Advertisement

ಎನ್‌ಜಿಒಗಳಿಗೆ ನಗರದ ಪ್ರಗತಿ ಬೇಕಿಲ್ಲ!

11:42 AM Sep 27, 2017 | Team Udayavani |

ಬೆಂಗಳೂರು: ಕೆಲವು ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಬೆಂಗಳೂರು ಅಭಿವೃದ್ಧಿಯಾಗಬಾರದೆಂಬ ದುರುದ್ದೇಶದಿಂದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ)ಕ್ಕೆ ಹೋಗುತ್ತಿವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆರೋಪಿಸಿದ್ದಾರೆ.

Advertisement

ಬಿಬಿಎಂಪಿ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡರ ಸೊಸೆ “ಮಹಾತ್ಯಾಗಿ ಲಕ್ಷ್ಮೀದೇವಿ’ ಅವರ 10 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿಗೆ ತಜ್ಞರ ಸಮಿತಿ ರಚಿಸಿದ್ದು, ಅಧಿಕಾರಿಗಳ ಜತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಕೂಡ ಸೇರಿಸಿಕೊಳ್ಳಲಾಗಿದೆ. ಸಮಿತಿಯಲ್ಲಿದ್ದು ಆಗಬೇಕಾದ ಕೆಲಸಗಳ ಕುರಿತು ಸಲಹೆ ಸೂಚನೆ ಕೊಡುವ ಬದಲು, ಕೆಲ ಎನ್‌ಜಿಒಗಳು ಎನ್‌ಜಿಟಿ ಮೊರೆ ಹೋಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿತೈಷಿಗಳಲ್ಲ, ಶತ್ರುಗಳು: ಬೆಂಗಳೂರಿನ ಅಭಿವೃದ್ಧಿ ಆಗಬಾರದೆಂಬ ಉದ್ದೇಶದಿಂದಲೇ ಈ ಕೆಲಸ ಮಾಡುತ್ತಿದ್ದಾರೆ. ಅವರು ಹಿತೈಷಿಗಳಲ್ಲ, ವೈರಿಗಳು. ಬೆಂಗಳೂರಿಗೆ ಒಳ್ಳೆಯದಾಗಬಾರದು. ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು. ಬಂಡವಾಳ ಹೂಡಿಕೆದಾರು ರಾಜ್ಯವನ್ನು ಬಿಟ್ಟು ಮುಂಬೈ, ಹೈದರಾಬಾದ್‌ಗಳಿಗೆ ಹೋಗಲಿ ಎಂಬ ದುರುದ್ದೇಶ ಹೊಂದಿರುವ ಎನ್‌ಜಿಒಗಳು ಇಂಥ ಕೃತ್ಯಗಳಲ್ಲಿ ಭಾಗಿಯಾಗಿವೆ ಎಂಬ ಸಂಶಯ ನನಗಿದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಲ್ಪ ತಾಳ್ಮೆಯಿಂದಿರಿ: ಬೆಂಗಳೂರು ನಗರಾಭಿವೃದ್ಧಿಗೆ ಈ ಹಿಂದಿನ ಯಾವುದೇ ಸರ್ಕಾರಗಳು ಕೊಡದಷ್ಟು ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನೀಡಿದೆ. ಪರಿಣಾಮ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹೀಗಿದ್ದರೂ ಬಿಜೆಪಿಯವರು “ಅಭಿವೃದ್ಧಿ ಎಲ್ಲಾಗುತ್ತಿದೆ’ ಎಂದು ಪ್ರಶ್ನೆ ಮಾಡುತ್ತಾರೆ. ಕೆಲಸ ಪೂರ್ಣ ಆಗುವವರೆಗೂ ಸ್ವಲ್ಪ ತಾಳ್ಮೆಯಿಂದ ಕಾಯಬೇಕು,’ ಎಂದ ಸಚಿವರು, ಈ ಬಾರಿ ಮಳೆ ಬಂದಾಗ ಸಾಕಷ್ಟು ಸಮಸ್ಯೆ ಎದುರಾಗಿತ್ತು.

ಹಲವು ಮನೆಗಳಿಗೆ ನೀರು ನುಗ್ಗಿತ್ತು. ಹಿಂದಿನ ಸರ್ಕಾರಗಳು ಸರಿಯಾಗಿ ಕೆಲಸ ಮಾಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆದಷ್ಟು ಸಮಸ್ಯೆಗಳನ್ನು ನಿವಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಜತೆಗೆ ಕಾಂಕ್ರಿಟ್‌ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಲಿದ್ದೇವೆ,’ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಜಯನಗರ ಶಾಖೆಯ ಸೌಮ್ಯನಾಥ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಮೇಯರ್‌ ಜಿ.ಪದ್ಮಾವತಿ ಮಹಾತ್ಯಾಗಿ ಲಕ್ಷ್ಮೀದೇವಿ ಅವರ ಕಂಚಿನ ಪ್ರತಿಮೆ ಅನಾವರಣ ಮಾಡಿದರು. ಇದಕ್ಕೂ ಮುನ್ನ ಕೋರಮಂಗಲದಲ್ಲಿರುವ ಲಕ್ಷ್ಮೀದೇವಿ ಅವರ ಸಮಾಧಿ ಸ್ಥಳದಿಂದ ಆರಂಭಗೊಂಡ ಜ್ಯೋತಿ ಮೆರವಣಿಗೆ ಬಿಬಿಎಂಪಿ ಕೇಂದ್ರ ಕಚೇರಿ ವರೆಗೆ ನಡೆಯಿತು. ಸಮಾರಂಭದಲ್ಲಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಆಯುಕ್ತ ಮಂಜನಾಥ್‌ ಪ್ರಸಾದ್‌ ಉಪಸ್ಥಿತರಿದ್ದರು. 

ಹೆದ್ದಾರಿಗಳಲ್ಲೂ ಮರ ತಬ್ಬಿಕೊಳ್ಳಿ: “ಸ್ಟೀಲ್‌ ಬ್ರಿಡ್ಜ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ ಮರವನ್ನು ತಬ್ಬಿಕೊಂಡು ವಿರೋಧಿಸಿದ್ದರು. ಮಾತೆತ್ತಿದರೆ ಮರ ಕಡಿಯುತ್ತಾರೆ ಎಂದು ಆರೋಪ ಮಾಡಿದ್ದರು. ಕಾವೇರಿ ಜಂಕ್ಷನ್‌ನಿಂದ ಪಿಬಿಆರ್‌ ರಾವ್‌ ರಸ್ತೆವರೆಗೆ ಮತ್ತು ಸ್ಯಾಂಕಿ ಟ್ಯಾಂಕಿ ಬಳಿ ರಸ್ತೆ ವಿಸ್ತರಣೆ ಮಾಡಬೇಕಿದೆ.

ಸಾರ್ವಜನಿಕರ ಅನುಕೂಲಕ್ಕೆ ಕೈಗೊಳ್ಳುವ ಈ ಕಾರ್ಯದ ವೇಳೆ ಕೆಲವು ಮರಗಳನ್ನು ಕಡಿಯಲು ಅನುಮತಿ ನೀಡಬೇಕು ಎಂದು ಹೈಕೋರ್ಟ್‌ಗೆ ಅಫಿಡೇವಿಟ್‌ ಹಾಕಿ ಅನುಮತಿ ಪಡೆದು ಅಲ್ಲಿನ ಮರಗಳನ್ನು ಕಡಿಸಲಾಗಿತ್ತು. ಆದರೂ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಷ್ಟು ಮರಗಳನ್ನು ಕಡಿಯಲಾಗಿದೆ. ಅವು ಮರಗಳು ಇಲ್ಲವಾ? ಬಿಜೆಪಿಯವರೇಕೆ ಅಲ್ಲಿಗೆ ಹೋಗಿ ಮರಗಳನ್ನು ಅಪ್ಪಿಕೊಳ್ಳುತ್ತಿಲ್ಲ? ಎಂದು ಜಾರ್ಜ್‌ ಪ್ರಶ್ನಿಸಿದರು.

ರಾಜಕೀಯ ಬೇಡ: ಕಸದ ಸಮಸ್ಯೆ ವಿಚಾರವಾಗಿ ಪರೋಕ್ಷವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಜಾರ್ಜ್‌, “ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದರೂ, ಅದನ್ನು ಕೆಲವರು ವಿರೋಧಿಸುತ್ತಾರೆ,’ ಎಂದು ಟೀಕಿಸಿದರು. ಹಾಗೇ “ನಗರದ ಅಭಿವೃದ್ಧಿ ವಿಚಾರ ಬಂದಾಗ ಯಾರೂ ರಾಜಕೀಯ ಮಾಡಬಾರದು. ಅಭಿವೃದ್ಧಿ ಒಂದೇ ನಮ್ಮ ಮಂತ್ರವಾಗಬೇಕು. ಇದರಲ್ಲಿ ರಾಜಕೀಯ ಬೇಡ, ರಾಜಕೀಯವೇನಿದ್ದರೂ ಚುನಾವಣೆಗೆ ಸೀಮಿತವಾಗಿರಲಿ,’ ಎಂದು ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next