಂಡಿದ್ದ ಹಲವರು ನೆಟ್‌ ಇಲ್ಲದೆ ಪರದಾಡುವಂತಾಯಿತು. ಸ್ನೇಹಿತರ ವಲಯ, ಮನೆಗಳಲ್ಲಿ, ಫೋನ್‌ ಮುಖಾಂತರ ವ್ಯವಹರಿಸುವಾಗ ನೆಟ್‌ ಇಜ್ಜಿ ಮಾರ್ರೆ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next