Advertisement

ಮುಂದಿನ ಸಲ ಉಳಿತಾಯ ಬಜೆಟ್‌: ಸಿಎಂ

11:11 PM Jul 21, 2023 | Team Udayavani |

ಬೆಂಗಳೂರು: ಎಪ್ಪತ್ತಾರು ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ನೀಡಿದ್ದೇವೆ. ಐದು ಗ್ಯಾರಂಟಿಗಳಿಗೆ ಅನುದಾನ ಮೀಸಲಿಟ್ಟಿದ್ದು, ಈಗಾಗಲೇ ಅನುಷ್ಠಾನದ ವಿವಿಧ ಹಂತದಲ್ಲಿವೆ. ಹೀಗಿರುವಾಗ ದಿವಾಳಿ ಹೇಗೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಶುಕ್ರವಾರ ಮೇಲ್ಮನೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ವಾಸ್ತವವಾಗಿ ದೇಶ ಆರ್ಥಿಕವಾಗಿ ದಿವಾಳಿ ಆಗುತ್ತಿರುವುದು ಪ್ರಧಾನಿ ಮೋದಿ ಅವರಿಂದ. ಕಳೆದ 9 ವರ್ಷಗಳಲ್ಲಿ 118 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕದ 75 ವರ್ಷಗಳ ಸಾಲ 53.11 ಲಕ್ಷ ಕೋಟಿ ರೂ. ಆಗಿದೆ. ಅದೇನೇ ಇರಲಿ, ಮುಂದಿನ ಬಾರಿ ನಾವು ಉಳಿತಾಯದ ಬಜೆಟ್‌ ಮಂಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಪ್ರತಿ ಲೀಟರ್‌ಗೆ 78.57 ರೂ. ಇದ್ದ ಪೆಟ್ರೋಲ್‌ ಬೆಲೆ ಇಂದು 107 ರೂ. ಆಗಿದೆ. ಅಡುಗೆ ಅನಿಲಕ್ಕೆ ಬರುತ್ತಿದ್ದ ಸಬ್ಸಿಡಿ 2020ರಿಂದ ನಿಂತುಹೋಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೆಲ್ಲದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಾಗಾಗಿ ಆ ಜೇಬು ತುಂಬಿಸುವ ಕೆಲಸ ಗ್ಯಾರಂಟಿಗಳಿಂದ ಆಗುತ್ತಿದೆ ಎಂದು ಸಮರ್ಥನೆ ನೀಡಿದರು.

“ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ…”
ವಿಪಕ್ಷಗಳ ಸದಸ್ಯರೆಲ್ಲರೂ ಬಹಿಷ್ಕರಿಸಿದ್ದು, ಬಿಜೆಪಿಯ ಎಚ್‌. ವಿಶ್ವನಾಥ್‌ ಮತ್ತು ಜೆಡಿಎಸ್‌ನ ಮರಿತಿಬ್ಬೇಗೌಡ ಮಾತ್ರ ಹಾಜರಾಗಿದ್ದಾರೆ. ಅವರು ತಾಂತ್ರಿಕವಾಗಿ ವಿಪಕ್ಷಲ್ಲಿರಬಹುದು. ಆದರೆ ವಾಸ್ತವವಾಗಿ ಆ ಪಕ್ಷಗಳ ನಿಲುವಿಗೆ ವಿರುದ್ಧವಾಗಿಯೇ ಇದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌. ವಿಶ್ವನಾಥ್‌, ನಾನು ಇಲ್ಲಿರುವುದು ಸುಮ್ಮನೆ. ಅಲ್ಲಿರುವುದು ನಮ್ಮನೆ’ ಎಂದು ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರತ್ತ ಕೈ ತೋರಿಸಿದರು. ಅಲ್ಲದೆ, ಮುಖ್ಯಮಂತ್ರಿಗಳು ಬಜೆಟ್‌ ಮೇಲೆ ಉತ್ತರ ನೀಡುವಾಗ ಬ್ಯಾಂಡ್‌ಸೆಟ್‌ ಇದ್ದಿದ್ದರೆ ಕುಣಿಯೋಣ ಅನಿಸಿತು ಎಂದು ಸಂತಸ ವ್ಯಕ್ತಪಡಿಸಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ, ಇಲ್ಲಿ ಬೇಡ ಹೊರಗೆ ಹೋಗಿ ಕುಣಿಯಿರಿ ಎಂದು ಸೂಚ್ಯವಾಗಿ ಹೇಳಿದರು.

Advertisement

ಗಾಂಧಿ ಕೊಂದವರೇ ಗಾಂಧಿ ಮುಂದೆ ಪ್ರತಿಭಟನೆ!
ಗಾಂಧಿ ಕೊಂದ ವಂಶಸ್ಥರು ಈಗ ಅದೇ ಮಹಾತ್ಮ ಗಾಂಧಿ ಪ್ರತಿಮೆ ಎದುರು ನ್ಯಾಯಕೊಡಿಸುವಂತೆ ಪ್ರತಿಭಟನೆಗೆ ಕುಳಿತಿರುವುದು ದುರಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದರು.

ಸತ್ಯ, ಅಹಿಂಸೆಗಾಗಿ ಹೋರಾಟ ಮಾಡಿದವರು ಮಹಾತ್ಮ ಗಾಂಧೀಜಿ. ಅವರನ್ನು ಕೊಂದ ಗೋಡ್ಸೆ ವಂಶಸ್ಥರು ಬಿಜೆಪಿಯವರು. ಸಾಮರಸ್ಯ ಕದಡುವ ಆ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next