Advertisement

ಧನ್ಯತೆಯ ಬೆಳಕಲ್ಲಿ ಬೆರಗು

05:57 PM Dec 26, 2019 | mahesh |

ನೂರು ಕನಸು ಮೂಡಲಿ

Advertisement

ಈ ವರ್ಷದ ಪರದೆ ಹಿಂದೆ ಸರಿಯುವ ಮುನ್ನ ನಾವು ಹಾಕಿಕೊಂಡ ಗುರಿಗಳು ಸಾವಿರಾರು ಇದ್ದರೂ ಕೆಲವೊಂದನ್ನಾದರೂ ಈಡೇರಿಸಿದ ಧನ್ಯತಾಭಾವ ಮನಃಪಟಲದಲ್ಲಿ ಮೂಡಿ ಸಂತಸದ ಮುಗುಳ್ನಗೆಯೊಂದು ಮುಖದಲ್ಲಿ ಹಾದು ಹೋಗುತ್ತದೆ.  ನಾನು ಸ್ನಾತಕೋತ್ತರ ಓದು ಮುಗಿಸಿ ವೃತ್ತಿಯ ಅಂಗಳಕ್ಕೆ ಕಾಲನ್ನಿಟ್ಟು ಪ್ರಥಮ ಸಂಬಳ ಪಡೆದ ಆನಂದ ಅನುಭವಿಸಿದ ವರ್ಷ 2019.

ಈ ವರ್ಷದಲ್ಲಿ ಬಂದ ಎಡರುತೊಡರುಗಳು, ಸಂತಸ ಕ್ಷಣಗಳು ನೀಡಿದ ಅಪಾರ ನೋವು-ನಲಿವುಗಳು ಜೀವನದ ದಿಕ್ಕನ್ನೇ ಬದಲಿಸಿದಂತಾಗಿದೆ.  2019ನೇ ವರ್ಷ ಕೊಟ್ಟ ಸ್ಫೂರ್ತಿಯಲ್ಲಿಯೇ ನಾನು 2020ನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದೇನೆ. ಈ ಸಂದರ್ಭದಲ್ಲಿ ನಾನು, ನನ್ನ ಸ್ನೇಹಿತರು ಹಲವು ಸಂಕಲ್ಪಗಳನ್ನು ಮಾಡಿಕೊಂಡಿದ್ದೇವೆ. ಒಬ್ಬೊಬ್ಬರದ್ದೂ ಒಂದೊಂದು ಸಂಕಲ್ಪ. ಆದರೆ, ಅವುಗಳ ಪೈಕಿ ಎಲ್ಲರಿಗೂ ಅನ್ವಯವಾಗುವ ಕೆಲವು ಮುಖ್ಯ ಸಂಕಲ್ಪಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಜಂಕ್‌ಫ‌ುಡ್‌ ನಿಷೇಧ
ಯಾವುದೇ ಕಾರಣಕ್ಕೂ ರಸ್ತೆ ಬದಿಯ ಕುರುಕಲು ತಿಂಡಿ ತಿನ್ನಬಾರದು. ಅದರಿಂದ ಆರೋಗ್ಯ ಹಾಳಾಗುತ್ತದೆ. ಕ್ಯಾನ್ಸರ್‌ನಂಥ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ಕಲಿಕೆ ಸಂದರ್ಭದಲ್ಲಿಯೇ ಅರಿತಿದ್ದೇವೆ. ಹೀಗಾಗಿ ಅದೆಷ್ಟೇ ಆಸೆಯಾದರೂ ಜಂಕ್‌ಫ‌ುಡ್‌ ಮೊರೆ ಹೋಗಬಾರದು.

ಮಿತವ್ಯಯ
ಇನ್ನೊಂದು ಅತೀ ಮುಖ್ಯ ಮನಸ್ಸಂಕಲ್ಪ ಎಂದರೆ ಮಿತವ್ಯಯಿಗಳಾಗಬೇಕು ಎಂಬುದು. ನಾವು ಮಾಡುವ ಪ್ರತಿಯೊಂದು ವೆಚ್ಚವನ್ನು ಮೂರು ಪಟ್ಟಿಯಲ್ಲಿ ಈ ರೀತಿ ವಿಂಗಡಣೆ ಮಾಡುವುದು. ಅತೀ ಆವಶ್ಯಕ, ಅವಶ್ಯಕ, ಅನಾವಶ್ಯಕ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿದಾಗ ಉಳಿತಾಯದ ಅಧ್ಯಾಯ ಪ್ರಾರಂಭವಾಗುತ್ತದೆ.

Advertisement

ಆರೋಗ್ಯಪ್ರಜ್ಞೆ
ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ನಿಯಮಿತವಾಗಿ ಯೋಗಾಸನ, ವ್ಯಾಯಾಮವನ್ನು ಮಾಡಬೇಕು. ಸಮತೋಲನ ಆಹಾರವನ್ನು ಹಿತಮಿತವಾಗಿ ಸೇವಿಸಿ ಆರೋಗ್ಯವನ್ನು ಕಾಪಾಡಬೇಕು. ಬೊಜ್ಜನ್ನು ಕರಗಿಸಿ ಅಂಗಸೌಷ್ಟವವನ್ನು ಕಾಪಾಡಿಕೊಳ್ಳಬೇಕು… ಇತ್ಯಾದಿ ಆಲೋಚನೆಗಳೇ ಹೃದಯಕ್ಕೆ ಆನಂದವನ್ನು ನೀಡುತ್ತವೆ. ಅದೆಷ್ಟರ ಮಟ್ಟಿಗೆ ಕಾರ್ಯಗತವಾಗುವುದು ಎನ್ನುವುದು ನಮ್ಮ ದೈನಂದಿನ ವೇಳಾಪಟ್ಟಿಯನ್ನು ಅವಲಂಬಿಸಿದೆ.

ಹೊಸದನ್ನು ಕಲಿ
ಸ್ಪರ್ಧಾತ್ಮಕ ಯುಗದಲ್ಲಿ ಹೊಸದನ್ನು ಕಲಿಯುತ್ತಲೇ ಇರುವುದು ಬಹಳ ಮುಖ್ಯ. ನಮ್ಮೊಳಗೆ ಹುದುಗಿರುವ ಕ್ರಿಯಾಶೀಲತೆಯನ್ನು , ಪ್ರತಿಭೆಯನ್ನು ನಾವೇ ಗುರುತಿಸಿಕೊಂಡು ಅದನ್ನು ಹೊರಗೆಳೆಯುವ ಮಾರ್ಗಸೂಚಿಗಳನ್ನು ನಾವೇ ರೂಪಿಸಿಕೊಳ್ಳಬೇಕು. ನಮ್ಮ ಅಂತರಂಗದಲ್ಲಿರುವ ಗಾಯಕನನ್ನು, ಸಾಹಿತಿಯನ್ನು ಅಥವಾ ಕಲಾಕಾರನನ್ನು ಗುರುತಿಸಿ ರೂಪಿಸಬೇಕೆನ್ನುವ ಸಂಕಲ್ಪ ನಮ್ಮದಾಗಿರಬೇಕು.

ಧನಾತ್ಮಕ ಚಿಂತನೆಗೆ ಆದ್ಯತೆ
ಮನಸ್ಸಿನ ಮೂಲೆಯಲ್ಲಿ ಯಾವುದೇ ನೇತ್ಯಾತ್ಮಕ ಭಾವನೆಗಳಿಗೂ ಎಡೆಗೊಡದೆ ಧನಾತ್ಮಕ ಚಿಂತನೆಗಳನ್ನು ಮಾಡುತ್ತಿದ್ದಲ್ಲಿ ನಮ್ಮ ಮನಸ್ಸು ಪ್ರಪುಲ್ಲವಾಗುತ್ತದೆ. ಮತ್ತು ನಾವು ಯಶಸ್ಸಿನ ಉತ್ತುಂಗವನ್ನು ತಲುಪುತ್ತೇವೆ ಎಂದು ಹಲವು ಕಡೆ ಓದಿದ್ದೇವೆ. ಈ ವರ್ಷ ಎಷ್ಟು ಸಕಾರಾತ್ಮಕ ಯೋಚನೆ ಮಾಡಬಲ್ಲೆವು ಎಂದು ಗಮನಿಸುತ್ತ ಇರಬೇಕು.

ಹೀಗೊಂದು “ಮನ್‌ ಕೀ ಬಾತ್‌’
“ನನಗಿಂತ ನಾಡು ದೊಡ್ಡದು, ದೇಶ ದೊಡ್ಡದು’, ನನ್ನ ನುಡಿ, ನನ್ನ ನಾಡಿಗೋಸ್ಕರ ಸ್ವಲ್ಪವಾದರೂ ಚಿಂತನೆ ಮಾಡದಿದ್ದರೆ ಹೊಸವರ್ಷದ ಸಂಕಲ್ಪಗಳು ಅರ್ಥಹೀನವಾಗುತ್ತವೆ.
ಆದ್ದರಿಂದ ಸಮಾಜಕ್ಕೆ ಸಂಬಂಧಿಸಿ ಯೋಚನೆ ಮಾಡುವುದು ನಮ್ಮ ಜೀವನದ ಭಾಗವಾಗಿರಬೇಕು ಎಂಬ ಆಶಯ ಮನಸ್ಸಿನಲ್ಲಿದೆ. ಉದಾಹರಣೆಗೆ ಸ್ವತ್ಛ ಭಾರತ್‌ ಚಳವಳಿಗೆ ಕೈ ಜೋಡಿಸುವುದು.

ಪ್ಲಾಸ್ಟಿಕ್‌ಮುಕ್ತ ಭಾರತವನ್ನು ಕಟ್ಟುವುದು ಅತೀ ಅಗತ್ಯ. ಕಸಮುಕ್ತ ಭಾರತವನ್ನು ಸಾಕಾರ ಮಾಡುವುದು ನಮ್ಮ ಕನಸಾಗಲಿ. ವಿದ್ಯಾವಂತ ಯುವಜನಾಂಗವಾದ ನಾವು ಅನಕ್ಷರಸ್ಥರಿಗೆ ಜ್ಞಾನವನ್ನು ಹಂಚಲು ಪ್ರಯತ್ನಿಸಬೇಕು. ಜ್ಞಾನದ ಹಣತೆಯನ್ನು ಹಚ್ಚಿ ದೇಶದ ಸಾಕ್ಷರತೆಗೆ ಕೈಜೋಡಿಸಬೇಕಾಗಿದೆ. ಈ ನಮ್ಮ ಸಂಕಲ್ಪ ಈಡೇರುವಂತೆ ಮಾಡಲು ಹಿರಿಯರ ಮಾರ್ಗದರ್ಶನವೂ ಅಗತ್ಯ. ಹೊಸ ವರ್ಷದಲ್ಲಿ ಇಂತಹ ಅನೇಕ ಉದ್ದೇಶಗಳನ್ನು ಮತ್ತೆ ಮತ್ತೆ ಧ್ಯಾನಿಸಿಕೊಂಡೇ ಸ್ನೇಹಿತರಿಗೆ ಪರಸ್ಪರ ಶುಭಾಶಯ ಹೇಳುವುದು ಎಷ್ಟೊಂದು ಅರ್ಥಪೂರ್ಣ.

ನೀತಾ ಜಿ. ಶೆಣೈ
ದಂತವೈದ್ಯಕೀಯ ಪ್ರಾಧ್ಯಾಪಕಿ, ದಂತವೈದ್ಯಕೀಯ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next