ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ ಸಂಪೂರ್ಣ ದಿವಾಳಿಯಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಂಪೆನಿಗೆ ಸಂಪೂರ್ಣ ಸಹಕಾರ ನೀಡಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಆರ್ಥಿಕ ಸಹಕಾರವನ್ನೂ ಒದಗಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕಳತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡುಬಿದ್ರಿ, ಕರಾವಳಿ ಬೈಪಾಸ್ ಮತ್ತು ಕುಂದಾಪುರದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಪರದಾಡುವಂತಾಗಿದೆ. ನವಯುಗ ಕಂಪೆನಿಯನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಲು ಒತ್ತಡ ಹೇರಲಾಗುವುದು ಎಂದರು.
ಟೋಲ್ ಸಂಗ್ರಹಕ್ಕೆ ವಿರೋಧ
ಕಾಮಗಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹಕ್ಕೆ ಪ್ರಾರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದೆ. ಈ ಬಗ್ಗೆ ಡಿಸಿ ಜತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಸರಿಯಲ್ಲ. ಈ ಬಗ್ಗೆ ದೇಶದಲ್ಲಿ ಯಾವ ವ್ಯವಸ್ಥೆ ಜಾರಿಯಲ್ಲಿದೆಯೋ ಅದನ್ನೇ ಇಲ್ಲೂ ಅನುಷ್ಠಾನಗೊಳಿಸುವಂತೆ ಆಗ್ರಹಿಸುತ್ತೇವೆ ಎಂದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಸ್ಪರ್ಧಿಸಲು ಆಸಕ್ತಿಯಿಲ್ಲ ಎಂದು ಹಿಂದೆ ಹೇಳಿದ್ದೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಕೇಂದ್ರದ ನಾಯಕರು ಬಹಿರಂಗ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಏನೂ ಹೇಳಲಾರೆ ಎಂದರು.
ಶಾಸಕ ಲಾಲಾಜಿ ಆರ್. ಮೆಂಡನ್, ಶಿಲ್ಪಾ ಜಿ. ಸುವರ್ಣ, ಶಶಿಪ್ರಭಾ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಕುತ್ಯಾರು ನವೀನ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಿಥುನ್ ಆರ್. ಹೆಗ್ಡೆ ಉಪಸ್ಥಿತರಿದ್ದರು.