Advertisement

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

01:08 AM Oct 22, 2024 | Team Udayavani |

ವೆಲ್ಲಿಂಗ್ಟನ್‌: ಪ್ರಪ್ರಥಮ ಬಾರಿಗೆ ವನಿತಾ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್‌ ನೂತನ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ತನ್ನ ವಾರಾಂತ್ಯ ವನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿದೆ.

Advertisement

ಆದರೆ ನ್ಯೂಜಿಲ್ಯಾಂಡಿನ ಖುಷಿಗೆ, ಅವರ ಸಂತಸಕ್ಕೆ ಇದೊಂದೇ ಕಾರಣವಲ್ಲ. ಟಿ20 ವಿಶ್ವಕಪ್‌ ಸೇರಿದಂತೆ ಕಳೆದ 5 ದಿನಗಳಲ್ಲಿ 5 ಕ್ರೀಡಾ ಸಾಧನೆಗೈದ ಹೆಗ್ಗಳಿಕೆ ಕಿವೀಸ್‌ ಪಾಲಿಗಿದೆ!

ರವಿವಾರ ಬೆಳಗ್ಗೆ ನ್ಯೂಜಿಲ್ಯಾಂಡ್‌ ಪುರುಷರ ಟೆಸ್ಟ್‌ ತಂಡ “ಒನ್ಸ್‌ ಇನ್‌ ಎ ಜನರೇಶನ್‌’ ಎಂಬಂತೆ ಭಾರತವನ್ನು ಭಾರತದ ನೆಲದಲ್ಲೇ ಸೋಲಿಸುವ ಮೂಲಕ ಸಂಭ್ರಮಿಸಿತು. ಭಾರತದ ನೆಲದಲ್ಲಿ 36 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್‌ಗೆ ಒಲಿದ ಟೆಸ್ಟ್‌ ವಿಜಯ ಇದಾಗಿತ್ತು.

ರವಿವಾರವೇ ಚೀನದ ಝೆಜಿಯಾಂಗ್‌ನಲ್ಲಿ ನಡೆದ ಕನೋಯಿ ಪೋಲೊ ಟೀಮ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿ ಲ್ಯಾಂಡ್‌ ವನಿತಾ ತಂಡ ಇಟಲಿಯನ್ನು 6-1 ಅಂತರದಿಂದ ಮಣಿಸುವ ಮೂಲಕ ಚಾಂಪಿಯನ್‌ ಆಗಿತ್ತು.
ನ್ಯೂಜಿಲ್ಯಾಂಡ್‌ನ‌ ಮತ್ತೂಂದು ಸಂಡೇ ಸಾಹಸವೆಂದರೆ “ಅಮೆರಿಕ ಕಪ್‌’ ಸೈಲಿಂಗ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಉಳಿಸಿಕೊಂಡದ್ದು. ಫೈನಲ್‌ನಲ್ಲಿ ಅದು ಬ್ರಿಟನ್‌ ವಿರುದ್ಧ 7-2 ಅಂತರದ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ನೆಟ್‌ಬಾಲ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲ್ಯಾಂಡ್‌ ತನ್ನ ಬದ್ಧ ಎದುರಾಳಿ ಆಸ್ಟ್ರೇಲಿಯವನ್ನು 64-50 ಅಂಕಗಳ ಅಂತರದಿಂದ ಮಣಿಸಿದ ಸಾಧನೆಗೈದಿತ್ತು.

Advertisement

ಪ್ರಧಾನಿ ಪ್ರಶಂಸೆ
ನ್ಯೂಜಿಲ್ಯಾಂಡ್‌ನ‌ ಈ ಸಾಲು ಸಾಲು ಕ್ರೀಡಾ ಸಾಧನೆಯನ್ನು ಪ್ರಶಂಸಿಸಿರುವ ಪ್ರಧಾನಿ ಕ್ರಿಸ್ಟೋಫ‌ರ್‌ ಲುಕ್ಸನ್‌, “ಗ್ರೇಟ್‌, ಗ್ರೇಟ್‌ ವೀಕೆಂಡ್‌ ಟು ರಿಮೆಂಬರ್‌’ ಎಂದಿದ್ದಾರೆ.

ಚಾಂಪಿಯನ್‌ ತಂಡಕ್ಕೆ 19.6 ಕೋಟಿ ರೂ.
ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಯ ಬಹುಮಾನ ಮೊತ್ತದಲ್ಲಿ ಐಸಿಸಿ ಶೇ. 134ರಷ್ಟು ಹೆಚ್ಚಳ ಮಾಡಿದ ಪರಿಣಾಮ ಚಾಂಪಿಯನ್‌ ನ್ಯೂಜಿಲ್ಯಾಂಡ್‌ ತಂಡ 2.3 ಮಿಲಿಯನ್‌ ಡಾಲರ್‌, ಹತ್ತಿರ ಹತ್ತಿರ 20 ಕೋಟಿ ರೂ. ಮೊತ್ತವನ್ನು (19.6 ಕೋಟಿ ರೂ.) ತನ್ನದಾಗಿಸಿಕೊಂಡಿದೆ. ರನ್ನರ್ ಅಪ್‌ ದಕ್ಷಿಣ ಆಫ್ರಿಕಾಕ್ಕೆ 1.17 ಮಿಲಿಯನ್‌ ಡಾಲರ್‌ (9.8 ಕೋಟಿ ರೂ.) ಲಭಿಸಿದೆ.

ಸೆಮಿಫೈನಲಿಸ್ಟ್‌ ಹಾಗೂ ಗ್ರೂಪ್‌ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 3 ತಂಡಗಳಿಗೂ ಐಸಿಸಿ ಬಹುಮಾನ ಘೋಷಿಸಿದೆ. ಅದರಂತೆ ಸೆಮಿಫೈನಲಿಸ್ಟ್‌ಗಳಾದ ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳಿಗೆ ತಲಾ 5.7 ಕೋಟಿ ರೂ. ಲಭಿಸಲಿದೆ. ಆದರೆ ಗ್ರೂಪ್‌ ಹಂತದ ರ್‍ಯಾಂಕಿಂಗ್‌ ಇನ್ನೂ ನಿಗದಿಯಾಗಿಲ್ಲ. 4 ಪಂದ್ಯಗಳಲ್ಲಿ ಎರಡನ್ನು ಗೆದ್ದ ಭಾರತ 6ನೇ ಸ್ಥಾನಿಯಾಗುವ ಸಾಧ್ಯತೆ ಇದ್ದು, 2.25 ಕೋಟಿ ರೂ. ಪಡೆಯಲಿದೆ.

“ವಿಶ್ವಕಪ್‌’ ತಂಡದಲ್ಲಿ ಕೌರ್‌
ದುಬಾೖ: ಐಸಿಸಿ ಪ್ರಕಟಿಸಿದ ಟಿ20 ವಿಶ್ವಕಪ್‌ “ಟೀಮ್‌ ಆಫ್ ದ ಟೂರ್ನಮೆಂಟ್‌’ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಸ್ಥಾನ ಪಡೆದಿದ್ದಾರೆ. ಅವರು ಈ ತಂಡದ ಏಕೈಕ ಭಾರತೀಯ ಆಟಗಾರ್ತಿ. ಕೌರ್‌ 2 ಅರ್ಧ ಶತಕಗಳ ನೆರವಿನಿಂದ 150 ರನ್‌ ಮಾಡಿದ್ದು, ಕೂಟದ 4ನೇ ಸರ್ವಾಧಿಕ ಸ್ಕೋರರ್‌ ಆಗಿದ್ದಾರೆ.

ತಂಡಕ್ಕೆ ರನ್ನರ್ ಅಪ್‌ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್‌ ನಾಯಕಿಯಾಗಿದ್ದಾರೆ. ಚಾಂಪಿಯನ್‌ ನ್ಯೂಜಿಲ್ಯಾಂಡ್‌ನ‌ ಮೂವರು ಈ ತಂಡಲ್ಲಿದ್ದಾರೆ.

ತಂಡ: ಲಾರಾ ವೋಲ್ವಾರ್ಟ್‌ (ನಾಯಕಿ), ತಾಜ್ಮಿನ್‌ ಬ್ರಿಟ್ಸ್‌, ಡ್ಯಾನಿ ವ್ಯಾಟ್‌ ಹಾಜ್‌, ಅಮೇಲಿಯಾ ಕೆರ್‌, ಹರ್ಮನ್‌ಪ್ರೀತ್‌ ಕೌರ್‌, ಡಿಯಾಂಡ್ರಾ ಡಾಟಿನ್‌, ನಿಗಾರ್‌ ಸುಲ್ತಾನಾ (ವಿ.ಕೀ.), ಅಫಿ ಫ್ಲೆಚರ್‌, ರೋಸ್‌ಮೇರಿ ಮೈರ್‌, ನೊಂಕುಲುಲೆಕೊ ಮಲಾಬಾ, ಮೆಗಾನ್‌ ಶಟ್‌. 12ನೇ ಆಟಗಾರ್ತಿ: ಈಡನ್‌ ಕಾರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next