Advertisement

ಹೊಸ ವರ್ಷಾಚರಣೆ: ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಪೂರ್ವಾನುಮತಿ ಕಡ್ಡಾಯ

10:38 PM Dec 11, 2019 | mahesh |

ಮಹಾನಗರ: ಹೊಸ ವರ್ಷಾ ಚರಣೆ ಪ್ರಯುಕ್ತ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಸಾರ್ವಜನಿಕರು, ಹೊಟೇಲ್‌, ರೆಸ್ಟೋರೆಂಟ್‌, ಕ್ಲಬ್‌, ರೆಸಾರ್ಟ್‌, ಸಂಘ – ಸಂಸ್ಥೆಗಳಿಗೆ ನಿಯಮಗಳನ್ನು ರೂಪಿಸಿದ್ದು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಪಾಲಿಸದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

Advertisement

ಈ ಸಂಬಂಧ ನಗರದ ಎಲ್ಲ ಹೊಟೇಲ್‌, ರೆಸ್ಟೋರೆಂಟ್‌, ಕ್ಲಬ್‌, ರೆಸಾರ್ಟ್‌ ಮತ್ತು ಸಂಘ ಸಂಸ್ಥೆಗಳ ಮಾಲಕರು/ ವ್ಯವಸ್ಥಾಪಕರು/ಆಡಳಿತ ವರ್ಗದವರು ಕಡ್ಡಾಯವಾಗಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಗೆ ಡಿ. 24ರ ಅಪರಾಹ್ನ 4 ಗಂಟೆಯೊಳಗೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪೂರ್ವಾನುಮತಿ ಪಡೆಯದೆ ಆಚರಣೆ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

12 ಗಂಟೆಯೊಳಗೆ ಮುಕ್ತಾಯ
ಎಲ್ಲ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆಯೊಳಗೆ ಕಡ್ಡಾಯ ವಾಗಿ ಮುಕ್ತಾಯಗೊಳಿಸಬೇಕು. ಪರವಾನಿ ಗೆಯಲ್ಲಿ ನೀಡುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗ್ನಿಶಾಮಕ ಉಪಕರಣಗಳು, ತುರ್ತು ಚಿಕಿತ್ಸಾ ವಾಹನ, ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರೆಸ್ಟೋರೆಂಟ್‌ ಮತ್ತು ಮದ್ಯಪಾನ ಸರಬರಾಜು ಮಾಡುವ ಹೊಟೇಲ್‌ಗ‌ಳಲ್ಲಿ ಸರಕಾರ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ನೂತನ ವರ್ಷಾಚರಣೆಯ ಸಂಬಂಧ ಮದ್ಯ ವಿತರಿಸಲು ಉದ್ದೇಶಿಸಿದ್ದಲ್ಲಿ ಅಬಕಾರಿ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅನುಮತಿ ಪತ್ರದ ಪ್ರತಿಯನ್ನು ಅರ್ಜಿಯೊಂದಿಗೆ ಕಚೇರಿಗೆ ಸಲ್ಲಿಸಬೇಕು. ಆಯೋಜಕರು ಮಹಿಳೆಯರ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಭದ್ರತಾ ಸಿಬಂದಿಯನ್ನು ಕಡ್ಡಾಯವಾಗಿ ನೇಮಿಸಬೇಕು. ಆಯೋ ಜಕರು ಕಾರ್ಯಕ್ರಮ ನಡೆಸುವ ಸ್ಥಳದ ಮುಖ್ಯ ದ್ವಾರ, ಒಳಾವರಣ ಮತ್ತು ಹೊರಾವರಣಗಳಲ್ಲಿ ಸಿ.ಸಿ. ಟಿವಿ ಕೆಮರಾ ಅಳವಡಿಸಬೇಕು, ಯಾವುದೇ ಸಮಯದಲ್ಲಿ ಪರಿಶೀಲನೆಗಾಗಿ ರೆಕಾಡಿಂಗ್‌/ಫೂಟೇಜ್‌ ಅನ್ನು ಲಭ್ಯವಿರಿಸಬೇಕು.

ವ್ಯವಸ್ಥಾಪಕರೇ ಹೊಣೆ
ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೆ ಪ್ರತ್ಯೇಕ ಪಾಕಿಂìಗ್‌ ವ್ಯವಸ್ಥೆ ಮಾಡಬೇಕು. 18 ವರ್ಷ ಕೆಳಗಿನವರಿಗೆ ಕಡ್ಡಾಯವಾಗಿ ಮದ್ಯ ವಿತರಿಸಬಾರದು. ಹೆತ್ತವರು ಜತೆಯಲ್ಲಿ ಇರದೇ ಇರುವ ಪಕ್ಷದಲ್ಲಿ 18 ವರ್ಷ ಕೆಳಗಿನವರಿಗೆ ಯಾವುದೇ ಕಾರಣಕ್ಕೂ ಕಾರ್ಯಕ್ರಮಗಳಿಗೆ ಪ್ರವೇಶಿವಂತಿಲ್ಲ. ಹೊಸ ವರ್ಷಾಚರಣೆ ನಡೆಸುವ ಹೊಟೇಲ್‌, ಕ್ಲಬ್‌ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗವುಂಟಾದಲ್ಲಿ ವ್ಯವಸ್ಥಾಪಕರನ್ನೆ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಬಾಕ್ಸ್‌ ಮಾದರಿ ಧ್ವನಿವರ್ಧಕವನ್ನು ಅಳವಡಿಸಿಕೊಳ್ಳಬೇಕು.

ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭಕೋರುವ ನೆಪದಲ್ಲಿ ಕೀಟಲೆ ಮಾಡುವುದು/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಕಾರ್ಯಪಡೆಗಳನ್ನು ರಚಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.

Advertisement

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕಾರ್ಯ ಪಡೆ ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾ ಚರಣೆಯಲ್ಲಿರುತ್ತದೆ. ವಿದ್ಯಾರ್ಥಿಗಳು, ಯುವಕರು ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ವಾಹನಗಳನ್ನು ವೀಲಿಂಗ್‌ ಮತ್ತು ಡ್ರಾಗ್‌ ರೇಸ್‌ ಮಾಡುವುದನ್ನು, ಬೊಬ್ಬೆ ಹಾಕುವುದು ಹಾಗೂ ಅತೀ ವೇಗವಾಗಿ ವಾಹನಗಳನ್ನು ಚಲಾಯಿಸುವುದು ಮತ್ತು ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ.

ಸುಡುಮದ್ದು ನಿಷೇಧ
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೀಚ್‌ ಪ್ರದೇಶದಲ್ಲಿ ಮದ್ಯಪಾನ ಮಾಡಬಾರದು. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ನೆಪದಲ್ಲಿ ಪಟಾಕಿ ಸುಡುಮದ್ದುಗಳನ್ನು ಸಿಡಿಸುವುದನ್ನು ನಿಷೇಧಿ ಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರ ಪ್ರಕಟನೆ ತಿಳಿಸಿದೆ.

ಕಾರ್ಯಪಡೆ ರಚನೆ
ಸಾಂಸ್ಕೃತಿಕ ಕಾರ್ಯಕ್ರಮಗಳ ನೆಪ ದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇ ಧಿಸಲಾಗಿದೆ. ಸಾರ್ವಜನಿಕ ಸ್ಥಳ ಗಳಲ್ಲಿ ಏರ್ಪಡಿಸಲಾಗಿರುವ ಹೊಸ ವರ್ಷಾ ಚರಣೆಯ ಕಾರ್ಯಕ್ರಮದ ಹಾಗೂ ಇನ್ನಿತರೆ ನೆಪದಲ್ಲಿ ಬಸ್‌ ತಂಗುದಾಣ, ಸಾರ್ವಜನಿಕ ಉದ್ಯಾನವನಗಳು, ಕ್ರೀಡಾಂಗಣಗಳಲ್ಲಿ, ರೈಲ್ವೇ ಸ್ಟೇಶನ್‌ ಹಾಗೂ ಇನ್ನಿತರೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದನ್ನು ನಿಷೇಧಿ ಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು.

Advertisement

Udayavani is now on Telegram. Click here to join our channel and stay updated with the latest news.

Next