ಗಾಂಧಿನಗರದಲ್ಲಿ ಇದುವರೆಗೆ ನೂರಾರು ಸಿನಿಮಾಗಳಿಗೆ ಕೀ ಬೋರ್ಡ್ ಪ್ಲೇಯರ್ ಆಗಿ ಕೆಲಸ ಮಾಡಿರುವ ಎಸ್.ಪ್ರದೀಪ್ ವರ್ಮ, ಈಗ “ಡಮ್ಕಿ ಢಮಾರ್’ ಮೂಲಕ ಹೀರೋ ಆಗಿದ್ದಾರೆ. ಆ ಚಿತ್ರ ಅಕ್ಟೋಬರ್ 27 ರಂದು ತೆರೆಗೆ ಬರುತ್ತಿದೆ. ಪ್ರದೀಪ್ ವರ್ಮ ಅವರಿಲ್ಲಿ ಕೇವಲ ನಾಯಕರಾಗಿ ಕಾಣಿಸಿಕೊಂಡಿಲ್ಲ. ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ, ಸಂಗೀತ ನೀಡಿದ್ದಾರೆ, ನೃತ್ಯ ನಿರ್ದೇಶನ ಮಾಡಿದ್ದಾರೆ, ಕಾರ್ಯಕಾರಿ ನಿರ್ಮಾಪಕರೂ ಆಗಿದ್ದಾರೆ.
ಇದರೊಂದಿಗೆ ಅವರೇ ನಿರ್ದೇಶನ ಮಾಡಿದ್ದಾರೆ. ಮೊದಲ ಸಲ ಈ ಎಲ್ಲಾ ಜವಾಬ್ದಾರಿ ಹೊತ್ತುಕೊಂಡು ಈ ಚಿತ್ರ ಮಾಡಿರುವ ಪ್ರದೀಪ್ ವರ್ಮ ಅವರಿಗೆ ಸಿನಿಮಾ ಮೇಲೆ ಅತೀವ ನಂಬಿಕೆ ಇದೆ. ಅಂದಹಾಗೆ, ಇದೊಂದು ಯೂತ್ಸ್ ಕುರಿತ ಕಥೆ. “ವಾರ ಪೂರ್ತಿ ದುಡಿದು ಮೋಜು ಮಾಡಲು ವಿಹಾರಕ್ಕೆ ಹೋದಾಗ ಎಚ್ಚರ ತಪ್ಪಿದರೆ, ಏನೆಲ್ಲಾ ಅನಾಹುತಗಳಾಗುತ್ತವೆ ಅನ್ನುವುದು ಈ ಚಿತ್ರದ ಕಥೆ. ಇಲ್ಲಿ ಹಾರರ್ ಇದೆ, ಥ್ರಿಲ್ಲರ್ ಇದೆ, ಒಂದಷ್ಟು ಸಸ್ಪೆನ್ಸ್ ಕೂಡ ಇದೆ.
ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ’ ಎನ್ನುತ್ತಾರೆ ಪ್ರದೀಪ್ ವರ್ಮ. ಅಂದಹಾಗೆ, “ಡಮ್ಕಿ ಢಮಾರ್’ ಶೀರ್ಷಿಕೆ ಆಕರ್ಷಣೆಯಾಗಿರಲಿ ಅಂತ ಇಡಲಾಗಿದೆಯಾದರೆ, ಕಥೆಗೂ, ಶೀರ್ಷಿಕೆಗೆ ಯಾವುದೇ ಸಂಬಂಧವಿಲ್ಲ. ಬೆಂಗಳೂರು, ಚಿಕ್ಕಮಗಳೂರು, ಕೊಪ್ಪ, ಮಲೇಷ್ಯಾದಲ್ಲಿ ಹಾಡು, ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ವಿವರ ಕೊಡುತ್ತಾರೆ ಪ್ರದೀಪ್ ವರ್ಮ. ಚಿತ್ರಕ್ಕೆ ಚೈತ್ರಾ ಮತ್ತು ಅನುಷ್ಕಾಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಯು’ ಪ್ರಮಾಣ ಪತ್ರ ನೀಡಿದೆ. ಸಾಯಿ ಸರ್ವೇಶ್ ಸಾಹಿತ್ಯ ಬರೆದರೆ, ಎಸ್.ಕೆ.ಶ್ರೀನಿವಾಸ್ ಸಂಭಾಷಣೆ ಬರೆದಿದ್ದಾರೆ. ವೇಲ್ಸ್ ಕ್ಯಾಮೆರಾ ಹಿಡಿದರೆ, ತಿಪ್ಪೇಸ್ವಾಮಿ ಮತ್ತು ಕುಮಾರ್ ಕತ್ತರಿ ಹಾಕಿದ್ದಾರೆ. ಚಿತ್ರದಲ್ಲಿ ಅಂಬಿಕಾ ಕಶ್ಯಪ್, ಸುನಿಲ್‌ಕುಮಾರ್, ರಘುನಾಥ್ ಇತರರು ನಟಿಸಿದ್ದಾರೆ. ಇನ್ನು, ಮಗನ ಆಸೆಗೆ ನಿಂತ ಸದ್ಗುಣ ಮೂರ್ತಿ ಹಾಗೂ ಸೋದರಿ ಮೈತ್ರಿ ಚಂದ್ರು ಚಿತ್ರ ನಿರ್ಮಿಸಿದ್ದಾರೆ.