ನ್ಯೂಯಾರ್ಕ್: ನಗರದಲ್ಲಿ ಕೋವಿಡ್ ಗೆ ಬಲಿಯಾದವರೆಷ್ಟು? ಈ ಪ್ರಶ್ನೆ ಈಗ ಅಂಕಿಅಂಶ ವಿಶ್ಲೇಷಕರ ತಲೆತಿನ್ನುತ್ತಿದೆ. ಅಧಿಕೃತವಾಗಿ 14,000ಕ್ಕೂ ಹೆಚ್ಚು ಮಂದಿ ಈ ನಗರವೊಂದರಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇದಲ್ಲದೆ ಇನ್ನೂ ಸುಮಾರು 5,300 ಸಾವುಗಳು ಸಂಭವಿಸಿದ್ದು, ಈ ಸಾವುಗಳ ಕುರಿತಾದ ಅನುಮಾನಗಳು ಅನೇಕ ಇವೆ.
ಈ ಹೆಚ್ಚುವರಿ ಸಾವುಗಳು ಕೋವಿಡ್ ನ ಪಾರ್ಶ್ವ ಪರಿಣಾಮದಿಂದ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಪಾರ್ಶ್ವ ಪರಿಣಾಮ ಎಂದರೆ ಕೋವಿಡ್ ಹಾವಳಿಯಿಂದಾಗಿ ಉಳಿದ ರೋಗಿಗಳಿಗೆ ಸಕಾಲಕ್ಕೆ ಆಸ್ಪತ್ರೆಗಳು ಸಿಗದಿರುವುದು, ಸಮರ್ಪಕ ಶುಶ್ರೂಷೆಯ ಕೊರತೆ, ನಿತ್ಯದ ಔಷಧಗಳ ಪೂರೈಕೆ ವ್ಯತ್ಯಯಗೊಂಡಿದ್ದು, ಹೆದರಿಕೆಯಿಂದಾದ ಸಾವು ಇತ್ಯಾದಿಗಳು. ಈ ಸಾವುಗಳನ್ನೂ ಕೋವಿಡ್ ನ ಲೆಕ್ಕಕ್ಕೆ ಸೇರಿಸಬೇಕೆಂದು ಕೆಲವರು ಸಲಹೆ ಮಾಡಿದ್ದಾರೆ.
ಕೋವಿಡ್ ನ ವೈರಸ್‌ನಿಂದ ಮಾತ್ರವಲ್ಲದೆ ಅದರ ಪಾರ್ಶ್ವ ಪರಿಣಾಮಗಳಿಂದ ಸಂಭವಿಸಿರುವ ಸಾವುಗಳನ್ನು ಪತ್ತೆಹಚ್ಚುವುದು ಕೂಡ ಮುಖ್ಯವಾಗುತ್ತದೆ. ಆಗ ಮಾತ್ರ ಕೋವಿಡ್ ವೈರಸ್‌ನಿಂದ ಸಂಭವಿಸಿದ ನಿಜವಾದ ಹಾನಿಯನ್ನು ನಿಖರವಾಗಿ ಅಂದಾಜಿಸಬಹುದು. ಸಾವಿರದ ಲೆಕ್ಕದಲ್ಲಿ ಸಂಭವಿಸಿರುವ ಇತರ ಸಾವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಅಮೆರಿಕ ಎಂದಲ್ಲ ಇನ್ನೂ ಹಲವು ದೇಶಗಳಲ್ಲಿ ಪಾರ್ಶ್ವ ಪರಿಣಾಮದ ಸಾವುಗಳನ್ನು ಲೆಕ್ಕಕ್ಕೆ ಹಿಡಿದುಕೊಂಡಿಲ್ಲ. ಇದೂ ಸೇರಿದರೆ ಕೋವಿಡ್ ಸಾವಿನ ಸಂಖ್ಯೆ ಈಗಾಗಲೇ 3.5 ಲಕ್ಷ ದಾಟಬೇಕಿತ್ತು. ಅನೇಕ ಹಿಂದುಳಿದ ದೇಶಗಳಲ್ಲಿ ಎಷ್ಟೋ ಮಂದಿ ಯಾವುದೇ ಪರೀಕ್ಷೆಗೊಳಪಡದೆ ಸಾವನ್ನಪ್ಪಿದ್ದಾರೆ. ಕನಿಷ್ಠ ಅವರ ಸಾವಿನ ಕಾರಣ ಏನು ಎನ್ನುವುದು ಕೂಡ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕೋವಿಡ್ ಮರಣ ತಾಂಡವ ನಾವು ಕಲ್ಪಿಸಿಕೊಂಡಿರುವುದಕ್ಕಿಂತಲೂ ಭೀಕರವಾಗಿದೆ.
ಕೋವಿಡ್ ಹಾವಳಿಯ ಸಂದರ್ಭದಲ್ಲಿ ಹೃದಯದ ಸಮಸ್ಯೆ ಇದ್ದವರ ಸಾವಿನ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿತ್ತು. ಇದು ತಕ್ಷಣಕ್ಕೆ ವೈದ್ಯಕೀಯ ನೆರವು ಸಿಗದಿರುವುದರಿಂದ ಸಂಭವಿಸಿದ ಸಾವುಗಳಾಗಿರಬಹುದು. ಪರೋಕ್ಷವಾಗಿ ಈ ಸಾವುಗಳಿಗೂ ಕೋವಿಡ್ ಕಾರಣವಾಗುತ್ತದೆ.