ಕೆಲ ತಿಂಗಳ ಹಿಂದೆ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಏ ಸೋನಾ…’ ಎನ್ನುವ ಹೆಸರಿನ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿತ್ತು. ನವ ಪ್ರತಿಭೆಗಳಾದ ರಘು ಪಡುಕೋಟೆ, ಶಾಲಿನಿ ಗೌಡ ಅಭಿನಯಿಸಿದ್ದ ಈ ಮ್ಯೂಸಿಕ್ ಆಲ್ಬಂಗೆ ಸರಿಗಮಪ ಖ್ಯಾತಿಯ ಸುನೀಲ್ ಸಂಗೀತ ಸಂಯೋಜಿಸಿ, ಹಾಡಿಗೆ ಧ್ವನಿಯಾಗಿ ಜೊತೆಯಾಗಿ ತೆರೆಮೇಲೆ ಕೂಡ ಕಾಣಿಸಿಕೊಂಡಿದ್ದರು. ಹೊಸ ಪ್ರತಿಭೆಗಳ ಈ ಪ್ರಯತ್ನಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.
ಈಗ “ಏ ಸೋನಾ…’ ಆಲ್ಬಂನಲ್ಲಿ ಅಭಿನಯಿಸಿದ್ದ ರಘು ಪಡುಕೋಟೆ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ರಘು ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ “ಯಾರ್‌ಮಗ’ ಎಂದು ಹೆಸರಿಡಲಾಗಿದ್ದು, ಸದ್ಯ “ಯಾರ್‌ಮಗ’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರೈಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ನಾಯಕ ನಟ ರಘು ಪಡುಕೋಟೆ ಜನ್ಮದಿನದ ಪ್ರಯುಕ್ತ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ ಮಾತನಾಡಿದ ನವನಟ ರಘು ಪಡಕೋಟೆ, “ಬಾಲ್ಯದಿಂದಲೂ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಂಡಿರುವ ನಾನು ಇಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ಬಹಳ ವರ್ಷಗಳಿಂದ ನೃತ್ಯ ಕಲಿಕೆ, ಅಭಿನಯದ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏ ಸೋನಾ… ಮ್ಯೂಸಿಕ್ ಅಲ್ಬಂ ಮೂಲಕ ನನ್ನ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿ ನಂತರ ಚಿತ್ರದಲ್ಲಿ ಅಭಿನಯಿಸುವ ನಿರ್ಧಾರಕ್ಕೆ ಬಂದೆ’ ಎಂದರು.
“ಯಾರ್‌ಮಗ’ ಚಿತ್ರದಲ್ಲಿ ನಾಯಕಿಯಾಗಿ ವಿದ್ಯಾ ಪ್ರಭು ಅಭಿನಯಿಸುತ್ತಿದ್ದಾರೆ. ಉಳಿದಂತೆ ಗಣೇಶ್ ರಾವ್ ಕೇಸರ್‌ಕರ್, ಅಶ್ವಿನಿ ಗೌಡ, ಗುರುರಾಜ್ ಹೊಸಕೋಟೆ, ಮೈಕಲ್ ಮಧು ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ತಾಯಿಯನ್ನು ಕಳೆದುಕೊಂಡ ಮಗನ ನೋವು ಮತ್ತು ಭೂಗತ ಲೋಕದ ಸಹವಾಸ ಹುಡುಗನ ಜೀವನದಲ್ಲಿ ಏನೆಲ್ಲ ಮಾಡಿಸುತ್ತದೆ ಎನ್ನುವುದರ ಸುತ್ತ “ಯಾರ್‌ಮಗ’ ಚಿತ್ರದ ಕಥೆ ನಡೆಯಲಿದ್ದು, ಚಿತ್ರದ ನಾಯಕ ನಟ ರಘು ಪಡುಕೋಟೆ ಸ್ವತಃ ಬರೆದಿರುವ ಕಥೆಗೆ ಸುರೇಶ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜಿಸುತ್ತಿದ್ದು, ಸಿ.ಎಸ್ ಸತೀಶ್ ಚಿತ್ರದ ದೃಶ್ಯಗಳಿಗೆ ಕ್ಯಾಮರಾ ಹಿಡಿಯುತ್ತಿದ್ದಾರೆ. ಸದ್ಯ ಚಿತ್ರದ ಕೆಲವು ಪಾತ್ರಗಳಿಗೆ ಆಡೀಷನ್ ನಡೆಸುತ್ತಿರುವ ಚಿತ್ರತಂಡ, ಚಿತ್ರದ ದೃಶ್ಯಗಳು ನೈಜವಾಗಿ ಮೂಡಿ ಬರಬೇಕೆಂಬ ಕಾರಣಕ್ಕೆ ಕೆಲವು ಮಾಜಿ ರೌಡಿಗಳನ್ನ, ರೌಡಿ ಶೀಟರ್‌ಗಳಲ್ಲಿ ಗುರುತಿಸಿಕೊಂಡವರನ್ನೂ ಕರೆತಂದು ಚಿತ್ರದಲ್ಲಿ ಅಭಿನಯಿಸುತ್ತಿದೆಯಂತೆ.
ಪಕ್ಕಾ ಆ್ಯಕ್ಷನ್ ಕಂ ಸೆಂಟಿಮೆಂಟ್ ಶೈಲಿಯ ಈ ಚಿತ್ರದಲ್ಲಿ ಇಂದಿನ ಪ್ರೇಕ್ಷಕರು ಬಯಸುವ ಎಲ್ಲಾ ಮನರಂಜನೆಯ ಅಂಶಗಳೂ ಇರಲಿವೆ. 90ರ ದಶಕದ ರೆಟ್ರೋ ಸ್ಟೈಲ್ ಕಥೆ ಈ ಚಿತ್ರದಲ್ಲಿದೆ. ಚಿತ್ರ ಕೂಡ ಅದೇ ಥರ ಮೂಡಿಬರಲಿದೆ ಎನ್ನುತ್ತದೆ ಚಿತ್ರತಂಡ.
ಸಾಮಾನ್ಯವಾಗಿ ಹೀರೋಗಳನ್ನ ಸಿನಿಮಾಗಳಲ್ಲಿ ಭರ್ಜರಿ ಬಿಲ್ಡಪ್ ಸೀನ್‌ಗಳ ಮೂಲಕ, ಅದ್ಧೂರಿ ಸಾಂಗ್ಸ್ ಮೂಲಕ ಇಂಟ್ರಡ್ನೂಸ್ ಮಾಡುವುದು ಮಾಮೂಲಿ. ಆದರೆ ನಿರ್ಮಾಪಕ ಬಸವರಾಜ್ ಪಡುಕೋಟೆ “ಏ ಸೋನಾ…’ ಮ್ಯೂಸಿಕ್ ಅಲ್ಬಂ ಮೂಲಕ ತಮ್ಮ ಪುತ್ರನ ಪ್ರತಿಭೆಯನ್ನ ಪರಿಚಯಿಸಿದ್ದು, ಈಗ “ಯಾರ್‌ಮಗ’ ಚಿತ್ರದ ಮೂಲಕ ಹೀರೋ ಆಗಿ ಪ್ರೇಕ್ಷಕರಿಗೆ ಪರಿಚಯಿಸಿಸುತ್ತಿದ್ದಾರೆ.
ಬೆಂಗಳೂರು, ಮಂಗಳೂರು ಮತ್ತು ಮುಂಬೈ ಸುತ್ತಮುತ್ತ “ಯಾರ್‌ಮಗ’ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್ ಹಾಕಿಕೊಳ್ಳಲಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.