ನವದೆಹಲಿ: ಪ್ರಮುಖ ನ್ಯೂಸ್ ಪೋರ್ಟಲ್ ನ್ಯೂಸ್ ಕ್ಲಿಕ್ ವಿರುದ್ಧ ದೆಹಲಿ ಪೊಲೀಸರು ಬರೋಬ್ಬರಿ 8,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿರುವುದಾಗಿ ವರದಿ ತಿಳಿಸಿದೆ. ನ್ಯೂಸ್ ಕ್ಲಿಕ್ ಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಇತರರು ಭಯೋತ್ಪಾದನೆಗೆ ಆರ್ಥಿಕ ನೆರವು ಹಾಗೂ ಚೀನಾ ಪರ ಪ್ರಚಾರ ಕೈಗೊಂಡಿರುವುದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ:T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
ಸುಮಾರು 8,000 ಪುಟಗಳ ಚಾರ್ಜ್ ಶೀಟ್ ನಲ್ಲಿ ರೈತರ ಪ್ರತಿಭಟನೆ ಮತ್ತು 2020ರ ದೆಹಲಿ ಗಲಭೆಯಲ್ಲಿ ಪ್ರಬೀರ್ ಕೈವಾಡ ಇದ್ದಿರುವುದಾಗಿ ತಿಳಿಸಿದೆ. ಭಾರತದಲ್ಲಿ ಚೀನಾದ ಪ್ರಪೋಗಾಂಡಾ ಪ್ರಚಾರ ಮಾಡಲು ಪುರ್ಕಾಯಸ್ಥ ಭಾರೀ ಪ್ರಮಾಣದ ದೇಣಿಗೆ ಪಡೆದಿರುವ ಬಗ್ಗೆ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅನ್ವಯ ತನಿಖೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ 3ರಂದು ನ್ಯೂಸ್ ಕ್ಲಿಕ್ ಸ್ಥಾಪಕ ಪ್ರಬೀರ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ದೆಹಲಿ ವಿಶೇಷ ಪೊಲೀಸ್ ಘಟಕ ಬಂಧಿಸಿತ್ತು. ನಗರದ ಹಲವೆಡೆ ದಾಳಿ ನಡೆಸಿದ ನಂತರ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿ, ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇಬ್ಬರೂ ತಿಹಾರ್ ಜೈಲಿನಲ್ಲಿ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪುರ್ಕಾಯಸ್ಥ ಭಯೋತ್ಪಾದನಾ ಚಟುವಟಿಕೆಗಾಗಿ ಹಣ ಸಂಗ್ರಹಿಸುತ್ತಿದ್ದಿರುವುದಾಗಿ ದೆಹಲಿ ಪೊಲೀಸರು ಆರೋಪಿಸಿದ್ದಾರೆ. ನಿಷೇಧಿತ ಲಷ್ಕರ್ ಎ ತೊಯ್ಬಾ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಭಯೋತ್ಪಾದನಾ ಚಟುವಟಿಕೆಗಳಿಗಾಗಿ ನ್ಯೂಸ್ ಕ್ಲಿಕ್ 91 ಕೋಟಿ ರೂಪಾಯಿ ನೆರವು ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ತಿಳಿಸಿದೆ.
ತಪ್ಪು ಮಾಹಿತಿಯ ಪ್ರಚಾರ:
ಭಾರತದ ಭೂಪಟದಲ್ಲಿ ಕಾಶ್ಮೀರ ಮತ್ತು ಅಕ್ಸಾಯಿ ಚಿನ್ ಅನ್ನು ತೆಗೆದುಹಾಕಿ, ಇದು ಚೀನಾದ ಭೂ ಪ್ರದೇಶ ಎಂದು ಪುರ್ಕಾಯಸ್ಥ ಪ್ರಚಾರ ಮಾಡಿರುವುದಾಗಿ ದೂರಲಾಗಿದೆ. ಅಲ್ಲದೇ ಸಿಎಎ ಮತ್ತು ಎನ್ ಆರ್ ಸಿ ಪ್ರತಿಭಟನೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹಬ್ಬಿಸಿರುವುದಾಗಿ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಪುರ್ಕಾಯಸ್ಥ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿ) ಜತೆ ಸಂಪರ್ಕ ಹೊಂದಿದ್ದು, ಅವರ ಚಟುವಟಿಕೆಗಳಿಗೆ ಹಣಕಾಸಿನ ನೆರವು ಒದಗಿಸಿರುವುದಾಗಿ ವರದಿ ವಿವರಿಸಿದೆ.