Advertisement

ಬಿಎಸ್‌ವೈ ಹೈ ಬಾಂಬ್‌: ಹೈಕಮಾಂಡ್ ಗೆ 1ಸಾವಿರ ಕೋಟಿ ಕಪ್ಪ

03:45 AM Feb 11, 2017 | |

ಬೆಂಗಳೂರು/ಬಾಗಲಕೋಟೆ: ಹ್ಯೂಬ್ಲೋ ವಾಚ್‌ ಉಡುಗೊರೆ ಪ್ರಕರಣದ ನಂತರ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮತ್ತೂಂದು ಗಂಭೀರ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್‌ ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂ. ಕೊಟ್ಟು ಕುರ್ಚಿ ಉಳಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೊಸ “ಬಾಂಬ್‌’ ಸಿಡಿಸಿದ್ದಾರೆ.

Advertisement

ಮುಖ್ಯಮಂತ್ರಿಯವರ ಬಲಗೈ ಬಂಟ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಮೂಲಕ ಕಾಂಗ್ರೆಸ್‌ ನಾಯಕರಿಗೆ ರಾಜ್ಯದಿಂದ 1000 ಕೋಟಿ ರೂ.ಗೂ ಅಧಿಕ ಹಣ ಹೋಗಿದೆ. ಕಾಂಗ್ರೆಸ್‌ನ ಯಾವ್ಯಾವ ನಾಯಕರಿಗೆ ಎಷ್ಟೆಷ್ಟು ಹಣ ಹೋಗಿದೆ ಎಂಬುದರ ದಾಖಲೆಯೂ ನನ್ನ ಬಳಿಯಿದೆ ಎಂದು ಹೇಳಿದ್ದಾರೆ.

ಅತ್ತ ಪಂಚರಾಜ್ಯಗಳ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಕಾಂಗ್ರೆಸ್‌ ಆಡಳಿತ ಇರುವ ಕರ್ನಾಟಕದಿಂದ ಒಂದು ಸಾವಿರ ಕೋಟಿ ರೂ. ಹೈಕಮಾಂಡ್‌ಗೆ ಹೋಗಿದೆ ಎಂಬ ಈ ಆರೋಪ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಯಡಿಯೂರಪ್ಪ ಮಾಡಿರುವ ಆರೋಪ ಸಾಬೀತು ಪಡಿಸಲಿ, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯಲಿ ಸವಾಲು ಹಾಕಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಚಿವರಾದ ಕಾಗೋಡು ತಿಮ್ಮಪ್ಪ, ಆರ್‌. ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ ಸಿಎಂ ಸಿದ್ದರಾಮಯ್ಯ ಪರ “ಬ್ಯಾಟಿಂಗ್‌’ ನಡೆಸಿ ಯಡಿಯೂರಪ್ಪ ಆರೋಪ ಸತ್ಯಕ್ಕೆ ದೂರ ಎಂದು ವಾಗ್ಧಾಳಿ ನಡೆಸಿದ್ದಾರೆ. ಆದರೆ, ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸೇರಿದಂತೆ ಬಿಜೆಪಿ ನಾಯಕರು ಯಡಿಯೂರಪ್ಪ ಆಧಾರ ಇಲ್ಲದೆ ಹೇಳಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಈ ಮಧ್ಯೆ,ಯಡಿಯೂರಪ್ಪ ಆರೋಪ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಬಿಜೆಪಿ ನಾಯಕರು, ಯಡಿಯೂರಪ್ಪ ಪರ ಆರೋಪ ನಿಜವಿರ ಬಹುದು, ಆಧಾರ ಇಲ್ಲದೆ  ವರು ಮಾತನಾಡುವವರಲ್ಲ ಎಂದು ಸಮರ್ಥನೆ ಧಾಟಿ ಯಲ್ಲಿ ಹೇಳಿಕೆ ನೀಡಿದ್ದರೆ, ಕಾಂಗ್ರೆಸ್‌ ನಾಯಕರು, ಇದೊಂದು ಷಡ್ಯಂತ್ರ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಎಂದು ಹರಿಹಾಯ್ದಿದ್ದಾರೆ.

Advertisement

ಯಡಿಯೂರಪ್ಪ ಆರೋಪವೇನು?
ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಖುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯದಿಂದ 1 ಸಾವಿರ ಕೋಟಿ ರೂ. ಗೂ ಅಧಿಕ ಕಪ್ಪ ಕಾಣಿಕೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇವೆ ಎಂದು ಹೇಳಿದರು.

ಮುಖ್ಯಮಂತ್ರಿಯವರ ಆಪ್ತನಾಗಿರುವ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಮೂಲಕ ಕಾಂಗ್ರೆಸ್‌ ನಾಯಕರಿಗೆ ರಾಜ್ಯದಿಂದ 1000 ಕೋಟಿಗೂ ಅಧಿಕ ಹಣ ಹೋಗಿದೆ. ಇದರಲ್ಲಿ ಕೇಂದ್ರದ ಯಾವ ನಾಯಕರಿಗೆ ಎಷ್ಟು ಕಪ್ಪ ಕಾಣಿಕೆ ಹೋಗಿದೆ ಎಂಬುದರ ದಾಖಲೆ ನನ್ನ ಬಳಿ ಇವೆ. ನಾನು ದಾಖಲೆ ಬಿಡುಗಡೆ ಮಾಡುವ ಮೊದಲು ಮುಖ್ಯಮಂತ್ರಿಗಳೇ ಸತ್ಯಾಸತ್ಯತೆ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಹೈಕಮಾಂಡ್‌ಗೆ ಒಂದು ಸಾವಿರ ಕೋಟಿ ರೂ. ಕೊಡಲಾಗಿದೆ ಎಂದು ಆರೋಪ ಮಾಡಿರುವ ಬಿ.ಎಸ್‌. ಯಡಿಯೂರಪ್ಪ ಅದನ್ನು ಸಾಬೀತುಪಡಿಸಲಿ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯಲಿ. ಸಿದ್ದರಾಮಯ್ಯ, ಮುಖ್ಯಮಂತಿ ಸಚಿವರ ಮನೆಯ ಮೇಲೆ ಐಟಿ ದಾಳಿ ಆಗಿರುವುದನ್ನು ನೋಡಿದರೆ, ಅದೆಲ್ಲ ಸತ್ಯ ಅನಿಸುತ್ತದೆ. ಈ ಬಗ್ಗೆ ಯಡಿಯೂರಪ್ಪ ಅವರ ಬಳಿ ದಾಖಲೆ ಇದ್ದರೆ, ಸದನದಲ್ಲಿಯೂ ವಿಷಯ ಪ್ರಸ್ತಾಪಿಸುತ್ತೇನೆ.
ಜಗದೀಶ್‌ ಶೆಟ್ಟರ್‌, ಪ್ರತಿಪಕ್ಷ ನಾಯಕ

ಯಡಿಯೂರಪ್ಪ ಅವರು ಮಾಡುವ ಆರೋಪಗಳಿಗೆ ದಾಖಲೆ ಇಟ್ಟು ಮಾತನಾಡಲಿ, ಮಾಡಿರುವ ಆರೋಪ ಹಿಟ್‌ ಆಂಡ್‌ ರನ್‌ ಪ್ರಕರಣ ಆಗಬಾರದು. ಆರೋಪಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ. 
ವೈ.ಎಸ್‌.ವಿ ದತ್ತಾ, ಜೆಡಿಎಸ್‌ ಶಾಸಕ

ಯಡಿಯೂರಪ್ಪ ಸುಳ್ಳು ಆರೋಪ ಮಾಡುವ ಬದಲು ಈ ಬಗ್ಗೆ ಸೂಕ್ತ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ಅವರು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರು. ಈ ರೀತಿಯ ಸುಳ್ಳು ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ.
ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ರಾಜಕೀಯದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರೆ ಎಲ್ಲವೂ ಬಂದ್‌ ಆಗುತ್ತದೆ. 

ಕಾಗೋಡು ತಿಮ್ಮಪ್ಪ, ಕಂದಾಯ ಸಚಿವ

ಈ ರೀತಿಯ ಆರೋಪ ಮಾಡುವುದಕ್ಕೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇನು ಇ.ಡಿ. ಹಾಗೂ ಆದಾಯ ತೆರಿಗೆ ಇಲಾಖೆ ವಕ್ತಾರರೇ? ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರು ಈ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಫ‌ಲಿಸುವುದಿಲ್ಲ.

ಟಿ.ಬಿ.ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಯಡಿಯೂರಪ್ಪ ಅವರು ಆಧಾರ ಇಲ್ಲದೇ ಆರೋಪ ಮಾಡುವುದಿಲ್ಲ. ಕಾಂಗ್ರೆಸ್‌ ಮುಖಂಡ ಜನಾರ್ದನ ಪೂಜಾರಿ ಕೂಡ ಸಿದ್ದ ರಾಮಯ್ಯ ಅವರಿಗೆ ಹೈಕಮಾಂಡ್‌ ಕೃಪಾ ಕಟಾಕ್ಷವಿದೆ ಎಂದು ಹೇಳಿ ದ್ದಾರೆ. ಕಾಂಗ್ರೆಸ್‌ನವರಿಗೆ ಜನರ ಬೆಂಬಲ ಇಲ್ಲ.
ಸಿ.ಟಿ.ರವಿ, ಶಾಸಕ

ಯಡಿಯೂರಪ್ಪ ಅವರು ಆಧಾರ ರಹಿತ ಆರೋಪ ಮಾಡುತ್ತಾರೆ. ಅವರ ಬಳಿ ಏನಾದರೂ ದಾಖಲೆ ಇದ್ದರೆ, ಬಿಡುಗಡೆ ಮಾಡಲಿ, ಈ ಹಿಂದೆಯೂ ಕೆಲವು ಸಚಿವರು ಜೈಲಿಗೆ ಹೋಗುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಅವರ ಆಧಾರ ರಹಿತ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.
ಆರ್‌.ವಿ.ದೇಶಪಾಂಡೆ, ಕೈಗಾರಿಕಾ ಸಚಿವ

ಬಿಎಸ್‌ವೈ ಮತ್ತು ಶೋಭಾ ಕರಂದ್ಲಾಜೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮರ್ಯಾದೆಯನ್ನು ಅವರೇ
ಕಳೆದುಕೊಳ್ಳುತ್ತಿದ್ದಾರೆ. ಜವಾಬ್ದಾರಿ ಯುತ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು.
ದಿನೇಶ್‌ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next