ಬೆಂಗಳೂರು: ಹೆಚ್ಚಾಗುತ್ತಿರುವ ಕಚ್ಚಾ ಕಾಗದ ಹಾಗೂ ಮುದ್ರಣ ಸಾಮಗ್ರಿಗಳ ಬೆಲೆ ಹೆಚ್ಚುತ್ತಿರುವುದರಿಂದ ಮುದ್ರಣಕ್ಕೆ ಎದುರಾಗಿರುವ ಸಮಸ್ಯೆಯನ್ನು ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ಪರಿಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪಠ್ಯ ಪುಸ್ತಕ ಮುದ್ರಕರ ಸಂಘದ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಸತ್ಯ ಕುಮಾರ್ ಮಾತನಾಡಿ, ಒಂದು ಟನ್ ಕಾಗದದ ಬೆಲೆ ಸುಮಾರು 60,000ದಿಂದ 90,000ಕ್ಕೆ ಏರಿಕೆಯಾಗಿದೆ. ಮುದ್ರಣದ ಮೂಲ ಸಾಮಗ್ರಿಗಳಾದ ಶಾಯಿ, ಪ್ಲೇಟ್, ಕೆಮಿಕಲ್ಸ್ ಸಹಿತ ಎಲ್ಲ ಸಾಮಗ್ರಿಗಳ ಬೆಲೆ ದುಬಾರಿಯಾಗಿದೆ. ಪಠ್ಯಪುಸ್ತಕ, ಪತ್ರಿಕೆ, ಲೇಖನ ಸಾಮಗ್ರಿಗಳನ್ನು ಮುದ್ರಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯ ಸರಕಾರ ಮುದ್ರಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕಾಗದ ಸರಬರಾಜು ಮಾಡುವ ಮಿಲ್‌ಗಳಿಗೆ ಸ್ಪಷ್ಟವಾದ ಸೂಚನೆ ನೀಡಿ, ಸ್ಥಳೀಯ ಮುದ್ರಕರ ಬೇಡಿಕೆಗೆ ಅನುಗುಣವಾಗಿ ಅಗತ್ಯ ಕಾಗದಗಳನ್ನು ಪೂರೈಸಲು ಆದೇಶ ನೀಡಬೇಕು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಪತ್ರಿಕೆಗಳು ದೈನಂದಿನ ಮುದ್ರಣಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಇದೇ ರೀತಿ ಬೆಲೆ ಏರಿಕೆಯಾದರೆ ಪತ್ರಿಕೆಗಳನ್ನು ಸ್ಥಗಿತಗೊಳಿಸಬೇಕಾದೀತು. ಪ್ರಸ್ತುತ ಮುಂಗಡ ಪಾವತಿಸಿದರೂ ಮುದ್ರಣದ ಕಾಗದ ದೊರೆಯದ ಪರಿಸ್ಥಿತಿ ಇದೆ. ಈ ಬಗ್ಗೆ ಕೇಂದ್ರ ಸರಕಾರ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ತುರ್ತಾಗಿ ಸಭೆ ನಡೆಸಬೇಕಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಗೋಪಾಕೃಷ್ಣ, ಖಜಾಂಚಿ ನಾಗಸುಂದರ್, ವಿ. ಶ್ರೀನಿವಾಸ್ ಉಪಸ್ಥಿತರಿದ್ದರು.