ಜಿನೇವಾ: 2023-2027 ರ ವರೆಗಿನ 5 ವರ್ಷಗಳು ಇತ್ತೀಚಿನ ವರ್ಷಗಳಲ್ಲೇ ಅತೀ ಹೆಚ್ಚು ತಾಪಮಾನದಿಂದ ಕೂಡಿರುವ ವರ್ಷಗಳಾಗಿರಲಿವೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದೆ. ಹಸಿರುಮನೆ ಅನಿಲಗಳು ಮತ್ತು ಎಲ್ ನಿನೋ (ಸಾಗರದ ಮೇಲ್ಮೈ ಉಷ್ಣಾಂಶ)ದ ಏರಿಕೆಯಿಂದಾಗಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಯಾಗಲಿದೆ ಎಂದು ವಿಶ್ವ ಸಂಸ್ಥೆ ಹೇಳಿಕೆ ನೀಡಿದೆ.
ಮುಂದಿನ 5 ವರ್ಷಗಳ ಅವಧಿಯಲ್ಲಿ ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿಯನ್ನೂ ಮೀರಿ ಜಾಗತಿಕವಾಗಿ ತಾಪಮಾನ ಏರಿಕೆಯಾಗುವ ಎಲ್ಲಾ ಸಂಭವವಿದೆ ಎಂದು ವಿಶ್ವಸಂಸ್ಥೆಯ ಅಧೀನದಲ್ಲಿರುವ ವಿಶ್ವ ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ.
2015-2022 ರ ನಡುವಿನ 8 ವರ್ಷಗಳನ್ನು ಅತ್ಯಂತ ತಾಪಮಾನದ ವರ್ಷಗಳೆಂದು ವಿಶ್ವ ಸಂಸ್ಥೆ ಪರಿಗಣಿಸಿತ್ತು. ಆದರೆ ಇನ್ನು ಮುಂಬರುವ 5 ವರ್ಷಗಳು ಅದಕ್ಕಿಂತಲೂ ತೀವ್ರವಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ.
2015ರ ಪ್ಯಾರಿಸ್ ಹವಾಮಾನ ಒಪ್ಪಂದದ ಪ್ರಕಾರ ವಿಶ್ವದ ರಾಷ್ಟ್ರಗಳು ತಾಪಮಾನವನ್ನು ಸರಾಸರಿ 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವ ಒಪ್ಪಂದವನ್ನು ಒಪ್ಪಿಕೊಂಡಿತ್ತು. 2022 ರಲ್ಲಿ ಜಾಗತಿಕವಾಗಿ 1.15 ಡಿ.ಸೆ ತಾಪಮಾನವಿತ್ತಾದರೂ ಮುಂದಿನ ದಿನಗಲಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಆದರೆ 2023-2027ರ ನಡುವಿನ ಯಾವುದಾದರೂ ಒಂದು ವರ್ಷ ಅಥವಾ ಮುಂಬರುವ ಎಲ್ಲಾ ವರ್ಷಗಳಲ್ಲಿಯೂ ಇದು 1.5 ಡಿಗ್ರಿ ಸೆಲ್ಸಿಯಸ್‌ನ ಗುರಿಯನ್ನು ಮೀರಿ 1.8 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:
Belagavi: CA ಓದು ಬಿಟ್ಟು ಕೃಷಿ ಸಾಧನೆ; ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಸಾಧಕಿ