Advertisement
3 ದಿನದಲ್ಲಿ ಸರ್ಕಾರಕ್ಕೆ ನೆರೆ ಹಾನಿ ವರದಿ: ಸಿ.ಸಿ.ಪಾಟೀಲ್ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ರಚನೆ ಮಾಡಿದ ಬಳಿಕ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಸಚಿವರ ತಂಡ ರಚನೆ ಮಾಡಿದ್ದಾರೆ. ನೆರೆ ಪೀಡಿತ ಪ್ರದೇಶಕ್ಕೆ ತೆರಳಿ ವರದಿ ನೀಡುವಂತೆ ಸೂಚಿಸಿದ್ದು, 2-3 ದಿನದಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
Related Articles
ಹಾಸನ: ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿ, ಪ್ರವಾಹದ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾಡಳಿತ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು. ಎನ್‌ಡಿಆರ್‌ಎಫ್ ಪ್ರಕಾರ ಹಾಗೂ ವಾಸ್ತವಿಕ ಹಾನಿಯ ಅಂದಾಜಿನ ಬಗ್ಗೆ ಪರಿಹಾರದ ಪ್ರಸ್ತಾವನೆಯನ್ನು ಪ್ರತ್ಯೇಕವಾಗಿ ಸಲ್ಲಿಸಬೇಕೆಂದು ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಸಿ.ಟಿ.ರವಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.
Advertisement
ಜಿಲ್ಲೆಯ ಅತಿವೃಷ್ಟಿ ಹಾನಿ ಅಧ್ಯಯನಕ್ಕೆ ಆಗಮಿಸಿರುವ ಸಚಿವರು, ನಗರದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು. ಅತಿವೃಷ್ಟಿ ಹಾಗೂ ಪ್ರವಾಹದ ಹಾನಿಯ ಮಾಹಿತಿ ಪಡೆದುಕೊಂಡರು. ಬಳಿಕ, ಸುದ್ದಿಗಾರರ ಜತೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ವರ್ಷಕ್ಕೆ ಎರಡು ಕಂತುಗಳಲ್ಲಿ ನೀಡಲು ಉದ್ಧೇಶಿಸಿರುವ 4,000 ರೂ.ಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತ ಜಿಲ್ಲೆಗಳಲ್ಲಿ ಒಂದೇ ಕಂತಿನಲ್ಲಿ ಪಾವತಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಕ್ಕೆ ಈಗ ಅತಿವೃಷ್ಟಿ, ಪ್ರವಾಹದ ಪರಿಹಾರ ಕಾರ್ಯವೇ ಆದ್ಯತೆ. ಸದ್ಯಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳ ವಿಷಯಗಳನ್ನೂ ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿದರು.
ಧರೆ ಕುಸಿತ; ಅಧ್ಯಯನ ಆರಂಭಿಸಿದ ವಿಜ್ಞಾನಿಗಳುಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ಜನರನ್ನು ತಲ್ಲಣಗೊಳಿಸಿದ ಮಹಾ ಮಳೆ ಸಂದರ್ಭದಲ್ಲಿ ಆಗಿರುವ ಧರೆ ಕುಸಿತ ಬಗ್ಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಭೂ ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್ಕುಮಾರ್ ಹಾಗೂ ಚಿಕ್ಕಮಗಳೂರಿನ ಭೂ ವಿಜ್ಞಾನಿ ದಯಾನಂದ್, ಇಂಜಿನಿಯರ್ ರಾಘವನ್ ಅಧ್ಯಯನ ಆರಂಭಿಸಿದ್ದಾರೆ. ವಿಜ್ಞಾನಿಗಳ ತಂಡ ಚಾರ್ಮಾಡಿ ಘಾಟ್ನಿಂದ 4 ಕಿ.ಮೀ. ದೂರದಲ್ಲಿರುವ ಅಲೇಖಾನ್ ಹೊರಟ್ಟಿ, ನಂತರ ಬಾಳೂರು, ಚನ್ನಹಡ್ಲು ಗ್ರಾಮಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಈ ಪ್ರಕ್ರಿಯೆ ಇನ್ನೂ ಕೆಲ ದಿನ ಮುಂದುವರಿಯಲಿದೆ. ತಂಡದ ಭೂ ವಿಜ್ಞಾನಿಯೊಬ್ಬರು ಮಾತನಾಡಿ, ಮೊದಲ ದಿನ ಅಧ್ಯಯನ ನಡೆಸಿದಾಗ ಎಲ್ಲೆಲ್ಲಿ ಸಣ್ಣ ಝರಿಗಳು ಹರಿಯುತ್ತಿದ್ದವೋ ಅಂತಹ ಕಡೆಗಳಲ್ಲಿ ಭಾರೀ ಮಳೆ ಸುರಿದು ನೀರು ಹರಿದು ಹೋಗಿ ಅನಾಹುತಗಳು ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಬಗ್ಗೆ ಇನ್ನೂ ಹೆಚ್ಚು ಅಧ್ಯಯನ ನಡೆಸಬೇಕಿದೆ ಎಂದರು. ಆ. 2ರಿಂದ 12ರವರೆಗೆ ಮಲೆನಾಡಿನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಧರೆ ಕುಸಿತವಾಗಿತ್ತು. ಮೂಡಿಗೆರೆ ತಾಲೂ ಕಿನ ಬಾಳೂರು, ಬಣಕಲ್, ಕಳಸ ಹೋಬಳಿಗಳು ಸೇರಿದಂತೆ ಹಲವೆಡೆ ಒಂದೇ ದಿನ ಬೆಟ್ಟಗಳಲ್ಲಿ ಭೂ ಕುಸಿತವಾಗಿತ್ತು. ಇದರ ಬಗ್ಗೆ ಜನರು ಹಲವು ಸಂದೇಹ ವ್ಯಕ್ತಪಡಿಸಿದ್ದರು.
ಪ್ರವಾಹದಿಂದ 88 ಮಂದಿ ಸಾವುಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಸಾವಿನ ಸಂಖ್ಯೆ 88ಕ್ಕೆ ಏರಿದ್ದು, 6 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಾಜ್ಯ ಸರ್ಕಾರ ಅಧಿಕೃತವಾಗಿ ಈ ಕುರಿತು ಪ್ರಕಟಣೆ ನೀಡಿದ್ದು, 1,847 ಜಾನುವಾರುಗಳು ಪ್ರವಾಹದಿಂದ ಪ್ರಾಣ ಕಳೆದುಕೊಂಡಿವೆ. 103 ತಾಲೂಕುಗಳಲ್ಲಿ 303 ತಾತ್ಕಾಲಿಕ ಶಿಬಿರ ತೆರೆಯಲಾಗಿದ್ದು, 1,59,991 ಜನ ಅಲ್ಲಿ ಆಶ್ರಯ ಪಡೆದಿದ್ದಾರೆ. 1,07,503 ಮನೆಗಳು ಜಖಂಗೊಂಡಿವೆ. ಈ ಮಧ್ಯೆ, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜನರ ಅಹವಾಲು ಸ್ವೀಕರಿಸಲು ನೂತನ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ 15.48 ಕೋಟಿ ರೂ. ಸಂಗ್ರಹ
ಬೆಂಗಳೂರು: ಮುಖ್ಯಮಂತ್ರಿ ಗಳ ಪರಿಹಾರ ನಿಧಿ ಪ್ರವಾಹ ಪರಿಹಾರ ಖಾತೆಗೆ ಗುರುವಾರ 15.48 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, ಚೆಕ್ ಹಾಗೂ ಡಿಡಿ ರೂಪದಲ್ಲಿ 4.13 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್ 9 ರಿಂದ ಈವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಪ್ರವಾಹ ಪರಿಹಾರಕ್ಕಾಗಿ 34.43 ಕೋಟಿ ರೂ. ದೇಣಿಗೆ, ಚೆಕ್ ಹಾಗೂ ಡಿಡಿ ಮೂಲಕ 55.93 ಕೋಟಿ ರೂ. ಸ್ವೀಕರಿಸಲಾಗಿದೆ. ಮುಖ್ಯಮಂತ್ರಿಗಳ ಪರಿ ಹಾರ ನಿಧಿಗೆ ದೇಣಿಗೆ ನೀಡಬಯಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಅಥವಾ ಚೆಕ್ /ಡಿಡಿ ಮೂಲಕ ಜಮೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಆರು ತಿಂಗಳೊಳಗೆ ಮೂಲ ಸೌಕರ್ಯ: ಸೋಮಣ್ಣ
ಕೊಳ್ಳೇಗಾಲ: ತಾಲೂಕಿನಲ್ಲಿ ನೆರೆ ಹಾವಳಿಗೊಳಗಾಗಿರುವ ಗ್ರಾಮಗಳಿಗೆ ವಿಶೇಷ ಅನುದಾನ ಮಂಜೂರು ಮಾಡಿ ಅವನ್ನು ಮಾದರಿ ಗ್ರಾಮಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಮಳೆಯಿಂದ ಹಾನಿಗೀಡಾದ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿದರು. ಮಳೆ ಹಾನಿಗೆ ಸಿಲುಕಿ ತೊಂದರೆಗೀಡಾಗಿರುವ ಗ್ರಾಮಗಳಿಗೆ ಆರು ತಿಂಗಳ ಒಳಗಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಲಾಗುವುದು. ರೈತರು ಹೆದರಬಾರದು.
ಸರ್ಕಾರ ನಿಮ್ಮ ಜೊತೆಗೆ ಇದೆ. ಅಧಿಕಾರಿಗಳಿಂದ ಮಾಹಿತಿ ಪಡೆದ ಕೂಡಲೇ ಮುಖ್ಯಮಂತ್ರಿಗಳು ವಿಶೇಷ ಪರಿಹಾರ ಘೋಷಣೆ ಮಾಡಲಿದ್ದಾರೆ. ನೆರೆ ಪೀಡಿತ ಗ್ರಾಮಸ್ಥರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು. ಮಧ್ಯವರ್ತಿಗಳ ಹಾವಳಿ ತಡೆದು ನೆರವಾಗಿ ನಿರಾಶ್ರಿತರನ್ನು ಗುರುತಿಸಿ ಪ್ರತಿಯೊಬ್ಬರಿಗೂ ಸರ್ಕಾರ ನೀಡುವ ಪರಿಹಾರವನ್ನು ಖುದ್ದು ನೀಡಬೇಕು. ಇದರಲ್ಲಿ ತಾರತಮ್ಯವಾದ ಪಕ್ಷದಲ್ಲಿ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿರ್ಲಕ್ಷ್ಯ ತೋರಬೇಡಿ
ಹುಣಸೂರು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳನ್ನು ಸದೃಢಗೊಳಿಸಲು ಬಿಎಸ್‌ವೈ ನೇತೃತ್ವದ ಸರ್ಕಾರ ಸನ್ನದ್ಧವಾಗಿದೆ. ಅಧಿಕಾರಿ ವರ್ಗದವರು ನೊಂದವರ ಬಗ್ಗೆ ನಿರ್ಲಕ್ಷ್ಯ ತೋರದೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸ ಬೇಕೆಂದು ಸಚಿವ ಆರ್.ಆಶೋಕ್ ತಿಳಿಸಿದರು. ವೀರನಹೊಸ ಹಳ್ಳಿ ಗಿರಿಜನ ಹಾಡಿಗೆ ಭೇಟಿ ನೀಡಿದ ಅವರು, ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು.
ನೆರೆ ಹಾನಿ ಸಮೀಕ್ಷೆಗೆ ಕೇಂದ್ರ ತಂಡ: ಶ್ರೀರಾಮುಲು
ರಾಯಚೂರು: ಕೇಂದ್ರದಿಂದ ನೆರೆ ಹಾನಿ ಸಮೀಕ್ಷೆಗಾಗಿ ತಂಡ ಬರಲಿದ್ದು, ಎಷ್ಟು ಹಾನಿಯಾಗಿದೆ ಹಾಗೂ ಏನು ಪರಿಹಾರ ನೀಡಬೇಕು ಎಂಬ ಬಗ್ಗೆ ವರದಿ ನೀಡಲಿದೆ. ಅದರ ಆಧಾರದ ಮೇಲೆ ನೂರಕ್ಕೆ ನೂರರಷ್ಟು ಪರಿಹಾರ ಬಿಡುಗಡೆ ಆಗುವ ವಿಶ್ವಾಸವಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನೆರೆ ಹಾವಳಿ ಯಿಂದ ಕೊಚ್ಚಿಕೊಂಡು ಹೋಗಿರುವ ವಿದ್ಯುತ್ ಕಂಬಗಳು, ಪರಿವರ್ತಕಗಳು, ಮನೆಗಳು, ರಸ್ತೆಗಳನ್ನು ಐದು ದಿನದೊಳಗೆ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ. ಕಳೆದ ಎರಡು ದಿನಗ ಳಿಂದ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಮಾಹಿತಿ ಪಡೆಯುತ್ತಿದ್ದು, ಸಿಎಂಗೆ ವರದಿ ನೀಡಲಾಗುವುದು. ಅಗತ್ಯ ಅನುದಾನ ನೀಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಸಂತ್ರಸ್ತರ ನಿಧಿಗೆ ನೌಕರರ ಒಂದು ದಿನದ ವೇತನ
ಹೊಸಪೇಟೆ:ನೆರೆ ಸಂತ್ರಸ್ತರ ನೆರವಿಗಾಗಿ ಕನ್ನಡ ವಿಶ್ವವಿದ್ಯಾಲಯದ ನೌಕರರು ಒಂದು ದಿನದ ವೇತನ ನೀಡಲು ಮುಂದಾಗಿದ್ದಾರೆ ಎಂದು ಕುಲಪತಿ ಡಾ| ಸ.ಚಿ ರಮೇಶ ಹೇಳಿದರು. ಪರಿಸರ ದಿನಾಚರಣೆ ಮತ್ತು ವನಮಹೋತ್ಸವ ಅಂಗವಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಸರ್ಕಾರಿ ನೌಕರರು ಒಂದು ದಿನದ ವೇತನ ನೀಡಿದಂತೆ ವಿಶ್ವವಿದ್ಯಾಲಯ ನೌಕರರೂ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದಾರೆ ಎಂದರು.