Advertisement

ಜನರ ವಿಶ್ವಾಸ ಗೆಲ್ಲುವಲ್ಲಿ ಪತ್ರಿಕೆಗಳು ಯಶಸ್ವಿ: ದೀಪಾ

11:07 AM Apr 27, 2019 | pallavi |

ಧಾರವಾಡ: ಮಾಧ್ಯಮ ಲೋಕದಲ್ಲಿ ಜನರ ವಿಶ್ವಾಸಾರ್ಹತೆ ಉಳಿಸಿಕೊಂಡು ಹೋಗುವಲ್ಲಿ ಪತ್ರಿಕೆಗಳು ಇಂದಿಗೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಆಲೂರು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಧಾರವಾಡ ಜರ್ನಲಿಸ್ಟ್‌ ಗಿಲ್ಡ್ ಉದ್ಘಾಟಿಸಿ ಅವರು ಮಾತನಾಡಿದರು.

ಬಹಳ ವರ್ಷಗಳ ಹಿಂದೆ ಮಾಧ್ಯಮ ಲೋಕಕ್ಕೂ ಇಂದಿನ ಮಾಧ್ಯಮ ಲೋಕಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ವಿಜ್ಞಾನ ತಂತ್ರಜ್ಞಾನ ಪರಿಣಾಮ ಇಂದು ಮಾಧ್ಯಮಗಳು ಹೆಚ್ಚು ಸದ್ದು ಮಾಡುತ್ತಿವೆ. ಸುದ್ದಿ, ಮಾಹಿತಿ ತಿಳಿದುಕೊಳ್ಳಲು ಅಂದಿನ ಕಾಲದಲ್ಲಿ ನಾವು ಕೆಲವೇ ಕೆಲವು ಪತ್ರಿಕೆಗಳನ್ನು ಅನುಸರಿಸುತ್ತಿದ್ದೆವು. ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ವಿಶೇಷವಾಗಿ ಪತ್ರಿಕೆಗಳು ಜನರ ವಿಶ್ವಾಸಾರ್ಹತೆ ಉಳಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು.

ಪತ್ರಕರ್ತರು ಇಂದು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುವುದನ್ನು ನೋಡಿದ್ದೇವೆ. ಅದರ ನಡುವೆಯೂ ಧಾರವಾಡ ಪತ್ರಕರ್ತರು ಒಂದು ಶಿಸ್ತುಬದ್ಧ ಸಂಘ ಕಟ್ಟಿಕೊಂಡು, ರಚನಾತ್ಮಕ ಕೆಲಸಗಳನ್ನು ಮಾಡಲು ಮುಂದಡಿ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಪತ್ರಕರ್ತರಿಗಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅರ್ಹರು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭ್ರಮೆ ಬೇಡ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಮಾತನಾಡಿ, ಪತ್ರಕರ್ತರು ಭ್ರಮೆಯಲ್ಲಿ ತೇಲಬಾರದು. ನಾವು ಯಾರೂ ಸಂವಿಧಾನಕ್ಕಿಂತ ದೊಡ್ಡವರಲ್ಲ. ರಚನಾತ್ಮಕ ಕೆಲಸಗಳ ಮುಖಾಂತರ ಸಮಾಜ ಕಟ್ಟುವ ಕೆಲಸ ಮಾಡೋಣ ಎಂದರು.

Advertisement

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಡಿಯಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಹಿತ ರಕ್ಷಿಸುವಲ್ಲಿ ಸಕ್ರಿಯವಾದ ಕೆಲಸ ಮಾಡುತ್ತಿದೆ. ಈ ವರ್ಷ 400ಕ್ಕೂ ಹೆಚ್ಚು ಪತ್ರಕರ್ತರನ್ನು ಸಂಘದ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಮುಖ್ಯಸ್ಥ ಪಿ.ವಿ. ಹಿರೇಮಠ ಮಾತನಾಡಿ, ಇತ್ತೀಚೆಗೆ ಸುದ್ದಿ ಮಾಧ್ಯಮಗಳಲ್ಲಿ ರಾಜಕೀಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ, ಪರಿಸರ ಉಳಿಸುವ ನಿಟ್ಟಿನಲ್ಲಿ ಹೆಚ್ಚು ವರದಿ, ವಿಶ್ಲೇಷಣೆ ಬರವಂತಾಗಲಿ ಎಂದು ಆಶಿಸಿದರು. ಜಿಲ್ಲಾ ಹಿರಿಯ ವಾರ್ತಾ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಪತ್ರಕರ್ತರ‌ ಹಿತ ಕಾಯುವಲ್ಲಿ ಸರಕಾರ, ವಾರ್ತಾ ಇಲಾಖೆ ಬದ್ಧವಾಗಿದ್ದು, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯಧನ ನೀಡುತ್ತಿದೆ ಎಂದರು.

ಧಾರವಾಡ ಜರ್ನಲಿಸ್ಟ್‌ ಗಿಲ್ಡ್ನ ಅಧ್ಯಕ್ಷ ಪುಂಡಲೀಕ ಹಡಪದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಬಸವರಾಜ ಹೊಂಗಲ ಪ್ರಾಸ್ತಾವಿಕ ಮಾತನಾಡಿದರು. ಗಿಲ್ಡ್ನ ಹಿರಿಯ ಸದಸ್ಯರಾದ ಸುಧೀಂದ್ರ ಪ್ರಸಾದ್‌, ಮಂಜುನಾಥ ಅಂಗಡಿ, ನಿಜಗುಣಿ ದಿಂಡಲಕೊಪ್ಪ ಇದ್ದರು. ಬಸವರಾಜ ಹಿರೇಮಠ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಮಂಜುನಾಥ ಭದ್ರಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next