ಬೆಂಗಳೂರು: ನಗರದ ಬಸವೇಶ್ವರ ವೃತ್ತದಿಂದ ಹೆಬ್ಟಾಳ ನಡುವೆ ಉಕ್ಕಿನ ಷಟ್ಪಥ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ನೀಡಿ 2017ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ನೀಡಿರುವ ಆದೇಶವನ್ನು ಈವರೆಗೂ ಪ್ರಶ್ನಿಸಲಾಗಿಲ್ಲ ಹಾಗೂ ಕಾಮಗಾರಿಗೆ ಅನುಮತಿ ನೀಡುವಂತೆ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಕ್ಕೆ ಬಿಡಿಎ ಮನವಿಯನ್ನೂ ಸಲ್ಲಿಸಿಲ್ಲ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರದ ಉದ್ದೇಶಿತ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ಪ್ರಶ್ನಿಸಿ 2016ರಲ್ಲಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಹಾಗೂ ಬಿಡಿಎ ಪರ ವಕೀಲರು ಈ ಮಾಹಿತಿ ನೀಡಿದರು.
ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ‘ಉಕ್ಕಿನ ಸೇತುವೆ ಕಾಮಗಾರಿಗೆ ತಡೆಯಾಜ್ಞೆ ನೀಡಿ ಚೆನ್ನೈನ ಎನ್‌ಜಿಟಿ ಪೀಠ 2017ರ ಮಾ.13ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಹಾಗೂ ಬಿಡಿಎ ಪರ ವಕೀಲರು, ಉಕ್ಕಿನ ಸೇತುವೆ ಕಾಮಗಾರಿಗೆ ತಡೆಯಾಜ್ಞೆ ನೀಡಿ ಎನ್‌ಜಿಟಿ ಹೊರಡಿಸಿರುವ ಆದೇಶವನ್ನು ಈವರೆಗೂ ರಾಜ್ಯ ಸರ್ಕಾರ ಪ್ರಶ್ನಿಸಿಲ್ಲ. ಅಲ್ಲದೇ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಮುಂದೆ ಕಾಮಗಾರಿಗೆ ಅನುಮತಿ ನೀಡುವಂತೆ ಬಿಡಿಎ ಮನವಿಯನ್ನೂ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜೂನ್ ತಿಂಗಳಿಗೆ ಮುಂದೂಡಿತು.
ಪ್ರಕರಣವೇನು?: 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 1,800 ಕೋಟಿ ರೂ. ವೆಚ್ಚದಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಟಾಳ ಮೇಲ್ಸೇತುವರೆಗೆ ಉಕ್ಕಿನ ಷಟ್ಪಥ ಮೇಲ್ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿತ್ತು. ಆದರೆ, ಯೋಜನೆ ಜಾರಿ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಹಾಗೂ ಅಹವಾಲುಗಳನ್ನು ಪಡೆದುಕೊಂಡಿಲ್ಲ. ಜತೆಗೆ ಕಾಮಗಾರಿಗಾಗಿ ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆಯಲಾಗಿಲ್ಲ. ಹೀಗಾಗಿ ಯೋಜನೆ ಕೈಬಿಡುವಂತೆ ಸರ್ಕಾರ ಹಾಗೂ ಬಿಡಿಎಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಯೋಜನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಇದರಿಂದ ಪ್ರಕರಣ ಎನ್‌ಜಿಟಿ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿ, ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದ ಎನ್‌ಜಿಟಿ, ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಾಮಗಾರಿ ಮುಂದುವರಿಸದಂತೆ 2017ರ ಮಾರ್ಚ್‌ನಲ್ಲಿ ಆದೇಶಿಸಿತ್ತು.
ಉಕ್ಕಿನ ಸೇತುವೆ ಯೋಜನೆಗೆ ಸಂಬಂಧಿಸಿದಂತೆ ಪರಿಸರದ ಮೇಲಿನ ಪರಿಣಾಮ ಕುರಿತು ವರದಿ ನೀಡುವಂತೆ ಹೈಕೋರ್ಟ್ ಹೇಳಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರವು ಸಾರ್ವಜನಿಕರ ಅಭಿಪ್ರಾಯ ಪಡೆದು ಯೋಜನೆ ಕೈಗೆತ್ತಿಕೊಳ್ಳಲಿದ್ದು, ಎಲ್ಲಾ ಮಾಹಿತಿಯೂ ಸಾರ್ವಜನಿಕರ ಚರ್ಚೆಗೆ ಮುಕ್ತವಾಗಿರಲಿದೆ.
ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ