ಹೊಸದಿಲ್ಲಿ: ಕೊರೊನಾ ವಿಷಯದಲ್ಲಿ ಮುಂದಿನ 40 ದಿನಗಳು ಅತ್ಯಂತ ಮಹತ್ವದ್ದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ಹಿಂದಿನ ಅಲೆಗಳನ್ನು ಗಮನಿಸುವುದಾದರೆ, ಪೂರ್ವ ಏಷ್ಯಾದಲ್ಲಿ ಕೊರೊನಾ ಅಲೆ ಕಾಣಿಸಿಕೊಂಡ 30 ರಿಂದ 35 ದಿನಗಳ ಬಳಿಕ ಭಾರತದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ಈಗಲೂ ಮುಂದಿನ 40 ದಿನಗಳು ಅತ್ಯಂತ ಪ್ರಮುಖ ಎಂದಿದ್ದಾರೆ.
ಆದರೆ, ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಈ ನಾಲ್ಕನೇ ಅಲೆಗೆ ಯಾವುದೇ ಆತಂಕ ಬೇಕಿಲ್ಲ. ಜನರಿಗೆ ತಗಲುವ ಸಾಧ್ಯತೆ ಕಡಿಮೆ. ಒಂದು ವೇಳೆ ಬಂದರೂ, ಆಸ್ಪತ್ರೆಗೆ ದಾಖಲಾಗುವವರ ಮತ್ತು ಸಾವನ್ನಪ್ಪುವವರ ಸಂಖ್ಯೆ ತೀರಾ ಕಡಿಮೆ ಇರಲಿದೆ ಎಂದಿದೆ. ಸದ್ಯ ಚೀನ ಮತ್ತು ದಕ್ಷಿಣ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಹೀಗಾಗಿ, ಕೇಂದ್ರ ಸರಕಾರ ಚೀನ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್, ಥೈಲ್ಯಾಂಡ್ ಮತ್ತು ಸಿಂಗಾಪುರದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ. ಜತೆಗೆ, ಏರ್ ಸುವಿಧಾ ಆ್ಯಪ್ ಅನ್ನು ಮರುಪರಿಚಯಿಸಿ, ಇದಕ್ಕೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಎರಡು ದಿನಗಳಲ್ಲಿ ದಿಲ್ಲಿಗೆ ವಿದೇಶದಿಂದ ಬಂದ 39 ಪ್ರಯಾಣಿಕರಲ್ಲಿ ಕೊರೊನಾ ದೃಢಪಟ್ಟಿದ್ದು, ಗುರುವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸುವರು.