Advertisement

ಹೊಸ ವರ್ಷಾಚರಣೆ: ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆ

11:41 PM Dec 31, 2021 | Team Udayavani |

ಮಂಗಳೂರು: ಕ್ರೈಸ್ತರು ಶುಕ್ರವಾರ ರಾತ್ರಿ ನಿಕಟ ಪೂರ್ವ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ (2022) ವನ್ನು ಸ್ವಾಗತಿಸಿ ಚರ್ಚ್‌ಗಳಲ್ಲಿ ಪರಮ ಪ್ರಸಾದದ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಲಿ ಪೂಜೆಯಲ್ಲಿ ಪಾಲ್ಗೊಂಡರು.

Advertisement

ಪರಮ ಪ್ರಸಾದದ ಆರಾಧನೆಯ ವೇಳೆ ಗತ ವರ್ಷದಲ್ಲಿ ದೇವರು ತೋರಿದ ಕೃಪೆ ಮತ್ತು ಆಶೀರ್ವಾದಗಳಿಗಾಗಿ ಕೃತಜ್ಞತೆ ಸಲ್ಲಿಸಿದರು ಹಾಗೂ ಹೊಸ ವರ್ಷವು ಶುಭವನ್ನು ತರಲಿ ಎಂದು ಪ್ರಾರ್ಥಿಸಿದರು. ಬಲಿ ಪೂಜೆಯ ಬಳಿಕ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್  ಸಲ್ಡಾನ್ಹಾ ಅವರು ರೊಜಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಬಳಿಕ ಬಲಿ ಪೂಜೆಯನ್ನು ನಡೆಸಿದರು. ಕೆಥೆಡ್ರಲ್‌ನ ರೆಕ್ಟರ್‌ ವಂ| ಆಲ್ಫೆಡ್‌ ಜೆ. ಪಿಂಟೊ, ಸಹಾಯಕ ಗುರು ವಂ| ವಿನೋದ್‌ ಲೋಬೊ ಮತ್ತು ರೊಜಾರಿಯೊ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ವಿಕ್ಟರ್‌ ಡಿ’ಸೋಜಾ ಅವರು ಉಪಸ್ಥಿತರಿದ್ದರು.

ಸದ್ಗುಣ ಸಂಪನ್ನವಾದ ಹೊಸ
ಜೀವನದ ನಿರ್ಧಾರ
ಸಂದೇಶ ನೀಡಿದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸಂದರ್ಭ ಸದ್ಗುಣ ಸಂಪನ್ನವಾದ ಜೀವನವನ್ನು ನಡೆಸುವ ಹೊಸ ನಿರ್ಧಾರವನ್ನು ಕೈಗೊಂಡು ಅದನ್ನು ಅನುಷ್ಠಾನಗೊಳಿಸುವ ಅಚಲ ಶ್ರದ್ಧೆಯೊಂದಿಗೆ ಅದರ ಮೇಲೆ ದೇವರ ಕೃಪಾವರಗಳನ್ನು ಬೇಡುತ್ತ ಮುಂದೆ ಸಾಗೋಣ. ದೇವರ ಮೇಲೆ ವಿಶ್ವಾಸವನ್ನು ದಿನೇ ದಿನೇ ದೃಢಪಡಿಸುತ್ತ ಹೋಗಿ ಸತ್ಕಾರ್ಯಗಳ ಮೂಲಕ ಜೀವನವನ್ನು ಬೆಳಗಿಸೋಣ ಎಂದು ಹೇಳಿ ಹೊಸ ವರ್ಷದ ಶುಭಾಶಯ ಸಲ್ಲಿಸಿದರು.

ಕೊರೊನಾದಿಂದ ವಿಶ್ವ ಮುಕ್ತವಾಗಲಿ
ಉಡುಪಿ: ನೂತನ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು.

Advertisement

ಶುಕ್ರವಾರ ಸಂಜೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಕಳೆದ ವರ್ಷ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ವರ್ಷ ಪ್ರತಿಯೊಬ್ಬರಿಗೂ ಸಂತೋಷ ತರಲಿ ಎಂದು ಬೇಡಿದರು.

ಉಡುಪಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್ ಐಸಾಕ್‌ ಲೋಬೊ ಅವರು ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ರಾತ್ರಿ ಪವಿತ್ರ ಬಲಿ ಪೂಜೆ ಅರ್ಪಿಸಿದರು. ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಸದಾ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದರು. ಪವಿತ್ರ ಬಲಿ ಪೂಜೆಗೆ ಮುಂಚಿತವಾಗಿ ಕಳೆದು ಹೋಗಲಿರುವ 2021ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲ ರೀತಿಯ ಉತ್ತಮ ಕೆಲಸಗಳಿಗಾಗಿ ದೇವರಿಗೆ ಧನ್ಯವಾದ ಅರ್ಪಿಸಿ ಪರಮ ಪ್ರಸಾದದ ವಿಶೇಷ ಆರಾಧನೆ ನಡೆಸಲಾಯಿತು. 2022ರಲ್ಲಿ ವಿಶ್ವದಲ್ಲಿ ಶಾಂತಿ ನೆಲೆಸಲಿ ಮತ್ತು ಕೊರೊನಾದಿಂದ ವಿಶ್ವ ಮುಕ್ತವಾಗಲಿ ಎಂದು ಪ್ರಾರ್ಥಿಸಲಾಯಿತು.

ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ಚೇತನ್‌ ಲೋಬೊ, ತೊಟ್ಟಂ ಚರ್ಚಿನ ಧರ್ಮಗುರು ವಂ| ಫ್ರಾನ್ಸಿಸ್‌ ಕರ್ನೆಲಿಯೋ ಉಪಸ್ಥಿತರಿದ್ದರು. ಜಿಲ್ಲೆಯ ಪ್ರಮುಖ ಚರ್ಚ್‌ಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮ ಗುರು ರೆ| ಡೆನಿಸ್‌ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ರೆ|  ಮಿನೇಜಸ್‌, ಕುಂದಾಪುರ ಹೊಲಿ ರೋಸರಿ ಚರ್ಚ್‌ ನಲ್ಲಿ ರೆ| ಸ್ಟಾನಿ ತಾವ್ರೋ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ರೆ| ಆಲ್ಬನ್‌ ಡಿ’ಸೋಜಾ ನೇತೃತ್ವದಲ್ಲಿ ಬಲಿಪೂಜೆ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next