“ಪ್ರಪಂಚದ ಶ್ರೇಷ್ಠ ಮರ್ಡರ್ ಮಿಸ್ಟ್ರಿ ಚಿತ್ರಗಳು, ಸೈಕೋ ಥ್ರಿಲ್ಲರ್ ಚಿತ್ರಗಳು, ಕೊರಿಯನ್ ಸಿನಿಮಾಗಳಲ್ಲಿ ಏನೇನೆಲ್ಲಾ ಇದೆ, ಇಂಡಿಯನ್, ಇಂಗ್ಲೀಷ್ ಚಿತ್ರಗಳ ಆಳ ಅಧ್ಯಯನ…’ ಇವನ್ನೆಲ್ಲಾ ನೋಡಿ, ತಿಳಿದು, ಅಳೆದು ತೂಗಿ “ವೆನಿಲ್ಲಾ’ ರೂಪುಗೊಂಡಿದೆ. ಹೌದು, ನಿರ್ದೇಶಕ ಜಯತೀರ್ಥ ಇಷ್ಟೆಲ್ಲಾ ಮಾಡಿ ಈ ಚಿತ್ರ ಮಾಡಿದ್ದಾರೆ. ಈ ಮೂಲಕ ತಮ್ಮ ಜಾನರ್ ಬದಲಿಸಿದ್ದಾರೆ.
ಈವರೆಗೆ “ಒಲವೇ ಮಂದಾರ’ ಎಂಬ ಲವ್‌ಸ್ಟೋರಿ, “ಬುಲೆಟ್ ಬಸ್ಯಾ’ ಎಂಬ ಕಾಮಿಡಿ, “ಟೋನಿ’ ಎಂಬ ಹೊಸ ಪ್ರಯತ್ನ ಹಾಗೂ “ಬ್ಯೂಟಿಫುಲ್ ಮನಸುಗಳು’ ಎಂಬ ಹೊಸ ಪ್ರಯೋಗಕ್ಕಿಳಿದಿದ್ದ ಅವರು, ಈ ಸಲ ಮರ್ಡರ್ ಮಿಸ್ಟ್ರಿ ಹಿಂದೆ ಹೊರಟಿದ್ದಾರೆ. ಈ ಕಥೆ ಬರೆಯೋಕೆ ಅವರು ತೆಗೆದುಕೊಂಡ ಸಮಯ, ಬರೋಬ್ಬರಿ ಒಂದು ವರ್ಷ. ಚಿತ್ರ ಈ ವಾರ ತೆರೆಗೆ ಬರುತ್ತಿದೆ.
ಪ್ರೇಕ್ಷಕರ ಮುಂದೆ “ವೆನಿಲ್ಲಾ’ ತರುತ್ತಿರುವ ಜಯತೀರ್ಥ, ಇಲ್ಲಿನ ನೆಲಕ್ಕೆ ಅರ್ಥ ಕೊಡುವಂತಹ, ಇಲ್ಲಿ ನಡೆಯುತ್ತಿರುವ, ಎಲ್ಲೂ ನಡೆಯಬಹುದಾದಂತಹ ಸಿಂಪಲ್ ಘಟನೆಗಳನ್ನು ಇಟ್ಟು, ಆರಂಭದಿಂದ ಅಂತ್ಯದವರೆಗೆ ಪ್ರೇಕ್ಷಕರನ್ನು ಕೂರಿಸುವ ಪ್ರಯತ್ನ ಮಾಡಿದ್ದಾರಂತೆ. ಅವರ ಪ್ರಕಾರ, ಪ್ರೇಕ್ಷಕ ಮೊದಲ ಟೈಟಲ್ ಕಾರ್ಡ್‌ನಿಂದ ಕೊನೆಯ ಟೈಟಲ್ ಕಾರ್ಡ್‌ವರೆಗೂ ನೋಡಿದರೆ ಮಾತ್ರ ಅರ್ಥಮಾಡಿಕೊಳ್ಳೋಕೆ ಸಾಧ್ಯವಂತೆ.
ಯಾಕೆಂದರೆ, ಚಿತ್ರ ಶುರುವಾದ ಹತ್ತು ನಿಮಿಷದಲ್ಲಿ ಒಂದು ಘಟನೆ ನಡೆದು, ಅಲ್ಲೊಂದು ತನಿಖೆ ಶುರುವಾಗಿ ಇನ್ನೇನೋ ಆಗಿ ಬಿಡುತ್ತಂತೆ. ಅಲ್ಲಿ ಒಂದಷ್ಟು ಗೊಂದಲಗಳು ಶುರುವಾಗಿ, ಅವನು ಇವನೇನಾ, ಇವನು ಅವನೇನಾ ಎಂಬ ಗೊಂದಲಕ್ಕೆ ಉತ್ತರ ಕಂಡುಕೊಳ್ಳುವ ಹೊತ್ತಲ್ಲೇ ಚಿತ್ರಕ್ಕೆ ಇನ್ನೊಂದು ತಿರುವು ಬಂದು, ನೋಡುಗರನ್ನು ಬೇರೆಲ್ಲೋ ಕರೆದೊಯ್ಯುತ್ತದಂತೆ.
“ಇಲ್ಲಿ ಎರಡು ಕ್ಲೈಮ್ಯಾಕ್ಸ್ ಇಟ್ಟು ಹೊಸ ಅರ್ಥ ಕಲ್ಪಿಸಿಕೊಡುವ ಪ್ರಯತ್ನ ಮಾಡಿದ್ದಾಗಿ’ ಹೇಳುತ್ತಾರೆ ಜಯತೀರ್ಥ. “ವೆನಿಲ್ಲಾ’ದ ವಿಶೇಷತೆ ಅಂದರೆ, ಹೊಸ ಪ್ರತಿಭೆಗಳ ಜೊತೆ ಕೆಲಸ ಮಾಡಿರೋದು. ಅವಿನಾಶ್ ಕಥೆಗೆ ಹೊಂದಿಕೆಯಾಗಿದ್ದಾರೆ. ಇಂತಹ ಕಥೆಗೆ ಬೇರೆ ಹೀರೋ ಇದ್ದರೆ ಪ್ರೇಕ್ಷಕರ ಮನದಲ್ಲಿ ಆ ಹೀರೋ ಇಮೇಜ್ ಬೇರೆ ಇರುತ್ತೆ. ಕಥೆಗೆ ಹೊಂದಿಕೆ ಆಗಲ್ಲ ಎಂಬ ಪ್ರಶ್ನೆ ಓಡಾಡುತ್ತೆ.
ಹಾಗಾಗಿ ಫ್ರೆಶ್ ಕಥೆಗೆ ಫ್ರೆಶ್ ಹೀರೋ ಇದ್ದರೆ ಚೆನ್ನಾಗಿರುತ್ತೆ ಎಂಬ ಕಾರಣಕ್ಕೆ ಹೊಸಬರ ಮೊರೆ ಹೋಗಿದ್ದಾರೆ ನಿರ್ದೇಶಕರು. ಸ್ವಾತಿ ಕೊಂಡೆ ನಾಯಕಿಯಾದರೆ, ರವಿಶಂಕರ್‌ಗೌಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ರೆಹಮಾನ್, ಪಾವನಾ ಕೂಡ ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರೆ. ಉಳಿದಂತೆ ಉಡುಪಿ ಹಾಗೂ ಮೈಸೂರು ರಂಗಭೂಮಿ ಕಲಾವಿದರಿದ್ದಾರೆ. ಬಿ.ಜೆ.ಭರತ್ ಅವರ ಸಂಗೀತ ಚಿತ್ರದ ಶಕ್ತಿ, ಕಿರಣ್ ಹಂಪಾಪುರ ಛಾಯಗ್ರಹಣ ಬೆನ್ನೆಲುಬು ಎನ್ನುವುದನ್ನು ಮರೆಯುವುದಿಲ್ಲ ಜಯತೀರ್ಥ.
ಎಲ್ಲಾ ಸರಿ, “ವೆನಿಲ್ಲಾ’ ಅಂದರೇನು? ಇಂದು ವೆನಿಲ್ಲಾ ನಂಬಿ ಬದುಕುತ್ತಿರುವ ಅದೆಷ್ಟೋ ರೈತರಿದ್ದಾರೆ. “ವೆನಿಲ್ಲಾ’ ರೈತನ ಹೊಟ್ಟೆಗೆ ಎಷ್ಟು ಮುಖ್ಯವೋ, ಅದು ಬೇರೆಯದ್ದಕ್ಕೂ ಅಷ್ಟೇ ಮುಖ್ಯ, ಅಲ್ಲೊಂದು ಮಾಫಿಯಾ ಕೂಡ ಇದೆ. ಅದರಿಂದ ಒಂದಷ್ಟು ದುಷ್ಪರಿಣಾಮ ಕೂಡ ಆಗುತ್ತಿದೆ. ಅದನ್ನಿಲ್ಲಿ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಒಂದು ಕೊಲೆಯ ಸುತ್ತ ನಡೆಯೋ ಘಟನೆಗಳು ಚಿತ್ರದಲ್ಲಿ ಥ್ರಿಲ್ ಎನಿಸುತ್ತವೆ ಎನ್ನುವ ಜಯತೀರ್ಥ, “ವೆನಿಲ್ಲಾ’ ಮೇಲೆ ಇನ್ನಿಲ್ಲದ ನಂಬಿಕೆ ಇಟ್ಟುಕೊಂಡಿದ್ದಾರೆ.