Advertisement

Bun Tea Movie; ಬನ್ ಮತ್ತು ಟೀ ಜತೆಗೆ ಶಿಕ್ಷಣ ವ್ಯವಸ್ಥೆ ಕಥೆ ಹೇಳಲು ಹೊರಟ ಹೊಸಬರು

04:23 PM Sep 18, 2023 | Team Udayavani |

ದಿನದಿಂದ ದಿನಕ್ಕೆ ಶಿಕ್ಷಣ ದುಬಾರಿಯಾಗುತ್ತಿದೆ. ಬಡ-ಮಧ್ಯಮ ವರ್ಗದ ಮಕ್ಕಳಿಗೆ ಕೈಗೆಟುಕುವ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಣ ನೀತಿ ಸರಿಯಾಗಿಲ್ಲ, ಇಂದಿನ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಮಾರಕ… ಶಿಕ್ಷಣಕ್ಕೆ ಸಂಬಂಧಿಸಿದ ಇಂಥ ಹತ್ತಾರು ಮಾತುಗಳನ್ನು ಪ್ರತಿನಿತ್ಯ ನಾವೆಲ್ಲ ಕೇಳುತ್ತಲೇ ಇರುತ್ತೇವೆ. ಈಗ ಇಂಥದ್ದೇ ಶಿಕ್ಷಣದ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅದರ ಹೆಸರು “ಬನ್‌ ಟೀ’

Advertisement

ಎಲ್ಲರಿಗೂ ಗೊತ್ತಿರುವಂತೆ, “ಬನ್‌’ ಮತ್ತು “ಟೀ’ ಪ್ರತಿದಿನ ಸಮಾಜದಲ್ಲಿ ಅದೆಷ್ಟೋ ಮಂದಿಯ ಹೊಟ್ಟೆ ತುಂಬಿಸುತ್ತದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನೇಕ ಬಾರಿ ಈ “ಬನ್‌-ಟೀ’ಯೇ ಆಧಾರ. ಇದೇ ವಿಷಯವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು, ಶಿಕ್ಷಣ ವ್ಯವಸ್ಥೆ, ಮಕ್ಕಳ ಮನಸ್ಥಿತಿ, ಪೋಷಕರ ಪರಿಸ್ಥಿತಿ, ಸಾಮಾಜಿಕ ಸ್ಥಿತಿ-ಗತಿ ಎಲ್ಲದರ ಸುತ್ತ “ಬನ್‌ ಟೀ’ ಸಿನಿಮಾ ಸಾಗುತ್ತದೆ.

ತನ್ನ ಸ್ನೇಹಿತನ ಜೀವನದಲ್ಲಿ ನಡೆದ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ನಿರ್ದೇಶಕ ಉದಯ ಕುಮಾರ್‌ “ಬನ್‌ ಟೀ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ಬನ್‌ ಟೀ’ ಸಿನಿಮಾದಲ್ಲಿ ಮೌರ್ಯ ಮತ್ತು ತನ್ಮಯಿ ಇಬ್ಬರು ಬಾಲ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಉಮೇಶ್‌, ಶ್ರೀದೇವಿ, ಗುಂಡಣ್ಣ ಚಿಕ್ಕಮಗಳೂರು ಮೊದಲಾದವರು ಸಿನಿಮಾದ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶವ್‌ ಆರ್‌. ಈ ಚಿತ್ರವನ್ನು ನಿರ್ಮಿಸಿದ್ದಾರೆ.

“ಇದೊಂದು ಕಂಟೆಂಟ್‌ ಆಧಾರಿತ ಸಿನಿಮಾ. ಹಾಗಾಗಿ ಇದರಲ್ಲಿ ಹೀರೋ-ಹೀರೋಯಿನ್‌ ಅಂತಿಲ್ಲ. ಇಂದಿನ ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಚಿತ್ರಣ ಈ ಸಿನಿಮಾದಲ್ಲಿದೆ. ಕೊನೆಗೊಂದು ಸಂದೇಶ ಕೂಡ ಸಿನಿಮಾದಲ್ಲಿದೆ. ಮಕ್ಕಳು, ಪೋಷಕರು ಎಲ್ಲರೂ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ. ಸಿನಿಮಾ ನೈಜವಾಗಿ ಬರಬೇಕೆಂಬ ಕಾರಣಕ್ಕೆ ಯಾವುದೇ ಸೆಟ್‌ ಬಳಸದೆ ಸ್ಲಂ, ಮಾರ್ಕೆಟ್‌, ಟ್ರಾμಕ್‌ ಸಿಗ್ನಲ್‌ನಂತಹ ಸ್ಥಳಗಳಲ್ಲಿ ಇಡೀ ಸಿನಿಮಾದ ಚಿತ್ರೀಕರಣ ಮಾಡಿದ್ದೇವೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.

“ಬನ್‌ ಟೀ’ ಸಿನಿಮಾದ ಹಾಡುಗಳಿಗೆ ಪ್ರದ್ಯೋತ್ತನ್‌ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾದಲ್ಲಿ ಹಾಡುಗಳು ಇರದಿದ್ದರೂ, ಹಿನ್ನೆಲೆ ಸಂಗೀತಕ್ಕೆ ಸಾಕಷ್ಟು ಮಹತ್ವವಿದೆಯಂತೆ. ಚಿತ್ರಕ್ಕೆ ರಾಜ ರಾವ್‌ ಛಾಯಾಗ್ರಹಣವಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೇಲರ್‌ ಮೂಲಕ ಗಮನ ಸೆಳೆಯುತ್ತಿರುವ “ಬನ್‌ ಟೀ’ ಸಿನಿಮಾವನ್ನು ಇದೇ ಸೆಪ್ಟೆಂಬರ್‌ 22ಕ್ಕೆ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next