Advertisement
ಉಳ್ಳಾಲ: ಖಾಕಿ ಹಾಕಿ ಸಮಾಜ ಘಾತಕರನ್ನು ಮಟ್ಟ ಹಾಕಬೇಕು ಎಂದುಕೊಂಡಿದ್ದವರಿಗೆ ಒಲಿದದ್ದು ದೇಶಸೇವೆಯ ಭಾಗ್ಯ.. ಇದು ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಹೂಹಾಕುವ ಕಲ್ಲು ನಿವಾಸಿ ಮನೋಜ್ ಕುಮಾರ್ ಗಟ್ಟಿಯ ಅವರ ಬದುಕಿನ ಕಥೆ. ಕಳೆದ 19 ವರ್ಷಗಳಿಂದ ಗಡಿ ಭದ್ರತಾಪಡೆಯಲ್ಲಿ (ಬಿಎಸ್‌ಎಫ್) ಸೇವೆ ಸಲ್ಲಿಸುತ್ತಿರುವ ಮನೋಜ್ ಈಗ ಪಾಕಿಸ್ಥಾನ ಗಡಿಯಲ್ಲಿ ದೇಶ ಕಾಯುವ ಕಾಯಕದಲ್ಲಿದ್ದಾರೆ.
ಕೆಂಪು ಕಲ್ಲು ಕಡಿವ ಯಂತ್ರಕ್ಕೆ ಬೇಡಿಕೆ ಹೆಚ್ಚಿದ್ದ ವೇಳೆ ಶಿಕ್ಷಣ ಮೊಟಕುಗೊಳಿಸಿದ್ದ ಮನೋಜ್ ಕೆಂಪು ಕಲ್ಲು ಕತ್ತರಿಸುವ ಯಂತ್ರದ ಬಿಟ್ ತಯಾರಿಕೆಯ ವೆಲ್ಡಿಂಗ್ ಕಲಿಯುವ ಆಸಕ್ತಿಯಿಂದ ಕೇರಳದ ಕಣ್ಣೂರಿಗೆ ಸ್ನೇಹಿತರೊಂದಿಗೆ ತೆರಳಿದ್ದರು. ನೆರೆಮನೆಯ ತಾರಾನಾಥ್ ಅವರು ಊರಿಂದ ಬರುವಾಗ ತಂದಿದ್ದ ಪತ್ರಿಕೆಯೊಂದರಲ್ಲಿ ಸೇನಾ ನೇಮಕಾತಿ ಕುರಿತ ಸುದ್ದಿ ಅವರ ಬದುಕನ್ನೇ ಬದಲಿಸಿತು.
Related Articles
ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದ ಸೇನಾ ನೇಮಕಾತಿ ಕ್ಯಾಂಪ್‌ಗೆ ಹಾಜರಾಗಿದ್ದ ಮನೋಜ್ ಎಲ್ಲ ಸುತ್ತಿನ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಹೈಜಂಪ್‌ನಲ್ಲಿ ವಿಫಲರಾಗಿದ್ದರು. ಬಳಿಕ ನಿರಾಸೆಯಿಂದ ಊರಿಗೆ ಮರಳಿದ್ದ ಅವರಿಗೆ ವಾರದ ಬಳಿಕ ಸೇನಾ ಕಾರ್ಯಾಲಯದಿಂದ ಬಂದ ಕರೆಯಂತೆ ಬೆಳಗಾವಿಯ ಪೊಲೀಸ್ ಲೈನ್‌ನಲ್ಲಿ ನಡೆದ ಸೇನಾ ಸೇರ್ಪಡೆ ಕ್ಯಾಂಪ್‌ಗೆ ಸೇರುವ ಅವಕಾಶ ಸಿಕ್ಕಿತ್ತು. ಅದರಂತೆ ಗಡಿಭದ್ರತಾ ಪಡೆಗೆ ಆಯ್ಕೆಯಾಗಿದ್ದರು.
Advertisement
ಕನಸು ಬಿತ್ತಿದ್ದ ಶಿಕ್ಷಕ ಮುಡಿಪುವಿನ ಭಾರತೀ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಕುರ್ನಾಡು ಸರಕಾರಿ ಪ್ರೌಢಶಾಲೆಗೆ ಮನೋಜ್ ಸೇರಿದ್ದರು. ಈ ವೇಳೆ ಶಾಲಾ ಶಿಕ್ಷಕ ಬಸವರಾಜ್ ಪಲ್ಲಕ್ಕಿ ಬಾಲಕನಲ್ಲಿ ಪೊಲೀಸ್ ಅಥವಾ ಸೇನೆಗೆ ಸೇರುವ ಕನಸು ಬಿತ್ತಿದ್ದರು. ಇದೇ ಉತ್ಸಾಹದಿಂದ ಮನೋಜ್ ಅವರು ಮತ್ತಷ್ಟು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಾರ್ಥಕ ದೇಶಸೇವೆ
ಬಿಎಸ್‌ಎಫ್ಗೆ 1998ರಲ್ಲಿ ಸೇರ್ಪಡೆಯಾದ ಬಳಿಕ ಮನೋಜ್ ರಾಜಸ್ಥಾನದ ಜೋದ್ ಪುರದಲ್ಲಿ ತರಬೇತಿ ಪೂರ್ಣಗೊಳಿಸಿ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಿಯುಕ್ತಿಯಾದರು. 2003ರ ಬಳಿಕ ಜಮ್ಮು ಪೊಲೆರೋ ಕ್ಯಾಂಪ್ ಬಳಿಗೆ ನಿಯುಕ್ತಿಯಾಗಿದ್ದರು. 2005ರಿಂದ ಶ್ರೀಲಂಕಾದಲ್ಲಿ ಭಾರತೀಯ ಹೈಕಮಿಷನ್‌ಗೆ ಕಮಾಂಡೋ ಆಗಿ, 2008ರಿಂದ ರಾಜಸ್ಥಾನದ ಬಾಡ್ಮೀರಾ ಗಡಿಯಲ್ಲಿ, 2009ರಿಂದ ಛತ್ತೀಸ್‌ಗಢದ ನಕ್ಸಲ್ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸಿದ್ದಾರೆ. 2012ರಿಂದ 2015ರವೆಗೆ ಪಂಜಾಬ್ ಅಮೃತ್‌ಸರದ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 2015ರಿಂದೀಚೆಗೆ ರಜೌರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತಿಗೆ ಅವಕಾಶವಿದ್ದರೂ ದೇಶಸೇವೆ ಮುಂದುವರಿಸುವ ಇರಾದೆ ಹೊಂದಿದ್ದಾರೆ. ಮನೋಜ್ ಅವರ ತಂದೆ ಅವರು ಈಗಿಲ್ಲ. ತಾಯಿ ಜಯಂತಿ ಗಟ್ಟಿ, ಪತ್ನಿ ಹರ್ಷಿತಾ ಕೋಟೆಕಾರು, ಮಗಳು ಅದಿತಿ ಮತ್ತು 2 ವರ್ಷದ ನಿರಾಲಿಯೊಂದಿಗೆ ಮನೋಜ್ ಸಂಸಾರ ನಡೆಸುತ್ತಿದ್ದಾರೆ. ಅಣ್ಣ ನಿಧನ ಬಳಿಕ ಅವರ ಇಬ್ಬರು ಮಕ್ಕಳ ಜವಾಬ್ದಾರಿಯೂ ಮನೋಜ್ ಅವರ ಮೇಲಿದೆ . ಮಣ್ಣಿನ ರಾಶಿಯ ಅಡಿಯಲ್ಲಿದ್ದರೂ ಪ್ರತ್ಯುತ್ತರ
ಅಮೃತಸರದ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರಂತರ ಬಾಂಬ್ ದಾಳಿ ನಡೆಯುತ್ತಿತ್ತು. 2013ರಲ್ಲಿ ಸಾಂಬಾ ಸೆಕ್ಟರ್ ಮಂಗೂಚೌಕ್ ಬಳಿ ಕಾರ್ಯ ನಿರ್ವಹಿಸುತ್ತಿದ್ದಾಗ ಪಾಕಿಸ್ಥಾನಿ ಪಡೆಗಳು ನಾವಿದ್ದ ಪ್ರದೇಶಕ್ಕೆ ಬಾಂಬ್ ಹಾಕಿದ್ದು, 60 ಮೀಟರ್ ಅಂತರದಲ್ಲಿ ನಾವು ಏಳು ಜನ ಬದುಕಿದ್ದೆವು. ನಮ್ಮ ಟೆಂಟ್ ಮೇಲೆ ಮಣ್ಣಿನ ರಾಶಿ ಬಿದ್ದಿತ್ತು. ಆದರೂ ನಾವೂ ನಿರಂತರ ದಾಳಿ ನಡೆಸುತ್ತಿದ್ದೆವು. ನಕ್ಸಲ್ ದಾಳಿ ಧೂಳೀಪಟ
2012 ಜು.16ರಂದು ಛತ್ತೀಸ್‌ಘಡದ ಕಾಂಕೇರ್ ಜಿಲ್ಲೆಯ ಕೋಲ್ಯಾಬೇಡಾದಲ್ಲಿ ನಕ್ಸಲ್ ನಿಗ್ರಹ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಊರಿನಿಂದ ಕರ್ತವ್ಯಕ್ಕೆ ಮರಳಿದ ಸೇನಾಪಡೆಯವರನ್ನು ಕರೆದುಕೊಂಡು ಬರುತ್ತಿದ್ದ ವೇಳೆ 78 ಜನರ ಯೋಧರ ತಂಡದ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಕಮಾಂಡೋ ತರಬೇತಿ ಪಡೆದಿದ್ದ ನಾನು ಮತ್ತು ಸಹೋದ್ಯೋಗಿ ರವೀಂದರ್ ಈ ವೇಳೆ ತಂಡ ಲೀಡ್ ಮಾಡಿದ್ದೆವು. ಕಡಿದಾದ ಗುಡ್ಡ ಪ್ರದೇಶದಲ್ಲಿ ಮರಗಳ ಎಡೆಯಿಂದ ದಾಳಿ ನಡೆದಿತ್ತು. ದಾಳಿ ವೇಳೆ ಇಬ್ಬರನ್ನು ನಾವು ಕಳೆದುಕೊಂಡಿದ್ದು, ಪ್ರತಿ ದಾಳಿಯಲ್ಲಿ 20 ನಕ್ಸಲರು ಹತರಾಗಿದ್ದರು. ನಾನು ಎ.ಕೆ.47 ರೈಫಲ್‌ನಲ್ಲಿ ಸುಮಾರು 87 ರೌಂಡ್ ಫಯರ್ ಮಾಡಿದ್ದೆ. ನನಗೆ ಟಾರ್ಗೆಟ್ ಮಾಡಿದ್ದ ಗುಂಡು ಹತ್ತಿರದಲ್ಲೇ ಇದ್ದ ಮತ್ತೂಬ್ಬ ಸಹೋದ್ಯೋಗಿಗೆ ಬಿದ್ದಿದ್ದು, ಅವರು ಗಂಭೀರ ಗಾಯಗೊಂಡಿದ್ದರು. ನಕ್ಸಲರ ವಿರುದ್ಧದ ಹೋರಾಟಕ್ಕಾಗಿ ಡಿಸಿಜಿಆರ್ ಪದಕ ಲಭಿಸಿತ್ತು ಎಂದು ಮನೋಜ್ ನೆನಪಿಸಿಕೊಳ್ಳುತ್ತಾರೆ. ಊರಲ್ಲಿ ಗೌರವ
ಮಗ ಸೈನ್ಯಕ್ಕೆ ಸೇರುತ್ತೇನೆ ಎಂದಾಗ ಮೊದಲು ಭಯವಾಗಿತ್ತು. ಆದರೆ ಸ್ಥಳೀಯರು ಧೈರ್ಯ ತುಂಬಿದ್ದರಿಂದ ಸಂತೋಷದಲ್ಲಿ ಮಗನನ್ನು ಕಳುಹಿಸಿದ್ದೆ. ಆತನಿಂದಲೇ ನಮ್ಮ ಕುಟುಂಬ ನಿರ್ವಹಣೆಯಾಗುತ್ತಿದೆ. ಊರಲ್ಲಿ ಮತ್ತು ಶಾಲೆಯಲ್ಲಿ ಗೌರವ ನೀಡುವಾಗ ನನಗೆ ಹೆಮ್ಮೆಯಾಗುತ್ತದೆ.
-ಜಯಂತಿ ಗಟ್ಟಿ, ತಾಯಿ ಯುವ ಜನಾಂಗ ದೇಶಸೇವೆಗೆ ತೊಡಗಿಸಲಿ
ಪತಿ ದೇಶ ಕಾಯುವ ಕಾಯಕ ಮಾಡುತ್ತಿರುವ ಬಗ್ಗೆ ನಮಗೆ ಹೆಮ್ಮೆಯಿದೆ. ಯುವ ಜನಾಂಗ ಇಂತಹ ದೇಶ ಸೇವೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ಆಶಯ.
-ಹರ್ಷಿತಾ ಕೋಟೆಕಾರು, ಪತ್ನಿ ಕಾಲೇಜಿನ ವಿದ್ಯಾರ್ಥಿ ಎಂಬ ಹೆಮ್ಮೆ
ಉತ್ತಮ ಗುಣ ಮತ್ತು ದೇಹದಾರ್ಢ್ಯ ಹೊಂದಿದ್ದ ಮನೋಜ್‌ಗೆ ಪೊಲೀಸ್ ಅಥವಾ ಸೇನೆ ಸೇರಲು ಪ್ರೇರೇಪಿಸಿದ್ದೆ. ಸೈನ್ಯಕ್ಕೆ ಸೇರುವ ಸಂದರ್ಭದಲ್ಲಿ ಅಪ್ಲಿಕೇಶನ್ ತುಂಬಿಸಿ ಧೈರ್ಯ ತುಂಬಿದ್ದೆ. ನಮ್ಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯೊಬ್ಬ ದೇಶ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಚಾರ.
-ಬಸವರಾಜ್ ಪಲ್ಲಕ್ಕಿ ,
ಉಪಪ್ರಾಂಶುಪಾಲರು, ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು ವಸಂತ್ ಎನ್. ಕೊಣಾಜೆ