Advertisement

ಕಿವೀಸ್‌ಗೆ ಕಂಟಕವಾದ ಕುಲದೀಪ್‌

12:30 AM Jan 27, 2019 | |

ಮೌಂಟ್ ಮೌಂಗನುಯಿ (ನ್ಯೂಜಿಲೆಂಡ್‌): ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಸತತ 2ನೇ ಏಕದಿನ ಪಂದ್ಯದಲ್ಲಿ ಭಾರತ ಅಬ್ಬರದ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸಿದ್ದ ಕೊಹ್ಲಿ ನಾಯಕತ್ವದ ಭಾರತ ತಂಡ, 2ನೇ ಪಂದ್ಯದಲ್ಲಿ 90 ರನ್‌ಗಳಿಂದ ಗೆದ್ದು ಮೆರೆದಾಡಿದೆ. ಈ ಎರಡೂ ಗೆಲುವುಗಳಲ್ಲಿ ಶಿಖರ್‌ ಧವನ್‌ ಹಾಗೂ ಕುಲದೀಪ್‌ ಯಾದವ್‌ ಪಾತ್ರವಿದೆಯೆನ್ನುವುದು ಗಮನಾರ್ಹ.

Advertisement

ಮೊದಲ ಪಂದ್ಯದಲ್ಲಿ ಧವನ್‌ ಬ್ಯಾಟಿಂಗ್‌ನಲ್ಲಿ ಮಿಂಚಿ 75 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ 66 ರನ್‌ ಗಳಿಸಿದರು. ಎರಡೂ ಪಂದ್ಯಗಳಲ್ಲಿ ಎಡಗೈ ಲೆಗ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ತಲಾ 4 ವಿಕೆಟ್ ಗಳಿಸಿ ಕಿವೀಸ್‌ಗೆ ಕಡಿವಾಣ ಹಾಕಿದರು. ಎರಡೂ ಪಂದ್ಯಗಳಲ್ಲಿ ಆತಿಥೇಯ ಕಿವೀಸ್‌ ತಂಡ ಸಂಪೂರ್ಣವಾಗಿ ಎಲ್ಲ ವಿಭಾಗಗಳಲ್ಲಿ ವೈಫ‌ಲ್ಯ ಹೊಂದಿದ್ದು ಭಾರತೀಯರ ಪ್ರಾಬಲ್ಯಕ್ಕೆ ಸಾಕ್ಷಿ.

ಆತಿಥೇಯರು ತಮ್ಮ ಪ್ರದರ್ಶನವನ್ನು ಎರಡನೇ ಪಂದ್ಯದಲ್ಲಾದರೂ ಸುಧಾರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಇಲ್ಲೂ ಸಂಪೂರ್ಣ ಶರಣಾಗುವುದ ರೊಂದಿಗೆ ಪಂದ್ಯ ಯಾವುದೇ ರೋಚಕತೆಯಿಲ್ಲದೇ ಮುಕ್ತಾಯ ವಾಯಿತು. ಮೊದಲನೇ ಪಂದ್ಯದಲ್ಲಿ ವಿಫ‌ಲವಾಗಿದ್ದರೂ, 2ನೇ ಪಂದ್ಯದಲ್ಲಿ ಸಿಡಿದ ರೋಹಿತ್‌ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಭಾರತ ಸ್ಫೋಟ: 2ನೇ ಏಕದಿನದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪ್ರವಾಸಿಗಳು, ಎದುರಾಳಿ ಬೌಲಿಂಗನ್ನು ಹಿಂಡಿ ಹಾಕಿದರು. ಪ್ರಾರಂಭದಲ್ಲಿ ತಂಡ ಸಾಗಿದ ರೀತಿಯನ್ನೇ ಗಮನಿಸಿದರೆ, ಭಾರತದ ಮೊತ್ತ ಶನಿವಾರ 400 ರನ್‌ ಮುಟ್ಟಿದ್ದರೂ ಅಚ್ಚರಿಯಿರಲಿಲ್ಲ. ಆದರೆ 30 ಓವರ್‌ಗಳ ನಂತರ ರನ್‌ಗತಿಯಲ್ಲಿ ಮೊದಲಿನ ವೇಗ ಕಂಡುಬರದ ಪರಿಣಾಮ ಭಾರತ 50 ಓವರ್‌ ಮುಗಿದಾಗ 4 ವಿಕೆಟ್ ಕಳೆದುಕೊಂಡು 324 ರನ್‌ ಗಳಿಸಿತು.

ಆರಂಭಿಕ ರೋಹಿತ್‌ ಶರ್ಮ 96 ಎಸೆತಗಳಲ್ಲಿ 87 ರನ್‌ ಗಳಿಸಿದರು. ಇದರಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳಿದ್ದವು. ಇವರ ಬೆಂಬಲಕ್ಕೆ ನಿಂತ ಶಿಖರ್‌ ಧವನ್‌, 67 ಎಸೆತಗಳಲ್ಲಿ 66 ರನ್‌ ಗಳಿಸಿದರು. ಇವರ ಇನಿಂಗ್ಸ್‌ನಲ್ಲಿ 9 ಬೌಂಡರಿಗಳು ದಾಖಲಾದವು. ಕೊಹ್ಲಿ 43 ರನ್‌ ಗಳಿಸಿದರೆ, ರಾಯುಡು 47 ರನ್‌ ಗಳಿಸಿದರು. ಈ ನಾಲ್ವರು ಉತ್ತಮ ಬ್ಯಾಟಿಂಗನ್ನೇ ನಡೆಸಿದರೂ, ರನ್‌ ಗಳಿಕೆ ಸ್ವಲ್ಪ ನಿಧಾನಗತಿಯಿಂದ ಕೂಡಿತ್ತು.

Advertisement

ರನ್‌ ಗಳಿಕೆಯನ್ನು ಸ್ವಲ್ಪ ವೇಗಗೊಳಿಸಿದ್ದು ಧೋನಿ ಮತ್ತು ಕೇಧಾರ್‌ ಜಾಧವ್‌. ಇನಿಂಗ್ಸ್‌ನ ಕಡೆಯ ಹಂತದಲ್ಲಿ ಅಜೇಯರಾಗುಳಿದ ಇಬ್ಬರೂ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಧೋನಿ 33 ಎಸೆತಗಳಲ್ಲಿ ಅಜೇಯ 48 ರನ್‌ ಗಳಿಸಿದರು. ಇದರಲ್ಲಿ 5 ಬೌಂಡರಿ, 1 ಸಿಕ್ಸರ್‌ಗಳಿದ್ದವು. ಧೋನಿ ಜೊತೆಗೆ ಸಮ ಸಮ ಬ್ಯಾಟಿಂಗ್‌ ನಡೆಸಿದ ಜಾಧವ್‌, ಕೇವಲ 10 ಎಸೆತದಲ್ಲಿ 22 ರನ್‌ ಚಚ್ಚಿದರು. ಇದರಲ್ಲಿ 3 ಬೌಂಡರಿ, 1 ಸಿಕ್ಸರ್‌ಗಳಿದ್ದವು. ಭಾರತದ ಸರದಿಯಲ್ಲಿ ಕೊಹ್ಲಿ, ರಾಯುಡು, ಧೋನಿ ಅರ್ಧಶತಕದ ಸನಿಹ ತಲುಪಿದರೂ ಅದನ್ನು ಸಾಧಿಸಲಾಗಲಿಲ್ಲ ಎನ್ನುವುದು ಗಮನ ಸೆಳೆಯಿತು.

ಭಾರತೀಯರನ್ನು ತಡೆಯಲು ಕಿವೀಸ್‌ನ ಯಾವುದೇ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಟ್ರೆಂಟ್ ಬೌಲ್ಟ್, ಫ‌ರ್ಗ್ಯುಸನ್‌ ತಲಾ 2 ವಿಕೆಟ್ ಪಡೆದರೂ, ರನ್‌ ಬಿಟ್ಟುಕೊಟ್ಟರು. ಟಿಮ್‌ ಸೌದಿ ರನ್‌ ನಿಯಂತ್ರಿಸಿದರೂ, ವಿಕೆಟ್ ಪಡೆಯಲು ವಿಫ‌ಲಗೊಂಡರು.

ಕುಲದೀಪ್‌ ಮೆರೆದಾಟ: ಮೊದಲ ಪಂದ್ಯದಲ್ಲಿ ಕುಲದೀಪ್‌ ಮಿಂಚಿದರೂ, ಆ ಪಂದ್ಯದಲ್ಲಿ ಮೊಹಮ್ಮದ್‌ ಶಮಿ ಕೂಡ ಉತ್ತಮವಾಗಿ ಬೌಲಿಂಗ್‌ ಮಾಡಿದ್ದರಿಂದ, ಕುಲದೀಪ್‌ ಸ್ವಲ್ಪ ಮರೆಯಲ್ಲೇ ಇದ್ದರು. 2ನೇ ಪಂದ್ಯ ಸಂಪೂರ್ಣ ಕುಲದೀಪ್‌ ಪ್ರದರ್ಶನಕ್ಕೇ ಮೀಸಲಾದಂತಿತ್ತು. ಭಾರತ ನೀಡಿದ 325 ರನ್‌ ಗುರಿ ಬೆನ್ನತ್ತಿ ಹೊರಟ ನ್ಯೂಜಿಲೆಂಡ್‌ಗೆ ಕುಲದೀಪ್‌ ಕಂಟಕವಾದರು. ಅವರು 10 ಓವರ್‌ ದಾಳಿಯಲ್ಲಿ ಕೇವಲ 45 ರನ್‌ ನೀಡಿ 4 ವಿಕೆಟ್ ಕಿತ್ತರು. ಕಿವೀಸ್‌ನ ಮಧ್ಯಮ ಸರದಿಯನ್ನು ಧೂಳೆಬ್ಬಿಸಿದರು. ಮತ್ತೂಬ್ಬ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ (2) ಹಾಗೂ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ (2) ಆರಂಭದಲ್ಲೇ ಕಿವೀಸ್‌ನ ಪ್ರಮುಖ 4 ವಿಕೆಟ್ ಕಿತ್ತಿದ್ದು, ಕುಲದೀಪ್‌ ದಾಳಿಗೆ ಸಹಕಾರಿಯಾಗಿ ಪರಿಣಮಿಸಿತು. ಭಾರತೀಯರ ಸಾಂಘಿಕ ದಾಳಿಯನ್ನು ಎದುರಿಸಲಾಗದೇ ನ್ಯೂಜಿಲೆಂಡ್‌ ತಂಡ 40.2 ಓವರ್‌ಗಳಲ್ಲಿ 234 ರನ್‌ಗಳಿಗೆ ಆಲೌಟಾಯಿತು.

ಸಚಿನ್‌-ಸೆಹ್ವಾಗ್‌ರನ್ನು ಮೀರಿದ ರೋಹಿತ್‌-ಧವನ್‌
ಆರಂಭಿಕ ವಿಕೆಟ್‌ಗೆ 100ಕ್ಕೂ ಅಧಿಕ ರನ್‌ ಜೊತೆಯಾಟದಲ್ಲಿ ಭಾರತದ ಆರಂಭಿಕ ಜೋಡಿ ರೋಹಿತ್‌-ದವನ್‌, ಹಿಂದಿನ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌-ವೀರೇಂದ್ರ ಸೆಹ್ವಾಗ್‌ರನ್ನು ಮೀರಿದ್ದಾರೆ. ರೋಹಿತ್‌-ಧವನ್‌ 14 ಬಾರಿ 100 ರನ್‌ ಜೊತೆಯಾಟವಾಡಿದ್ದರೆ, ಸಚಿನ್‌-ಸೆಹ್ವಾಗ್‌ 13 ಬಾರಿ ಈ ಸಾಧನೆ ಮಾಡಿದ್ದಾರೆ. ಈ ವಿಚಾರದಲ್ಲಿ ವಿಶ್ವದಾಖಲೆ ಸಚಿನ್‌ ತೆಂಡುಲ್ಕರ್‌-ಸೌರವ್‌ ಗಂಗೂಲಿ ಹೆಸರಿನಲ್ಲಿದೆ. ಈ ಇಬ್ಬರು ಆರಂಭಿಕ ವಿಕೆಟ್‌ಗೆ 26 ಬಾರಿ 100 ರನ್‌ ಜೊತೆಯಾಟವಾಡಿದ್ದಾರೆ.

ಭಾರತ ನೀಡಿದ 325 ರನ್‌ ಗುರಿಯನ್ನು ಬೆನ್ನತ್ತಿ ಹೊರಟಿದ್ದ ನ್ಯೂಜಿಲೆಂಡ್‌, ತನ್ನ ಪ್ರಮುಖ 4 ವಿಕೆಟ್‌ಗಳನ್ನು 100 ರನ್‌ಗಳೊಳಗೆ ಕಳೆದುಕೊಂಡಿತು. ನಾಯಕ ಕೇನ್‌ ವಿಲಿಯಮ್ಸನ್‌, ಅಪಾಯಕಾರಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಬೇಗನೆ ಉದುರಿಕೊಳ್ಳುವುದರೊಂದಿಗೆ ನ್ಯೂಜಿಲೆಂಡ್‌ ಸೋಲಿನ ಕಡೆಗೆ ವೇಗವಾಗಿ ಹೆಜ್ಜೆ ಹಾಕಿತು. ಇಲ್ಲಿಂದ ಮುಂದೆ ಯಾವ ಯತ್ನಗಳೂ ನ್ಯೂಜಿಲೆಂಡನ್ನು ಗೆಲ್ಲಿಸಲು ಸಾಕಾಗಲಿಲ್ಲ. ಆ ರೀತಿಯ ಯತ್ನಗಳಿಗೆ ಬೇಕಾದ ಬ್ಯಾಟಿಂಗ್‌ ಶಕ್ತಿಯೂ ಇರಲಿಲ್ಲ.

ಸ್ಕೋರ್‌ಪಟ್ಟಿ
ಭಾರತ
ರೋಹಿತ್‌ ಶರ್ಮ    ಸಿ ಗ್ರ್ಯಾನ್‌ಹೊಮ್‌ ಬಿ ಫ‌ಗುÕìಸನ್‌    87
ಶಿಖರ್‌ ಧವನ್‌    ಸಿ ಲ್ಯಾಥಂ ಬಿ ಬೌಲ್ಟ್    66
ವಿರಾಟ್‌ ಕೊಹ್ಲಿ    ಸಿ ಸೋಧಿ ಬಿ ಬೌಲ್ಟ್    43
ಅಂಬಾಟಿ ರಾಯುಡು    ಸಿ ಮತ್ತು ಬಿ ಫ‌ಗುÕìಸನ್‌    47
ಎಂ. ಎಸ್‌. ಧೋನಿ    ಔಟಾಗದೆ    48
ಕೇದರ್‌ ಜಾಧವ್‌    ಔಟಾಗದೆ    22
ಇತರ    11
ಒಟ್ಟು ( 4 ವಿಕೆಟಿಗೆ)    324
ವಿಕೆಟ್‌ ಪತನ: 1-154, 2-172, 3-236, 4-271
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್    10-1-61-2
ಡಗ್‌ ಬ್ರೇಸ್‌ವೆಲ್‌        10-0-59-0
ಲಾಕಿ ಫ‌ಗುÕìಸನ್‌    10-0-81-2
ಸೋಧಿ    10-0-43-0
ಗ್ರ್ಯಾನ್‌ಹೊಮ್‌    8-0-62-0
ಮುನ್ರೊ    2-0-17-0
* ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗುಪ್ಟಿಲ್‌    ಸಿ ಚಾಹಲ್‌ ಬಿ ಭುವನೇಶ್ವರ್‌    15
ಕಾಲಿನ್‌ ಮುನ್ರೊ    ಎಲ್‌ಬಿಡಬ್ಲ್ಯು ಬಿ ಚಾಹಲ್‌    31
ಕೇನ್‌ ವಿಲಿಯಮ್ಸನ್‌    ಬಿ ಶಮಿ    20
ರಾಸ್‌ ಟಯ್ಲರ್‌    ಸ್ಟಂಪ್ಡ್ ಧೋನಿ ಬಿ ಜಾಧವ್‌    22    
ಟಾಮ್‌ ಲ್ಯಾಥಂ    ಎಲ್‌ಬಿಡಬ್ಲ್ಯು ಬಿ ಕುಲದೀಪ್‌    34
ಹೆನ್ರಿ ನಿಕೋಲ್ಸ್‌    ಸಿ ಶಮಿ ಬಿ ಕುಲದೀಪ್‌        28
ಗ್ರ್ಯಾನ್‌ಹೊಮ್‌    ಸಿ ರಾಯುಡು ಬಿ ಕುಲದೀಪ್‌    3    
ಡಗ್‌ ಬ್ರೇಸ್‌ವೆಲ್‌    ಸಿ ಧವನ್‌ ಬಿ ಭುವನೇಶ್ವರ್‌    57
ಟಿಮ್‌ ಸೌಥಿ    ಬಿ ಕುಲದೀಪ್‌    0
ಲಾಕಿ ಫ‌ರ್ಗ್ಯುಸನ್‌    ಸಿ ಶಂಕರ್‌ ಬಿ ಚಾಹಲ್‌    12
ಟ್ರೆಂಟ್‌ ಬೌಲ್ಟ್    ಔಟಾಗದೆ    10
ಇತರ        2
ಒಟ್ಟು  (40.2 ಓವರ್‌ಗಳಲ್ಲಿ ಆಲೌಟ್‌ )    234
ವಿಕೆಟ್‌ ಪತನ: 1-23, 2-51, 3-84, 4-100, 5-136, 6-146, 7-166, 8-166, 9-224.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        7-1-42-2
ಮೊಹಮ್ಮದ್‌ ಶಮಿ        6-0-43-1
ವಿಜಯ್‌ ಶಂಕರ್‌        2-0-17-0
ಯಜುವೇಂದ್ರ ಚಾಹಲ್‌        9.2-0-52-2
ಕೇದಾರ್‌ ಜಾಧವ್‌    6-0-35-1
ಕುಲದೀಪ್‌ ಯಾದವ್‌    10-0-45-4
ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ
3ನೇ ಪಂದ್ಯ: ಜ. 28 (ಮೌಂಟ್‌ ಮೌಂಗನುಯಿ)

Advertisement

Udayavani is now on Telegram. Click here to join our channel and stay updated with the latest news.

Next