ಲಕ್ನೋ: ಆಗ್ರಾ -ಲಕ್ನೋ ಎಕ್ಸ್‌ಪ್ರೆಸ್ ವೇ ಯಲ್ಲಿ ವಾಜಿದಾಪುರ್‌ನ ದೌಕಿ ಎಂಬಲ್ಲಿ ಭಾರೀ ಮಳೆಯ ಪರಿಣಾಮವಾಗಿ ಹೊಸ ಎಸ್‌ಯುವಿ ಕಾರು 50 ಅಡಿ ಆಳಕ್ಕೆ ಬಿದ್ದ ಘಟನೆ ಬುಧವಾರ ನಡೆದಿದೆ. ಅದೃಷ್ಟವಷಾತ್ ಕಾರಿನಲ್ಲಿದ್ದ ನಾಲ್ವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದರು. ನಾಲ್ವರನ್ನು ರಕ್ಷಿಸುವಲ್ಲಿ ನೆರವಾದರು. ಸ್ಕ್ರೇನ್‌ನ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದ್ದು ಜಖಂಗೊಂಡಿದೆ.
ಬುಧವಾರವಷ್ಟೇ ಮುಂಬಯಿಯಿಂದ ಕಾರನ್ನು ತರಿಸಿ ಕನೌಜ್‌ಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.
ಮಳೆಯಿಂದಾಗಿ ಉತ್ತರ ಪ್ರದೇಶದಲ್ಲಿ ಹಲವು ಅವಘಡಗಳು ಸಂಭವಿಸಿದ್ದು 24 ಗಂಟೆಗಳ ಒಳಗೆ ಅಪಘಾತಗಳಲ್ಲಿ 92 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.