Advertisement

ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಜನನಾಯಕ

06:30 AM May 29, 2018 | |

ಜಮಖಂಡಿ: ಜಮಖಂಡಿ ನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಕನಸುಗಾರರಾಗಿದ್ದ ಶಾಸಕ ಸಿದ್ದು ನ್ಯಾಮಗೌಡ, ಇಡೀ ದೇಶವೇ ಗಮನ ಸೆಳೆಯುವ ಕೆಲಸ ಮಾಡಿದ ಜನನಾಯಕ. 

Advertisement

ರೈತರೊಂದಿಗೆ ಶ್ರಮದಾನದ ಮೂಲಕ ಕೃಷ್ಣೆಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸಿ, ರೈತರ ಬದುಕು ಹಸನಗೊಳಿಸಿದವರು. ಅದೇ ಖ್ಯಾತಿಯೊಂದಿಗೆ ಸಾರ್ವತ್ರಿಕ ಚುನಾವಣೆಗೆ ಧುಮುಕಿ ಮುಖ್ಯಮಂತ್ರಿಯಾಗಿದ್ದ ದಿ.ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿ ಗಮನ ಸೆಳೆದಿದ್ದರು.

1949, ಆ.5ರಂದು ತಾಲೂಕಿನ ಕಡಕೋಳ ಗ್ರಾಮದಲ್ಲಿ ಜನಿಸಿದ ನ್ಯಾಮಗೌಡ, ಸ್ಥಳೀಯ ಬಿಎಲ್‌ಡಿಇ ಸಂಸ್ಥೆಯಲ್ಲಿ ಬಿಎಸ್ಸಿ ಪದವಿ ಮುಗಿಸಿ, ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಾಗಿ ಗುರುತಿಸಿಕೊಂಡಿದ್ದರು. ಎಪಿಎಂಸಿ ಅಂಗಡಿಗೆ ಆಗಮಿಸುವ ರೈತರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಅವರು, ಸಂಕಷ್ಟಗಳನ್ನು ಅತ್ಯಂತ ಸಮೀಪದಿಂದ ಕಂಡಿದ್ದರು. 

ಪ್ರತಿ ವರ್ಷ ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಬವಣೆ ಅರಿತು 1989ರಲ್ಲಿ ರೈತರನ್ನು ಒಂದುಗೂಡಿಸಿ, ಅಂದಾಜು 90 ಲಕ್ಷ ರೂ. ವೆಚ್ಚದಲ್ಲಿ ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಖಾಸಗಿ ಬ್ಯಾರೇಜ್‌ ನಿರ್ಮಿಸಲು ಮೂಲ ಕಾರಣರಾಗಿದ್ದರು. ಇದರಿಂದ 35 ಸಾವಿರ ಎಕರೆ ಜಮೀನಿಗೆ ನೀರು ಹರಿಸಿದ್ದರು.

2013ರಲ್ಲಿ ಅದೇ ಬ್ಯಾರೇಜ್‌ ಎತ್ತರಿಸುವ ಮೂಲಕ 1.50 ಟಿಎಂಸಿ ಅಡಿ ಹೆಚ್ಚುವರಿ ನೀರು ಸಂಗ್ರಹಿಸಲು ಕಾರಣರಾಗಿದ್ದರು. ಈ ಯೋಜನೆಗೆ “ಶ್ರಮಬಿಂದು ಸಾಗರ’ ಎಂದು ಹೆಸರಿಟ್ಟು, ರೈತರ ಶ್ರಮದ ಬ್ಯಾರೇಜ್‌ ತುಂಬಿಸುವ ಕೆಲಸ ಮಾಡಿದ್ದರು. ಈ ಕಾರ್ಯಕ್ಕೆ ರೈತರಿಂದಲೇ ಹಣ ಸಂಗ್ರಹಿಸಿ ಕೆಲಸ ಮುಗಿಸಿದ್ದರು. ಬಳಿಕ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿ 10 ಕೋಟಿ ರೂ. ಅನುದಾನ ತಂದು ಹಣ ಕೊಟ್ಟ ರೈತರಿಗೆ ಮರಳಿ ಕೊಡಿಸಿದ್ದರು.

Advertisement

ಕನ್ನಡ ಸಂಘದ ಮೂಲಕ ಆರಂಭ:
ಕನ್ನಡ ಸಂಘದ ಅಧ್ಯಕ್ಷರಾಗಿ ಸಾಮಾಜಿಕ ಕ್ಷೇತ್ರ ಆರಂಭಿಸಿದ ಅವರು, ಪ್ರತಿಷ್ಠಿತ ಅರ್ಬನ್‌ ಬ್ಯಾಂಕ್‌ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1991ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. 1998ರಲ್ಲಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡು ಆರು ವರ್ಷಗಳ ಕಾಲ ಎರಡೂ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು.

2013ರಲ್ಲಿ ಮೊದಲ ಬಾರಿಗೆ ಜಮಖಂಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿದ್ದರು. ಈ ಕ್ಷೇತ್ರದ ಶಾಸಕರಾದ ಬಳಿಕ ನಗರದಲ್ಲಿ ಗಮನ ಸೆಳೆಯುವ, ಮೂಲ ಸೌಲಭ್ಯಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಅತಿಹೆಚ್ಚು ಒತ್ತು ನೀಡಿದ್ದರು. ನೀರು, ನೀರಾವರಿ, ಕ್ರೀಡೆ (ಸೈಕ್ಲಿಂಗ್‌), ಕೃಷಿ, ವ್ಯಾಪಾರ ಅವರ ಅಚ್ಚುಮೆಚ್ಚಿನ ಕ್ಷೇತ್ರಗಳು. ಜತೆಗೆ ಅಧ್ಯಾತ್ಮದೆಡೆಗೂ ಒಲವು ಹೊಂದಿದ್ದರು. 

ಕಳೆದ 5 ವರ್ಷದ ಶಾಸಕರ ಅವ ಧಿಯಲ್ಲಿ ನಗರದಲ್ಲಿ ಸಂಸತ್‌ ಮಾದರಿಯ ಮಿನಿ ವಿಧಾನಸೌಧ, ಜರ್ಮನ್‌ ಮಾದರಿ ಬಸ್‌ ನಿಲ್ದಾಣ ಹಾಗೂ ಕಾರ್ಯಾಗಾರ ಘಟಕ, ಜಿ+3 ಮಾದರಿ ಸುಸಜ್ಜಿತ ರಾಣಿ ಕಿತ್ತೂರ ಚೆನ್ನಮ್ಮ ಸಂಕೀರ್ಣ ಸೇರಿ ಅನೇಕ ಜನಪರ ಅಭಿವೃದ್ಧಿ ಕಾರ್ಯ ಮಾಡಿ ಜನಮೆಚ್ಚುಗೆ ಪಡೆದಿದ್ದರು.

ಈಚೆಗೆ ನಡೆದ 2018ರ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ ಪಕ್ಷದಿಂದ ಗೆಲವು ಸಾಧಿ ಸಿದ್ದರು. ಮೇ 15ರಂದು ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದ ನಂತರ ಬೆಂಗಳೂರು- ದೆಹಲಿ ಸುತ್ತಾಟದಲ್ಲಿದ್ದರು. 2ನೇ ಬಾರಿಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಕ್ಷೇತ್ರಕ್ಕೆ ಆಗಮಿಸಿ, ಇನ್ನಷ್ಟು ಜನಪರ ಕೆಲಸ ಮಾಡುವ ಆಶಯ ಹೊಂದಿರುವಾಗಲೇ ವಿಧಿ ಅಟ್ಟಹಾಸ ಮೆರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next