ಈಗಾಗಲೇ ಶೀರ್ಷಿಕೆ ಹಾಗು ಪೋಸ್ಟರ್‌ಗಳಲ್ಲೇ ಜೋರು ಸುದ್ದಿ ಮಾಡಿದ್ದ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರತಂಡ ಇದೀಗ ಖುಷಿಯಲ್ಲಿದೆ. ಅದಕ್ಕೆ ಕಾರಣ, ಚಿತ್ರ ಬಿಡುಗಡೆ ಮುನ್ನವೇ ಚಿತ್ರದ ಟ್ರೇಲರ್, ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ಸಿಗುತ್ತಿರುವುದು. ಇದೇ ಉತ್ಸಾಹದಲ್ಲಿ ನಿರ್ದೇಶಕ ಗೋಪಿ ಕೆರೂರು ಮತ್ತು ನಿರ್ಮಾಪಕ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಚಿತ್ರವನ್ನು ಮಾ.6 ರಂದು ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.
ನಿರ್ಮಾಪಕ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ, ಸ್ವತಃ ಅವರೇ ಚಿತ್ರವನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಚಿತ್ರದ ಪ್ರತಿ ಹಾಡಿಗೂ ಉತ್ತಮ ಮೆಚ್ಚುಗೆ ಸಿಗುತ್ತಿದೆಯಲ್ಲದೆ, ಇತ್ತೀಚೆಗೆ ಬಿಡುಗಡೆಗೊಂಡಿರುವ ಸುಖ್ವೀಂದರ್ ಸಿಂಗ್ ಹಾಡಿರುವ ತಾಯಿ ಸೆಂಟಿಮೆಂಟ್ ಹಾಡಿಗೆ ಬಹುತೇಕರಿಂದ ಸಾಕಷ್ಟು ಕಾಮೆಂಟ್ಸ್ ಬರುತ್ತಿರುವುದು ಚಿತ್ರತಂಡಕ್ಕೆ ಚಿತ್ರ ಗೆಲುವಿನ ಹಾದಿಯಲ್ಲಿರುವ ಸಂತಸ.
ನಾಗೇಂದ್ರ ಪ್ರಸಾದ್ ಅವರು ಬರೆದಿರು “ಹಳೇ ಹಳೇ ಎದೆಗಾಯ, ಇದೊಂಥರಾ ಬರೀ ಮಾಯ, ಈ ಬಾಳು ಖಾಲಿ ಬಾನು, ನನ್ನೊಳಗೆ ಇಲ್ಲ ನಾನು…’ ಎಂಬ ಹಾಡಿಗೆ ಸಾಕಷ್ಟು ವೀವ್ಸ್, ಲೈಕ್ ಆಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಂತೂ ಚಿತ್ರದ ಬಿಡುಗಡೆ ಮೊದಲೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಎಂಬುದು ನಿರ್ದೇಶಕರ ಹೇಳಿಕೆ. ಇದಕ್ಕೂ ಮೊದಲು ಜಗದೀಶ್ ಶೆಟ್ಟರ್ ಹಾಗು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಅಂದಹಾಗೆ, ಇಡೀ ಚಿತ್ರ ಉತ್ತರ ಕರ್ನಾಟಕ ಭಾಷೆಯಲ್ಲಿ ಮೂಡಿಬಂದಿದ್ದು, ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಿರುವುದು ವಿಶೇಷ. ಊರಲ್ಲಿ ಸೋಮಾರಿ ಹುಡುಗನೊಬ್ಬನ ಮದುವೆ ಪುರಾಣ ಇಲ್ಲಿದೆ. ಸದಾ ಊರ ಜನರಿಂದ ಬೈಯಿಸಿಕೊಳ್ಳುವ ಹುಡುಗ ಕೊನೆಗೆ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಕಥೆ. ವಿಶೇಷವೆಂದರೆ, ಸಂಗೀತ ನಿರ್ದೇಶಕ ಅವಿನಾಶ್ ಬಾಸೂತ್ಕರ್ ಅವರು 11 ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿವೆ. ಚಿತ್ರಕ್ಕೆ ಶಿವಚಂದ್ರಕುಮಾರ್ ಹೀರೋ. ಅವರಿಗೂ ಇದು ಮೊದಲ ಸಿನಿಮಾ. ಆರಾಧ್ಯ ನಾಯಕಿ. ಉಳಿದಂತೆ ಚಿತ್ರದಲ್ಲಿ ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ ಕವಾತ್ತರ್ ಇಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಚಿತ್ಕಲ ಬಿರಾದಾರ, ಸದಾನಂದ ಕಾಳಿ, ಚಕ್ರವರ್ತಿ ದಾವಣಗೆರೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣವಿದೆ. ವೆಂಕಿ ಸಂಕಲನವಿದೆ.