Advertisement

ಹೊಸ ರೂಪ ಪಡೆದ ಕೆರೆ: ಪಾಳು ಬಿದ್ದಿದ್ದ ಕೆರೆಯಲ್ಲೀಗ ಸಮೃದ್ಧ ಜಲನಿಧಿ

10:33 AM Sep 18, 2017 | Harsha Rao |

ಕಡಬ: ಪಾಳುಬಿದ್ದು ಮೈದಾನದಂತಾಗಿದ್ದ ರಾಮಕುಂಜದ ಅಮೈ ಕೆರೆ ಸರ್ವ ಋತು ಕೆರೆಯಾಗಿ ಅಭಿವೃದ್ಧಿಗೊಂಡು ಉದ್ಘಾಟ ನೆಗೆ ಸಿದ್ಧ ಗೊಂಡಿದೆ. ಗಾಂಧಿ ಪುರಸ್ಕಾ ರಕ್ಕೆ ಆಯ್ಕೆಯಾಗಿರುವ ಸಂಭ್ರಮದಲ್ಲಿರುವ ರಾಮಕುಂಜ ಗ್ರಾ.ಪಂ.ನ ಮುತುವರ್ಜಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರೇರಣೆಯೊಂದಿಗೆ ಹೊಸ ರೂಪ ಪಡೆದಿರುವ ತಾಲೂಕಿನ ಪ್ರಥಮ ಕೆರೆ ಎನ್ನುವ ಹೆಗ್ಗಳಿಕೆಗೆ ಅಮೈ ಕೆರೆ ಪಾತ್ರವಾಗಿದೆ.

Advertisement

ಪುತ್ತೂರು ತಾಲೂಕಿನಲ್ಲಿ ಗ್ರಾ.ಪಂ. ನೇತೃತ್ವ ದಲ್ಲಿ ಇದು ಪ್ರಥಮ ಪ್ರಯತ್ನವಾದರೆ, ಸುಳ್ಯ ವಿಧಾನ ಸಭಾ 2ನೇ ಕೆರೆ ಇದಾಗಿದೆ. ಕೆರೆ ಅಭಿವೃದ್ಧಿಯ ಸಹಭಾಗಿತ್ವ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ   ಸಮುದಾಯ ಅಭಿವೃದ್ಧಿ ವಿಭಾಗದ 5 ಲಕ್ಷ ರೂ. ಅನುದಾನ, ಶಾಸಕ ಎಸ್‌. ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ನೀಡಿದ 20 ಲಕ್ಷ ರೂ., ಉದ್ಯೋಗ ಖಾತ್ರಿ ಯೋಜನೆಯ 25 ಲಕ್ಷ ರೂ. ಹೀಗೆ ಒಟ್ಟು 55 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ರಾಮಕುಂಜ ಪುತ್ತೂರು ತಾಲೂಕಿನಲ್ಲಿದ್ದರೂ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಕ್ಷೇತ್ರಕ್ಕೆ ಒಳಪಟ್ಟ ಬೆಳ್ಳಾರೆಯಲ್ಲಿ 1 ಕೆರೆ ಅಭಿವೃದ್ಧಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ   ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಅಭಿವೃದ್ಧಿ ಹೊಂದಿದ ದ.ಕ. ಜಿಲ್ಲೆಯ ಪ್ರಥಮ ಕೆರೆ ಇದು. ಸೋಮವಾರಪೇಟೆಯ ಬಪ್ಪನಕಟ್ಟೆಯಲ್ಲಿ ಯೋಜನೆ ಸಹಯೋಗದಲ್ಲಿ ಒಂದು ಕೆರೆ ಅಭಿವೃದ್ಧಿಪಡಿಸಲಾಗಿದೆ.

ಊರಿಗೇ ನೀರುಣಿಸುತ್ತಿದ್ದ ಕೆರೆ
ಬೇಸಗೆ ಕಾಲ ಮಳೆಗಾಲ ಎನ್ನುವ ಭೇದ ವಿಲ್ಲದೆ ಇಂದು ಕಾಲದಲ್ಲಿ ಸಮೃದ್ಧ ವಾಗಿ ನೀರಿನಿಂದ ತುಂಬಿದ್ದ ಅಮೈ ಕೆರೆ ಊರಿನ ಗೋವುಗಳಿಗೆ ಹಾಗೂ ಜನರಿಗೆ ನೀರುಣಿಸುವ ಮೂಲವಾಗಿತ್ತು. ವಿಶಾಲ ವಾದ ಪ್ರದೇಶದಲ್ಲಿ ಹರಿಡಿಕೊಂಡು ಸರೋವರದಂತೆ ಕಂಡು ಬರುತ್ತಿದ್ದ ಕರೆ ಕಾಲಕ್ರಮೇಣ ನಿರ್ಲಕ್ಷ್ಯಕ್ಕೊಳ ಗಾಗಿ ಹೂಳು ತುಂಬಿ ಮೈದಾನದ ರೂಪಕ್ಕೆ ಬಂದಿತ್ತು. ಕೆಲ ವರ್ಷಗಳಿಂದ ಈ ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಎನ್ನುವ ಪರಿಸ್ಥಿತಿ ಎದುರಾದಾಗ ಗ್ರಾ.ಪಂ.ನ ಕಣ್ಣಿಗೆ ಬಿದ್ದ ಅಮೈ ಕೆರೆ ಇಂದು ಮತ್ತೆ ತಿಳಿನೀರು ತುಂಬಿಕೊಂಡು ಕಂಗೊಳಿಸುತ್ತಿದೆ. 162 ಅಡಿ ಉದ್ದ, 130 ಅಡಿ ಅಗಲ ಹಾಗೂ 42 ಅಡಿ ಆಳದಲ್ಲಿ ಸುಮಾರು 80 ಸೆಂಟ್ಸ್‌ ಜಾಗದಲ್ಲಿ ಕೆರೆ ನಿರ್ಮಾಣವಾ ಗಿದೆ. ದನ ಕರುಗಳು, ಪ್ರಾಣಿಗಳು ಕೆರೆಗೆ ಇಳಿಯದಂತೆ ಸುತ್ತ ಭದ್ರವಾದ ಆವರಣವನ್ನೂ ನಿರ್ಮಿಸಲಾಗಿದೆ.

ಅಂತರ್ಜಲಮಟ್ಟ ಏರಿಕೆಗೆ ಪೂರಕ
ಕೆರೆ ಅಭಿವೃದ್ಧಿಯಾಗಿರುವುದರಿಂದ ಪರಿಸರ ದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ. ಕೆರೆಯ ಆಸುಪಾಸಿನಲ್ಲಿ ಗ್ರಾ.ಪಂ.ನ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ 12ಕ್ಕೂ ಹೆಚ್ಚು ತೆರೆದ ಬಾವಿಗಳಲ್ಲಿ ಬೇಸಗೆಯಲ್ಲೂ ಭರಪೂರ ನೀರು ಸಿಗುವ ಲಕ್ಷಣಗಳು ಗೋಚರಿ ಸುತ್ತಿವೆ. ಕೆರೆಯ ಅಭಿವೃದ್ಧಿಯಿಂದಾಗಿ ಇಲ್ಲಿನ 200ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಅಭಾವ ದೂರವಾಗಲಿದೆ. ಕೃಷಿ ತೋಟಗಳ ಜಲಮೂಲಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಲಿದೆ. ಕರೆಯಿಂದ ನೀರೆತ್ತಿ ಶಾರದಾನಗರದಲ್ಲಿರುವ ಬೃಹತ್‌ ಟ್ಯಾಂಕ್‌ಗೆ ನೀರು ತುಂಬಿಸಿ ಜನರಿಗೆ  ಕುಡಿಯುವ ನೀರು ಸರಬರಾಜು ಮಾಡುವ ಚಿಂತನೆಯೂ ಗ್ರಾ.ಪಂ.ಗೆ ಇದೆ. ಗಾಂಧಿ ಗ್ರಾಮ ಪ್ರಶಸ್ತಿಯಿಂದ ಬರುವ 5 ಲಕ್ಷ ರೂ.ವನ್ನು ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಗ್ರಾ.ಪಂ. ನಿರ್ಧರಿಸಿದೆ.

ಜನಪ್ರತಿನಿಧಿಗಳ ಸಹಕಾರ ಅಗತ್ಯ
ನಮ್ಮ ಆಡಳಿತಾವಧಿ ಯಲ್ಲಿ ಕೆರೆ ಅಭಿವೃದ್ಧಿಯಾಗಿರುವುದು ಸಂತಸ ತಂದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರೇರಣೆ, ಸುಳ್ಯ ಶಾಸಕರ ಸಂಪೂರ್ಣ ಸಹಕಾರ, ಕಾಳಜಿ ಹಾಗೂ ಮಾರ್ಗದರ್ಶನ, ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಅನನ್ಯ ಸಹಕಾರ ಕೆರೆ ಅಭಿವೃದ್ಧಿಯಾಗಲು ಕಾರಣವಾಗಿದೆ. ಗ್ರಾ.ಪಂ. ವ್ಯಾಪ್ತಿಯ ಹಳೆನೇರೆಂಕಿಯಲ್ಲೂ ಇದೇ ರೀತಿಯ ಕೆರೆಯಿದ್ದು, ಸರಕಾರ, ಜನಪ್ರತಿನಿಧಿಗಳು ಕೈಜೋಡಿಸಿದರೆ ಅದನ್ನೂ ಅಭಿವೃದ್ಧಿ ಮಾಡಲು ಚಿಂತಿಸಲಾಗುವುದು.
ಪ್ರಶಾಂತ್‌ ಆರ್‌.ಕೆ., ಅಧ್ಯಕ್ಷರು, ರಾಮಕುಂಜ ಗ್ರಾ.ಪಂ.

Advertisement

ಅಂತರ್ಜಲ ಸದ್ಬಳಕೆ ಯಶಸ್ವಿ
ರಾಮಕುಂಜ ಗ್ರಾ.ಪಂ.ನವರು ಕೆರೆ ಅಭಿವೃದ್ಧಿ ಮಾಡುವ ಮೂಲಕ ಅಂತರ್ಜಲ ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯೋಜನೆಯ ಆಶಯದಂತೆ ಕೆರೆ ಅಭಿವೃದ್ಧಿಯನ್ನು ಅತಿ ಶೀಘ್ರದಲ್ಲಿ ಮಾಡಲಾಗಿದೆ. ಕ್ಷೇತ್ರದ ಅನುದಾನ ಹಾಗೂ ಇತರ ಅನುದಾನಗಳನ್ನು ಕ್ರೋಢೀಕರಿಸಿಕೊಂಡು ಅದ್ಬುತ ಕಾರ್ಯ ಮಾಡಿರುವ ರಾಮಕುಂಜ ಗ್ರಾ.ಪಂ. ಅಭಿನಂದನೆಗೆ ಅರ್ಹವಾಗಿದೆ.
ಕೆ.ಸೀತಾರಾಮ ಶೆಟ್ಟಿ, ನಿರ್ದೇಶಕರು, ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ

ನಾಗರಾಜ್‌ ಎನ್‌.ಕೆ. ಕಡಬ

Advertisement

Udayavani is now on Telegram. Click here to join our channel and stay updated with the latest news.

Next