ಮಂಗಳೂರು: ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಸಂದಾಯದ ಡೈರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಜತೆಯಾಗಿ ಹೆಣೆದಿರುವ ಷಡ್ಯಂತ್ರವಾಗಿದೆ. ಈ ಡೈರಿ ಯಡಿಯೂರಪ್ಪಗೆ ಹೇಗೆ ಸಿಕ್ಕಿತು ಎಂಬುದನ್ನು ಮೊದಲು ತಿಳಿಸಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಧಾನಿ ಮೋದಿಯವರು ನೋಟು ಅಪಮೌಲ್ಯದಿಂದ ಕಂಗಾಲಾಗಿ ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಇದೆ. ಅವರು ಈ ರೀತಿ ಸುಳ್ಳು ಹೇಳುವ ಕೆಲಸವನ್ನು ಮಾಡಬಾರದು. ಅವರ ಬಳಿ ಪೂರ್ತಿ ವಿವರಗಳಿದ್ದರೆ ಅದನ್ನು ತತ್‌ಕ್ಷಣ ಬಹಿರಂಗ ಪಡಿಸಲಿ. ದಾಖಲೆ ಬಹಿರಂಗ ಪಡಿಸದಂತೆ ಯಾರಾದರೂ ಕಪ್ಪ ಕೊಟ್ಟಿದ್ದಾರೆಯೇ ಎಂಬುದನ್ನೂ ತಿಳಿಸಲಿ. ಗೋವಿಂದರಾಜು ಅವರೇ ಅದು ನನ್ನ ಹಸ್ತಾಕ್ಷರ ಅಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಯಾರು ಸೃಷ್ಟಿಸಿದ್ದಾರೆ ಎಂಬುದನ್ನು ಸ್ಟಷ್ಟಪಡಿಸಲಿ. ಅದಕ್ಕಾಗಿ ಸುಪ್ರಿಂಕೋರ್ಟ್‌ನ ನ್ಯಾಯಾಧೀಶರನ್ನು ನೇಮಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ದಾಖಲೆ ತಿರುಚಿ ಈ ರೀತಿ ರಾಜಕೀಯ ಮಾಡುತ್ತಿರುವುದರಿಂದ ಜಗತ್ತೇ ಭಾರತದ ಕುರಿತು ಕೆಟ್ಟದಾಗಿ ಮಾತನಾಡುತ್ತಿದೆ. ಇತರ ದೇಶದವರು ಬಿಜೆಪಿ, ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳನ್ನೂ ತೆಗಳುತ್ತಿದ್ದಾರೆ. ಬಿಎಸ್‌ವೈಯವರು ಬಿಜೆಪಿ ನಾಯಕರಿಗೆ ಚೆಕ್ ಮೂಲಕ ಕಪ್ಪ ನೀಡಿದ್ದಾರೆ ಎಂದು ಆರೋಪಿಸುವ ಕುಮಾರಸ್ವಾಮಿಯವರು ಕೂಡ ದಾಖಲೆ ನೀಡಿ ಮಾತನಾಡಲಿ ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಎತ್ತಿನಹೊಳೆ ಯೋಜನೆಯ ಮೂಲಕ ಎಷ್ಟು ಹಣ ದೋಚಲು ಸಾಧ್ಯವೋ, ಅಷ್ಟನ್ನು ದೋಚಲು ಸಿದ್ಧತೆ ನಡೆದಿದೆ. ಬೆಂಗಳೂರು, ಕೋಲಾರದಲ್ಲಿ ನೀರಿಲ್ಲ ಎಂದು ಕರಾವಳಿಯನ್ನೇ ಬರಡಾಗಿಸಲು ಹೊರಟಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಜತೆ ಕೇಂದ್ರವೂ ಹೊಣೆಯಾಗುತ್ತದೆ. ಮುಂದೆ ಯೋಜನೆಯನ್ನು ನಿಲ್ಲಿಸದೇ ಇದ್ದಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಸಿದರು.
ಬಂದ್: ನ್ಯಾಯಾಲಯಕ್ಕೆ ಸವಾಲು
ಕೇರಳ ಮುಖ್ಯಮಂತ್ರಿಯ ದಕ್ಷಿಣ ಕನ್ನಡ ಭೇಟಿ ವಿರೋಧಿಸಿ ಜಿಲ್ಲಾ ಬಂದ್‌ಗೆ ಕರೆ ಕೊಟ್ಟಿರುವ ಸಂಘ ಪರಿವಾರಗಳು ಹಾಗೂ ಬಿಜೆಪಿ ಸುಪ್ರಿಂಕೋರ್ಟ್‌ಗೆ ಸವಾಲು ಹಾಕುವ ಕಾರ್ಯವನ್ನು ಮಾಡಿದೆ. ಬಂದ್‌ನಿಂದ ಹಿಂಸೆ, ವ್ಯಾಪಾರ-ವ್ಯವಹಾರಕ್ಕೆ ಹಾನಿಯಾದರೆ ಬಂದ್‌ಗೆ ಕರೆ ಕೊಟ್ಟವರೇ ಭರಿಸಬೇಕು ಎಂದು ಪೂಜಾರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಮಾಜಿ ಮೇಯರ್ ಅಜಿತ್‌ಕುಮಾರ್, ಯು.ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.