Advertisement

ಗೇಬ್ರಿಯಲ್ ಚಂಡಮಾರುತಕ್ಕೆ ತತ್ತರಿಸಿದ ನ್ಯೂಜಿಲೆಂಡ್: ರಾಷ್ಟೀಯ ತುರ್ತು ಪರಿಸ್ಥಿತಿ ಘೋಷಣೆ

08:55 AM Feb 14, 2023 | Team Udayavani |

ವೆಲ್ಲಿಂಗ್ಟನ್: ಗೇಬ್ರಿಯಲ್ ಚಂಡಮಾರುತಕ್ಕೆ ನ್ಯೂಜಿಲೆಂಡ್ ದೇಶ ತತ್ತರಿಸಿ ಹೋಗಿದೆ. ಸಾವಿರಾರು ಮನೆಗಳು ಕತ್ತಲಕೂಪದಲ್ಲಿ ಮುಳುಗಿ ಹೋಗಿದೆ. ಪರಿಣಾಮ ಅಲ್ಲಿನ ಸರ್ಕಾರ ರಾಷ್ಟೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

Advertisement

ದಿನ ರಾತ್ರಿ ಸುರಿದ ಮಳೆಯ ಪರಿಣಾಮ ಗೇಬ್ರಿಯಲ್ ಚಂಡಮಾರುತ ಉಂಟಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತದಿಂದ ಲಕ್ಷಾಂತರ ಮನೆಗಳಿಗೆ ವಿದ್ಯುತ್‌ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಯಿಂದ ಅಲ್ಲಲ್ಲಿ ಭೂಕುಸಿತ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಆಕ್ಲೆಂಡ್, ನಾರ್ತ್‌ಲ್ಯಾಂಡ್, ತೈರಾವಿಟಿ, ಬೇ ಆಫ್ ಪ್ಲೆಂಟಿ, ವೈಕಾಟೊ ಮತ್ತು ಹಾಕ್ಸ್ ಬೇ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಉಂಟಾಗಿದೆ.

ಮಂಗಳವಾರ ಗಾಳಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತುರ್ತು ಸೇವೆಗಳಿಗೆ ಅಡ್ಡಿಯಾಗಬಹುದು. ನ್ಯೂಜಿಲೆಂಡ್‌ನ ಅತಿದೊಡ್ಡ ನಗರವಾದ ಆಕ್ಲೆಂಡ್‌ನ ಮಳೆ ನೀರು ಹಾಗೂ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದ ವೇಳೆ ಮನೆಯೊಂದು ಕುಸಿದು ಬಿದ್ದಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾಣೆಯಾಗಿದ್ದು, ಇನ್ನೊಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತುರ್ತು ನಿರ್ವಹಣಾ ಸಚಿವ ಕೀರನ್ ಮೆಕ್ಅನುಲ್ಟಿ ಹೇಳಿದ್ದಾರೆ.

ಏರ್ ನ್ಯೂಜಿಲೆಂಡ್ ಮಂಗಳವಾರ ಬೆಳಿಗ್ಗೆಯವರೆಗೆ ಆಕ್ಲೆಂಡ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ದೇಶೀಯ ವಿಮಾನಗಳನ್ನು ಮತ್ತು ಅನೇಕ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ.

Advertisement

ಇದು ನ್ಯೂಜಿಲೆಂಡ್‌ ನಲ್ಲಿ ಘೋಷಿಸಿದ 3ನೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ. ಇದಕ್ಕೂ ಮುನ್ನ 2019 ರಲ್ಲಿ ನಡೆದ ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ವೇಳೆ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. 2020 ರಲ್ಲಿ ಕೋವಿಡ್‌ ನಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು.

ಸಾವು – ನೋವಿನ ಕುರಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next