ದಾವಣಗೆರೆ: ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಏ. 3ರಂದು ದಾವಣಗೆರೆಯ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪತ್ರಿಕಾ ವಿತರಕರು ಎದುರಿಸುತ್ತಿರುವ ಸಮಸ್ಯೆ, ವಿವಿಧ ಬೇಡಿಕೆ, ಗುರುತಿನಚೀಟಿ ವಿತರಣೆ ಮುಂತಾದ ವಿಷಯಗಳ ಬಗ್ಗೆ ರಾಜ್ಯ ಕಾರ್ಯಕಾರಿಣಿಯಲ್ಲಿ ಚರ್ಚೆ ಮಾಡಲಾಗುವುದು ಎಂದರು. ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರು ಹಾಗೂ 3.5 ಲಕ್ಷದಷ್ಟು ಅವರ ಅವಲಂಬಿತರಿದ್ದಾರೆ. ಮುಖ್ಯಮಂತ್ರಿಯಾಗಿ ಎಲ್ಲರ ಸುದ್ದಿಗಳನ್ನು ಮಳೆ, ಬಿಸಿಲು, ಚಳಿ, ಏನನ್ನೂ ನೋಡದೆ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ ಪತ್ರಿಕಾ ವಿತರಕರ ಬಗ್ಗೆ ಯಾವುದೇ ಸರ್ಕಾರ ಗಮನ ಹರಿಸಿಲ್ಲ ಎಂದು ದೂರಿದರು.
ದಾವಣಗೆರೆ ಒಳಗೊಂಡಂತೆ ಅನೇಕ ಕಡೆ ಪತ್ರಿಕಾ ವಿತರಕರಿಗೆ ಸೂಕ್ತ ಸ್ಥಳದ ಲಭ್ಯತೆ ಇಲ್ಲ. ಮಳೆಗಾಲದಲ್ಲಿ ಪತ್ರಿಕೆ ವಿತರಣೆ ಮಾಡುವುದು ಬಹಳ ಕಷ್ಟವಾಗುತ್ತದೆ. ಪತ್ರಿಕಾ ವಿತರಕರಿಗೆ ಸೂಕ್ತ ಸ್ಥಳ ಇತರೆ ಸವಲತ್ತು ಒದಗಿಸಬೇಕು. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗಾಗಿ ರಾಜ್ಯದ ಪ್ರತಿ ಜಿಲ್ಲೆಗೆ 1 ಕೋಟಿಯಂತೆ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
2018-19ರಲ್ಲಿ ಹಣಕಾಸು ಸಚಿವರೂ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪತ್ರಿಕಾ ವಿತರಕ ರಿಗಾಗಿ 2 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಆದರೆ ಯಾವ ಇಲಾಖೆಯಡಿ ಘೋಷಣೆ ಮಾಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲ. ಹಣಕಾಸು, ವಾರ್ತಾ ಇಲಾಖೆ ಜೊತೆಗೆ ಮಾಧ್ಯಮ ಅಕಾಡೆಮಿಗೆ ಪತ್ರ ಬರೆಯಲಾಗಿದೆ. ಸ್ಪಷ್ಟತೆ ಇಲ್ಲದ ಕಾರಣಕ್ಕೆ ಅನುದಾನ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಸರ್ಕಾರ ಈ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದರು.
ಪತ್ರಿಕಾ ವಿತರಕರ ಹಲವಾರು ಬೇಡಿಕೆಗಳಿವೆ. ಮೊದಲು ಗುರುತಿನಪತ್ರದ ಮೂಲಕ ನಿಖರ ಸಂಖ್ಯೆಯ ಮಾಹಿತಿ ಪಡೆಯಲಾಗುವುದು. ನಂತರ ಹಂತ ಹಂತವಾಗಿ ಬೇಡಿಕೆ ಈಡೇರಿಕೆಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಒಕ್ಕೂಟದ ಚಂದ್ರು, ರಘು ಆಚಾರ್, ಅರುಣ್ ಕುಮಾರ್, ರಮೇಶ್ ಜೆ. ವತನ್, ತಿಪ್ಪೇಸ್ವಾಮಿ, ವಾಸು, ಮಂಜುನಾಥ್, ನಿಂಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.