Advertisement

NH169 ಸಂತ್ರಸ್ತ ಭೂಮಾಲಕರ ಎಚ್ಚರಿಕೆ: 6 ದಿನದೊಳಗೆ ಪರಿಹಾರ ಒದಗಿಸದಿದ್ದರೆ ಹೆದ್ದಾರಿ ತಡೆ

12:50 AM Aug 31, 2023 | Team Udayavani |

ಮಂಗಳೂರು: ಇದುವರೆಗೆ 7 ದಿನ ಕಾಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದು, ನಮ್ಮ ಭೂಮಿಗೆ ಹೈಕೋರ್ಟ್‌ ನಿರ್ದೇಶನದಂತೆ ಸರಿಯಾದ ಪರಿಹಾರ ನೀಡುವುದಕ್ಕೆ ಮುಂದಿನ 6 ದಿನ ಕಾಲಾವಕಾಶ ಕೊಡುತ್ತೇವೆ. ತಪ್ಪಿದರೆ ಶಾಸಕರ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಭೂಸ್ವಾಧೀನಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ, ಅಷ್ಟೇ ಅಲ್ಲ ರಾ.ಹೆ. 169ರ ಅಲ್ಲಲ್ಲಿ ಆಯಾ ಗ್ರಾಮದವರು ರಸ್ತೆ ತಡೆ ಮಾಡುತ್ತೇವೆ ಎಂದು ರಾ.ಹೆ. 169k ಚತುಷ್ಪಥ ಯೋಜನೆಗೆ ಭೂಮಿ ಕಳೆದುಕೊಂಡ ಭೂಮಾಲಕರು ಎಚ್ಚರಿಸಿದ್ದಾರೆ.

Advertisement

ಭೂಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಹೆಚ್ಚಿನ ದರ ಕೇಳಿಲ್ಲ, ಮಾರುಕಟ್ಟೆ ದರದಂತೆಯೇ ಭೂಸ್ವಾಧೀನಾಧಿಕಾರಿಯೇ ನಿಗದಿ ಪಡಿಸಿದ ದರದ ಅನ್ವಯ ಪರಿಹಾರ ಕೇಳುತ್ತಿದ್ದೇವೆ. ಅದಕ್ಕೂ ಹೈಕೋರ್ಟ್‌ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಅನುಮೋದನೆ ಸಿಕ್ಕಿರುತ್ತದೆ. ನ್ಯಾಯಯುತ ಪರಿಹಾರವನ್ನಷ್ಟೇ ಕೊಡಿ ಎಂದರು.

ಸಂಸದರ ನಿರಾಸಕ್ತಿ
ದ.ಕ. ಹಾಗೂ ಉಡುಪಿ ಸಂಸದರ ವ್ಯಾಪ್ತಿಗೆ ಬರುವ ವಿಚಾರವಿದು, ಅವರು ಕಳೆದ 8 ವರ್ಷಗಳಲ್ಲಿ ತಮ್ಮ ವ್ಯಾಪ್ತಿಯ ಭೂಮಾಲಕರಿಗೆ ನ್ಯಾಯ ಒದಗಿಸುವುದು ಹಾಗೂ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿತ್ತು, ಆದರೆ ಆ ಕೆಲಸ ಮಾಡಿಲ್ಲ. ಬದಲಾಗಿ ಅವರು ಕೆಲವರಿಗಷ್ಟೇ ಬೇಕಾಗಿ ಕೆಲಸ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.

ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಮುಂಭಾಗದಲ್ಲೇ ವಿಧಾನಸಭಾಧ್ಯಕ್ಷರು ಎರಡು ಬಾರಿ ಹಾದು ಹೋಗಿದ್ದಾರೆ. ಯಾವುದೇ ಶಾಸಕರು, ಸಂಸದರು ಭೇಟಿಯಾಗಿಲ್ಲ. ಕಮಿಷನರ್‌, ಜಿಲ್ಲಾಧಿಕಾರಿಯವರೂ ಬಂದಿಲ್ಲ. ಇನ್ನು ಕೆಲವರು ನಮ್ಮನ್ನು ದೇಶದ್ರೋಹಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದ ಅವರು, ನ್ಯಾಯಕ್ಕಾಗಿ ಇನ್ನು 6 ದಿನ ಕಾಯುತ್ತೇವೆ, ಬಳಿಕ ಎಲ್ಲ ಗ್ರಾಮದವರು ಅವರವರ ವ್ಯಾಪ್ತಿಯಲ್ಲಿ ಹೆದ್ದಾರಿ ತಡೆ ಮಾಡಲಿದ್ದೇವೆ ಎಂದರು.

ಸಂಸದರಿಗೆ ಆರಂಭದಲ್ಲೇ ಮನವಿ ಮಾಡಿದ್ದೇವೆ, ಅವರು ನಮ್ಮನ್ನು ಅವಮಾನ ಮಾಡಿ ಕಳುಹಿಸಿದ್ದಾರೆ, ಇನ್ನುಮುಂದೆ ಅವರ ಕಾಲಬುಡಕ್ಕೆ ಹೋಗುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next