Advertisement

ಬರೀ ಮಾತು-ಪಕ್ಷಾಂತರದಲ್ಲೇ ಮುಗಿದೋಯ್ತು ಐದು ವರ್ಷ

10:37 AM May 10, 2021 | Team Udayavani |

ವರದಿ: ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಜಿಲ್ಲೆಯ ಗ್ರಾಮೀಣಾಭಿವೃದ್ಧಿಗೆ ಇರುವ ಜಿಪಂ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರ ಐದು ವರ್ಷಗಳ ಅವಧಿ, ಆವಾಜ್‌ -ಪಕ್ಷಾಂತರದಲ್ಲೇ ಮುಗಿಯಿತು. ಐದು ವರ್ಷಗಳ ಅವಧಿಯಲ್ಲಿ ಒಂದಿಷ್ಟು ಉತ್ತಮ ಕಾರ್ಯ ನಡೆದಿವೆಯಾದರೂ ಜಿಲ್ಲೆಯ ಸಾಮಾನ್ಯ ಜನರ ಮನಸಲ್ಲಿ ಅಜರಾಮರವಾಗಿ ಉಳಿಯುವ ಕೆಲಸಗಳಾಗಲಿಲ್ಲ.

ಹೌದು. ಕಳೆದ 2015-16ನೇ ಸಾಲಿನಲ್ಲಿ ಒಟ್ಟು 36 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್‌ 17, ಬಿಜೆಪಿ 18 ಹಾಗೂ ಓರ್ವ ರೈತ ಸಂಘದ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇದ್ದುದರಿಂದ ಕಡಿಮೆ ಸದಸ್ಯ ಸ್ಥಾನ ಹೊಂದಿದ್ದರೂ, ಜಿಪಂನಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ ನಾಯಕರು ಹಲವು ರೀತಿಯಲ್ಲಿ ನಡೆಸಿದ ರಾಜಕೀಯ ಚಟುವಟಿಕೆಯಲ್ಲಿ ಯಶಸ್ವಿಯಾಗಿದ್ದರು. ಒಟ್ಟು ಐದು ವರ್ಷಗಳ ಅವಧಿಯಲ್ಲಿ ತಲಾ 30 ತಿಂಗಳ ಅಧಿಕಾರವಧಿಯ ಒಳಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ರೈತ ಸಂಘದ ಮುತ್ತಪ್ಪ ಕೋಮಾರ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡುವ ಜತೆಗೆ ಬಿಜೆಪಿಯ ಓರ್ವ ಸದಸ್ಯೆಯನ್ನು ಗೈರು ಉಳಿಸುವ ಮೂಲಕ ಕಾಂಗ್ರೆಸ್‌ನ ವೀಣಾ ವಿಜಯಾನಂದ ಕಾಶಪ್ಪನವರ ಅಧಿಕಾರದ ಗದ್ದುಗೆ ಹಿಡಿದಿದ್ದರು.

ತಮ್ಮದೇ ಪಕ್ಷದ ಸದಸ್ಯರು ಕೈಕೊಟ್ಟ ಪರಿಣಾಮ ಬಿಜೆಪಿ 18 ಸ್ಥಾನ ಗೆದ್ದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು. ಗಮನ ಸೆಳೆದ ವೀಣಾ: ಅಧಿಕಾರಕ್ಕೆ ಬರಲು ತಮ್ಮ ಪಕ್ಷಕ್ಕೆ ಒಂದು ಸ್ಥಾನ ಕಡಿಮೆ ಇದ್ದರೂ ಆಗ ಶಾಸಕರಾಗಿದ್ದ ಪತಿ ವಿಜಯಾನಂದ ಹಾಗೂ ಕಾಂಗ್ರೆಸ್‌ನ ಹಿರಿಯರ ಸಹಕಾರದೊಂದಿಗೆ ಬಾದಾಮಿ ತಾಲೂಕಿನ ಬಿಜೆಪಿಯ ಓರ್ವ ಸದಸ್ಯೆಯ ಪರೋಕ್ಷ ಬೆಂಬಲದ ಮೂಲಕ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ವೀಣಾ ಕಾಶಪ್ಪನವರ ತಮ್ಮ ಇಡೀ ಅಧಿಕಾರವಧಿಯಲ್ಲಿ ರಾಜ್ಯವೇ ಗಮನ ಸೆಳೆಯುವ ಕಾರ್ಯ ಮಾಡಿದ್ದರು.

ಓರ್ವ ಮಹಿಳಾ ಅಧ್ಯಕ್ಷೆಯಾಗಿ, ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯದ ಜಾಗೃತಿ ಮೂಡಿಸಲು, ಗ್ರಾಮೀಣ ಭಾಗಕ್ಕೆ ಮೂಲಸೌಲಭ್ಯ ಕಲ್ಪಿಸುವ ಮಹದಾಸೆಯೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದರು. ತಮ್ಮದೇ ತಾಲೂಕಿನ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ ಗ್ರಾಮದಿಂದ ಆರಂಭವಾದ ಗ್ರಾಮ ವಾಸ್ತವ್ಯ ಎಂಬ ಯೋಜನೆ ಜಿಲ್ಲೆಯ ಬಾಗಲಕೋಟೆ ತಾಲೂಕು ಹೊರತುಪಡಿಸಿ, ಉಳಿದೆಲ್ಲ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆದಿತ್ತು. ಇದಕ್ಕೆ ಗ್ರಾಮೀಣ ಭಾಗದ ಮಹಿಳೆಯರಿಂದ ಶ್ಲಾಘನೆ ವ್ಯಕ್ತವಾಗಿತ್ತು. ಜತೆಗೆ ಕೇಂದ್ರ ಸರ್ಕಾರವೂ ಸ್ವತ್ಛ ಭಾರತ ಮಿಷನ್‌ ಅಡಿಯಲ್ಲಿ ವೀಣಾ ಕಾಶಪ್ಪನವರ ಅವರಿಗೆ ಪುರಸ್ಕಾರ ನೀಡಿ ಗೌರವಿಸಿತ್ತು.

Advertisement

ವೀಣಾಕ್ಕಗೆ ಬೈ; ಬಾಯಕ್ಕಗೆ ಸೈ: ಜಿಪಂ ಅಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವಾಗಲೇ ವೀಣಾ ವಿರುದ್ಧ ತಮ್ಮದೇ ಪಕ್ಷದಲ್ಲಿ ಅಪಸ್ವರ ಜೋರಾಗಿ ಕೇಳಿ ಬಂದಿತ್ತು. ಇದು ಅವಿಶ್ವಾಸ ನಿರ್ಣಯದವರೆಗೂ ಹೋಗಿತ್ತು. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ವೀಣಾ ಅವರೇ ರಾಜಿನಾಮೆ ನೀಡಿದ್ದರು. ಬಳಿಕ ಮಾಜಿ ಸಚಿವ ಎಚ್‌.ವೈ.ಮೇಟಿ ಪುತ್ರಿ ಬಾಯಕ್ಕ ಮೇಟಿ ಜಿಪಂ ಅಧ್ಯಕ್ಷೆಯಾಗಿ ಅಧಿಕಾರಕ್ಕೇರಿದ್ದರು. ಇವರು ಅಧಿಕಾರಕ್ಕೇರಿದ್ದೇ ರೋಚಕವಾಗಿತ್ತು. ವೀಣಾ ಅವರನ್ನು ಇಳಿಸಲು ಕಾಂಗ್ರೆಸ್‌ನ ಕೆಲವರು ತಂತ್ರ ನಡೆಸಿದ್ದರೆ, ಬಾಯಕ್ಕ ಅಧ್ಯಕ್ಷರಾಗಬಾರದೆಂಬ ತಂತ್ರ ಅವರದೇ ಪಕ್ಷದ ಕೆಲವರು ರೂಪಿಸಿದ್ದರು. ಹೀಗಾಗಿ ಕಾಂಗ್ರೆಸ್‌ನ ಓರ್ವ ಮಹಿಳಾ ಸದಸ್ಯೆ, ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದಕ್ಕೆ ರೋಚಕ ಪ್ರತಿತಂತ್ರ ರೂಪಿಸಿದ್ದ ಬಾಯಕ್ಕ ಮೇಟಿ ಮತ್ತು ತಂಡ ಬಿಜೆಪಿಯ ಐದು ಜನ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷ ಗಾದಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಸದಸ್ಯರು ತಮ್ಮ ಸ್ವ ಪಕ್ಷಕ್ಕೆ ಕೈಕೊಟ್ಟರೆ, ಕಾಂಗ್ರೆಸ್‌ನ ಕೆಲ ಸದಸ್ಯರೂ ತಮ್ಮ ಮಾತೃಪಕ್ಷಕ್ಕೆ ಕೈಕೊಟ್ಟು, ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಇದೆಲ್ಲ ಅಧಿಕಾರಕ್ಕಾಗಿ, ಪ್ರತಿಷ್ಠೆಗಾಗಿ ನಡೆದ ಪ್ರಕ್ರಿಯೆ ಎಂಬುದು ಹೊಸದಲ್ಲ.

ಸವಾಲು-ಪ್ರತಿ ಸವಾಲ್‌; ಈ ಐದು ವರ್ಷಗಳ ಜಿಪಂ ಸಾಮಾನ್ಯ ಸಭೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗಿಂತ, ರಾಜಕೀಯ ಪ್ರತಿಷ್ಠೆ, ಸವಾಲು-ಪ್ರತಿ ಸವಾಲು, ಆವಾಜ್‌ ಹಾಕುವಲ್ಲೇ ಪೂರ್ಣಗೊಂಡಿತು. ಪ್ರತಿ ಸಾಮಾನ್ಯ ಸಭೆಯಲ್ಲೂ ಬಹುತೇಕ ಸದಸ್ಯರು ಪ್ರತಿಷ್ಠೆಗಿಳಿದು ಧರಣಿ-ಭಾಷಣ ಮಾಡುತ್ತಿದ್ದರೆ, ಐದು ವರ್ಷಗಳ ಮೊದಲ ಅವಧಿಯಲ್ಲಿ ಆಗ ಶಾಸಕರಾಗಿದ್ದ ಕಾಶಪ್ಪನವರ ಮತ್ತು ಸದಸ್ಯರಾಗಿದ್ದ ವೀರೇಶ ಉಂಡೋಡಿ, ಶಶಿಕಾಂತ ಪಾಟೀಲರ ಮಧ್ಯೆ ಉಗ್ರಪ್ರತಾಪದ ಮಾತುಗಳು ಕೇಳಿ ಬರುತ್ತಿದ್ದವು. ಜಿಪಂ ಸಾಮಾನ್ಯ ಸಭೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವೇದಿಕೆಯಾಗುವ ಬದಲು, ಪ್ರತಿಷ್ಠೆಯ ರಾಜಕೀಯಕ್ಕೆ ಪ್ರಾಂಗಣವಾಗಿದ್ದೇ ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next