Advertisement

ಜಯದೇವ ಆಸ್ಪತ್ರೆಗಾಗಿ ಬಡವರ ಹೃದಯ ಮಿಡಿತ

07:18 PM Mar 12, 2021 | Team Udayavani |

ದಾವಣಗೆರೆ : ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವಂತೆ ನಗರದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಕಾರ್ಯಾರಂಭ ಮಾಡಿದರೆ ಸಾವಿರಾರು ಬಡ ಹೃದಯಗಳಿಗೆ ಜೀವಬಲ ತುಂಬುವ ನಿರೀಕ್ಷೆ ಗರಿಗೆದರಿದೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಜೆಟ್‌ ನಲ್ಲಿ ನಗರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಯ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಅವರ ಘೋಷಣೆ ಸಾಕಾರಗೊಂಡು ಉಪಕೇಂದ್ರ ಕಾರ್ಯ ನಿರ್ವಹಿಸಿದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಹೃದ್ರೋಗಗಳಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವ ಜತೆಗೆ ದೂರದ ಊರುಗಳಿಗೆ ಅಲೆದಾಡುವುದು

ತಪ್ಪಲಿದೆ. ಜಿಲ್ಲೆ ಸೇರಿದಂತೆ ಸುತ್ತಲಿನ ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ ಭಾಗದ ಬಡವರ ಹೃದಯಕ್ಕೂ ಇದು ಆರೈಕೆ ನೀಡಲಿದೆ. ದಾವಣಗೆರೆ ನಗರದಲ್ಲಿ ಹೃದಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ವಿವಿಧ ಖಾಸಗಿ ಆಸ್ಪತ್ರೆಗಳು ಇವೆ. ಆದರೆ, ಹೃದ್ರೋಗಕ್ಕೆ ಸಂಬಂಧಿಸಿದ ವಿಶೇಷ ಸರ್ಕಾರಿ ಆಸ್ಪತ್ರೆಗಳಿಲ್ಲ. ಬಡವರು ಹೃದ್ರೋಗಕ್ಕೊಳಗಾದರೆ ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಅಂಜಿ ಚಿಕಿತ್ಸೆಯಿಂದಲೇ ದೂರ ಉಳಿಯಬೇಕಿತ್ತು. ಇಲ್ಲವೇ ಸರ್ಕಾರಿ ಸೌಲಭ್ಯ ಬಯಸಿ ಜಯದೇವ ಆಸ್ಪತ್ರೆ ಇಲ್ಲವೇ ಇತರ ಶಾಖೆಗಳಿರುವ ಬೆಂಗಳೂರು, ಮೈಸೂರು, ಕಲಬುರಗಿಯಂಥ ದೂರದ ಊರುಗಳಿಗೆ ಅಲೆಯಬೇಕಿತ್ತು. ಜಯದೇವ ಆಸ್ಪತ್ರೆಯ ಉಪಕೇಂದ್ರವೇ ದಾವಣಗೆರೆಯಲ್ಲಿ ಸ್ಥಾಪನೆಯಾದರೆ ಈ ಭಾಗದ ಬಡವರಿಗೆ ಸುಲಭವಾಗಿ ಚಿಕಿತ್ಸೆ ದೊರೆತು ಬಡಹೃದಯಗಳಿಗೆ ಭದ್ರತೆ ಸಿಕ್ಕಂತಾಗುತ್ತದೆ ಎಂದು ಭಾವಿಸಲಾಗಿದೆ.

ಏನೆಲ್ಲ ಸೌಲಭ್ಯ ಸಿಗುತ್ತವೆ?: ಜಿಲ್ಲೆಗೆ

ಘೋಷಣೆಯಾಗಿರುವುದು ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರವಾಗಿದ್ದು, ಸರ್ಕಾರ ಘೋಷಿಸಿದಂತೆ ಇದು ಕೇವಲ 50 ಹಾಸಿಗೆಯುಳ್ಳ ಆಸ್ಪತ್ರೆಯಾಗಿರಲಿದೆ. ಉಪ ಕೇಂದ್ರದಲ್ಲಿ ಹೃದಯ ರಕ್ತನಾಳಗಳಲ್ಲಿ ಉಂಟಾಗಿರುವ ತಡೆಗಳನ್ನು ಗುರುತಿಸುವ ಆಂಜಿಯೋಗ್ರಾಂ, ರಕ್ತನಾಳಗಳಲ್ಲಿನ ರಕ್ತ ಸಂಚಾರ ಸುಗಮಗೊಳಿಸುವಿಕೆಯ ಆಂಜಿಯೋಪ್ಲಾಸ್ಟಿ, ಹೃದಯ ಸಮಸ್ಯೆ ಪತ್ತೆ ಹಚ್ಚುವಿಕೆಯ ಟಿಎಂಟಿ-ಇಕೋ ತಪಾಸಣೆ, ಹೃದಯಬಡಿತದ ತಪಾಸಣೆ ಹಾಗೂ ನಿಯಂತ್ರಣದ ಫೇಸ್‌ ಮೇಕರ್‌, ಹೃದ್ರೋಗಗಳಿಗೆ ಸಂಬಂಧಿಸಿದ ಪ್ರಯೋಗಾಲಯ ಸೇರಿದಂತೆ ಇನ್ನಿತರ ಚಿಕಿತ್ಸಾ ಸೇವೆಗಳು ಈ ಕೇಂದ್ರದಿಂದ ಸಿಗುವ ನಿರೀಕ್ಷೆ ಇದೆ.

Advertisement

ಇಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದೆಲ್ಲ ಸೇವೆ ಸಿಗುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಇಲ್ಲಿಂದಲೇ ಮುಖ್ಯ ಕೇಂದ್ರಕ್ಕೆ ಶಿಫಾರಸು ಮಾಡುವುದರಿಂದ ಸುಲಭವಾಗಿ ಹಾಗೂ ಶೀಘ್ರವಾಗಿ ಆ ಸೇವೆಯನ್ನೂ ಬಡವರು ಪಡೆಯಲು ಅನುಕೂಲವಾಗಲಿದೆ.

ಸಾಮಾನ್ಯವಾಗಿ ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ದುಬಾರಿಯಾಗಿದ್ದು, ಹೃದಯ ಚಿಕಿತ್ಸೆಯಲ್ಲಿ ಅಳವಡಿಸುವ ಸ್ಟಂಟ್‌ಗೆ ಅಂದಾಜು ಕನಿಷ್ಟ 40 ಸಾವಿರದಿಂದ ಎರಡೂ¾ರು ಲಕ್ಷ ರೂ.ವರೆಗೂ ಖರ್ಚು ತಗಲುತ್ತದೆ. ಇಷ್ಟೊಂದು ದುಬಾರಿಯಾಗಿರುವ ಚಿಕಿತ್ಸೆ ಈ ಕೇಂದ್ರದ ಮೂಲಕ ಅತೀ ಕಡಿಮೆ ದರದಲ್ಲಿ ಇಲ್ಲವೇ ಉಚಿತವಾಗಿ ಲಭಿಸಲಿವೆ. ಬಿಪಿಎಲ್‌ ಕಾರ್ಡ್‌ದಾರರು, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಆರೋಗ್ಯ ವಿಮೆಯ ಫಲಾನುಭವಿಗಳಿಗಂತೂ ಈ ಸೇವೆ ಸುಲಭವಾಗಿ ದೊರಕಿ, ಬಡವರ ಜೀವ ಕಾಪಾಡುವಲ್ಲಿ ಸಹಕಾರಿಯಾಗಲಿದೆ.

ಹಿಂದಿನಂತೆ ಆಗದಿರಲಿ : ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2017-18ನೇ ಸಾಲಿನ ಬಜೆಟ್‌ನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್‌, ಹೃದಯ ರೋಗ ಮತ್ತು ಜೀವನಕ್ರಮ ಆಧಾರಿತ ರೋಗಗಳ ಚಿಕಿತ್ಸೆಗಾಗಿ 25 ಕೋಟಿ ರೂ. ಗಳಲ್ಲಿ ನಗರದಲ್ಲಿ ಸೂಪರ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಆ ಘೋಷಣೆ ಈವರೆಗೂ ಘೋಷಣೆಯಾಗಿಯೇ ಉಳಿದಿದೆ. ಹೀಗಾಗಿ ಜನರಿಗೆ ಬಜೆಟ್‌ ಘೋಷಣೆ ಮೇಲಿನ ನಂಬಿಕೆಯೇ ಕಡಿಮೆಯಾಗಿದೆ. ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಿಸಿರುವ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರವು ಬಡವರ ಹೃದಯ ಕಾಪಾಡಿ, ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಇದು ಕೇವಲ ಘೋಷಣೆಗೆ ಸೀಮಿತವಾಗಬಾರದು ಎಂಬುದು ಜಿಲ್ಲೆಯ ಜನರ ಅಪೇಕ್ಷೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next