ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತ ಶಮನ ಯತ್ನವಾಗಿ ಪಕ್ಷದಲ್ಲಿ ತಮ್ಮ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅತೃಪ್ತರೊಂದಿಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಪಕ್ಷದ ಕಚೇರಿಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.
ಅತೃಪ್ತರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಅಸಮಾಧಾನವನ್ನು ತಕ್ಕಮಟ್ಟಿಗೆ ಬಗೆಹರಿಸಲು ಯಡಿಯೂರಪ್ಪ ಸಭೆ ಕರೆದಿದ್ದಾರಾದರೂ ಬುಧವಾರ ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಿವಾಸದಲ್ಲಿ ನಡೆದ ಅತೃಪ್ತರ ಸಭೆಗೆ ಮುನ್ನ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಬಗ್ಗೆ ಆಡಿದ ಮಾತುಗಳು ಯಡಿಯೂರಪ್ಪ ಅವರನ್ನು ಕೆರಳಿಸಿದೆ. ಹೀಗಾಗಿ ಗುರುವಾರದ ಸಭೆಯ ಬಗ್ಗೆ ಭಿನ್ನಮತ ಬಗೆಹರಿಯುವ ಬಗ್ಗೆ ಇದ್ದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಕಾಣಿಸಿಕೊಂಡಿದೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಉದ್ಭವಿಸಿರುವ ಭಿನ್ನಮತ ದಿನಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಕೆಲವರು ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಪತ್ರದಲ್ಲಿ ಈಶ್ವರಪ್ಪ ವಿಚಾರದಲ್ಲಿ ಯಡಿಯೂರಪ್ಪ ಅವರು ನಡೆದುಕೊಳ್ಳುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಯಡಿಯೂರಪ್ಪ ಬಣದವರು ಈಶ್ವರಪ್ಪ ಅವರ ವಿರುದ್ಧ ಕಿಡಿ ಕಾರಿದ್ದರು.
ಈ ಗದ್ದಲ ಹೆಚ್ಚಾಗಿರುವುದನ್ನು ಗಮನಿಸಿದ ಯಡಿಯೂರಪ್ಪ ಅವರು, ಈಶ್ವರಪ್ಪ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಮ್ಮ ಬಣದವರಿಗೆ ಸೂಚಿಸಿದ್ದರು. ಅಲ್ಲದೆ, ತಮ್ಮ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದವರ ಮುನಿಸನ್ನೂ ಶಮನಗೊಳಿಸಲು ಮುಂದಾಗಿದ್ದಾರೆ. ಅದಕ್ಕಾಗಿ ತಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಮುಖಂಡರ ಪೈಕಿ 10ರಿಂದ 12 ಮಂದಿಯನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜ. 21 ಮತ್ತು 22ರಂದು ಕಲಬುರಗಿಯಲ್ಲಿ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಪೂರ್ವಸಿದ್ಧತಾ ಸಭೆಯನ್ನೂ ಯಡಿಯೂರಪ್ಪ ಕರೆದಿದ್ದು, ಅಲ್ಲಿ ಪಕ್ಷ ಸಂಘಟನೆ ಕುರಿತಂತೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.