Advertisement

ಈಶ್ವರಪ್ಪ ವಿರುದ್ದ ತೊಡೆ ತಟ್ಟಿದ ಬಿಎಸ್‌ವೈ ನಿಷ್ಠರು

03:45 AM Jan 25, 2017 | Team Udayavani |

ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ವಿಚಾರದಲ್ಲಿ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತ ತೀವ್ರ ಸ್ವರೂಪ ಪಡೆಯುವ ಲಕ್ಷಣ
ಗೋಚರಿಸಿದ್ದು, ಬ್ರಿಗೇಡ್‌ನ‌ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಿರುದ್ದ ತಕ್ಷಣ ಶಿಸ್ತುಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್‌ಗೆ ದೂರು ನೀಡಲು ಹಲವು ಶಾಸಕರು,
ಸಂಸದರು ಮತ್ತು ಮಾಜಿ ಶಾಸಕರು ತೀರ್ಮಾನಿಸಿದ್ದಾರೆ.

Advertisement

ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಶಾಸಕರು ಸಹಿ ಸಂಗ್ರಹ ಆರಂಭಿಸಿದ್ದು, 31
ಶಾಸಕರು, 11 ವಿಧಾನ ಪರಿಷತ್‌ ಸದಸ್ಯರು ಮತ್ತು 94 ಮಾಜಿ ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ. ಜತೆಗೆ 11 ಸಂಸದರು ಬಿಜೆಪಿ
ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆಯಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈಶ್ವರಪ್ಪ ಅವರು ಬ್ರಿಗೇಡ್‌ ಸಭೆಗಳಲ್ಲಿ ಪಾಲ್ಗೊಂಡು ಬಿ.ಎಸ್‌. ಯಡಿಯೂರಪ್ಪ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಇದರಿಂದ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದೆ. ಆದ್ದರಿಂದ ಕೂಡಲೇ ಈಶ್ವರಪ್ಪ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಶಾಸಕರು, ಮಾಜಿ ಶಾಸಕರ ಸಹಿಯೊಂದಿಗೆ ದೂರು ಸಲ್ಲಿಸಲಾಗುವುದು. ಈ ಮೂಲಕ ಇಡೀ ಪಕ್ಷ ಯಡಿಯೂರಪ್ಪ ಅವರ ಬೆನ್ನಿಗಿದೆ ಎಂಬುದನ್ನು 
ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಶಾಸಕರೊಬ್ಬರು ತಿಳಿಸಿದ್ದಾರೆ.

ಕೇಂದ್ರದಲ್ಲಿ ಸಚಿವರಾಗಿರುವವರು ಮತ್ತು ಪಕ್ಷದ ಪದಾಧಿಕಾರಿಗಳಾಗಿರುವವರನ್ನು ಹೊರತುಪಡಿಸಿ 11 ಸಂಸದರು ಈಶ್ವರಪ್ಪ 
ವಿರುದಟಛಿ ವರಿಷ್ಠರಿಗೆ ಪತ್ರ ಬರೆಯಲಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಪಕ್ಷದ ಪದಾಧಿಕಾರಿಗಳಾಗಿರುವರನ್ನು ಹೊರತುಪಡಿಸಿ 31 ಶಾಸಕರು ದೂರಿನ ಪತ್ರಕ್ಕೆ
ಸಹಿ ಮಾಡಿದ್ದಾರೆ. ಇದರೊಂದಿಗೆ ವಿಧಾನ ಪರಿಷತ್‌ ಸದಸ್ಯರು, ಮಾಜಿ ಶಾಸಕರೂ ಕೂಡ ಬೆಂಬಲ ವ್ಯಕ್ತಪಡಿಸಿ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಹಿ ಹೊಂದಿರುವ ಪತ್ರದೊಂದಿಗೆ ಇನ್ನೆರಡು ದಿನಗಳಲ್ಲಿ ಕೆಲವು ಮುಖಂಡರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ಗೆ ಅದನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಬ್ರಿಗೇಡ್‌ನ‌ಲ್ಲಿ
ಭಾಗವಹಿಸಿದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಬೆಂಬಲಿಗರು ಒತ್ತಾಯಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ
ಈಶ್ವರಪ್ಪ ಬೆಂಬಲಿಗರು, ತಾಕತ್ತಿದ್ದರೆ ಕ್ರಮ ಕೈಗೊಳ್ಳಿ ಎಂದಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿರುವ ಯಡಿಯೂರಪ್ಪ ಬೆಂಬಲಿಗ
ಶಾಸಕರು ಇದೀಗ ಈಶ್ವರಪ್ಪ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

Advertisement

ತಮ್ಮ ದೂರಿಗೆ ಬೆಂಬಲವಾಗಿ ಈಶ್ವರಪ್ಪ ಅವರು ಬ್ರಿಗೇಡ್‌ ಸಭೆ ಮತ್ತು ಮಾಧ್ಯಮಗಳ ಮುಂದೆ ಯಡಿಯೂರಪ್ಪ ವಿರುದಟಛಿ ನೀಡಿರುವ ಹೇಳಿಕೆಗಳ ಕುರಿತು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಈಶ್ವರಪ್ಪ ಅವರ ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಜತೆಗೆ ಗುಂಪುಗಾರಿಕೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಕಾರ್ಯಕರ್ತರು ಒಬ್ಬರನ್ನೊಬ್ಬರು ವಿರೋಧಿಸುವಂತಾಗಿದೆ. ಹೀಗಾಗಿ ಈಶ್ವರಪ್ಪ ವಿರುದಟಛಿ ಶಿಸ್ತು ಕ್ರಮ ಕೈಗೊಳ್ಳಬೇಕು ಅಥವಾ ಅವರು ಬ್ರಿಗೇಡ್‌ ಸಭೆಗಳಲ್ಲಿ ಭಾಗವಹಿಸದಂತೆ ಮತ್ತು ಯಡಿಯೂರಪ್ಪ ವಿರುದ್ದ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next