Advertisement

ಹೊಸ ವರ್ಷದ ಜಾಲಿ ರೈಡ್‌: ವಿದ್ಯಾರ್ಥಿಗಳು ಸಾವು

11:21 AM Jan 02, 2017 | Team Udayavani |

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕಾರಿನಲ್ಲಿ ಜಾಲಿ ರೈಡ್‌ಗೆ ತೆರಳಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಯಲಹಂಕ ಸಮೀಪದ ಪಾಲನಹಳ್ಳಿ ಗೇಟ್‌ ಸಮೀಪ ನಡೆದಿದೆ.

Advertisement

ವಿವೇಕನಗರ ನಿವಾಸಿಗಳಾದ ಕೆ. ಕಿಶೋರ್‌ (21) ಮತ್ತು ಎಸ್‌. ಸಂತೋಷ್‌ (20) ಮೃತ ವಿದ್ಯಾರ್ಥಿಗಳು. ಹೊಸ ವರ್ಷದ ಹಿನ್ನೆಲೆಯಲ್ಲಿ ಇವರಿಬ್ಬರು ತಮ್ಮ ಇನ್ನಿಬ್ಬರು ಸ್ನೇಹಿತರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಶನಿವಾರ ತಡರಾತ್ರಿ ದೇವನಹಳ್ಳಿಗೆ ತೆರಳಿದ್ದು, ಅಲ್ಲಿ ಸಂಭ್ರಮಾಚರಣೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ.

ಕಿಶೋರ್‌, ದಯಾನಂದ ಸಾಗರ್‌ ಕಾಲೇಜಿನ ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಸಂತೋಷ್‌ ಕೋರಮಂಗಲದಲ್ಲಿರುವ ವೇಮನ ಕಾಲೇಜು ವಿದ್ಯಾರ್ಥಿ. ಇಬ್ಬರೂ ವಿವೇಕನಗರ ನಿವಾಸಿಗಳಾಗಿದ್ದು, ಹೊಸ ವರ್ಷ ಸಂಭ್ರಮಾಚರಣೆ ಜತೆಗೆ ಜಾಲಿ ರೈಡ್‌ಗಾಗಿ ಕಾರಿನಲ್ಲಿ ಇನ್ನೂ ಇಬ್ಬರು ಸ್ನೇಹಿತರ ಜತೆಗೆ ದೊಡ್ಡಬಳ್ಳಾಪುರಕ್ಕೆ ತೆರಳಿದ್ದರು.

ರಾತ್ರಿಯಿಡೀ ಸಂಭ್ರಮಾಚರಣೆ ಮುಗಿಸಿಕೊಂಡು ಬೆಳಗ್ಗೆ 7.15ರ ಸುಮಾರಿಗೆ ಬೆಂಗಳೂರಿಗೆ ಬರುತ್ತಿದ್ದಾಗ ಪಾಲನಹಳ್ಳಿ ಗೇಟ್‌ ಸಮೀಪ ಕಾರು ಚಾಲನೆ ಮಾಡುತ್ತಿದ್ದ ಕಿಶೋರ್‌ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಕ್ಯಾಬ್‌ಗ ಡಿಕ್ಕಿ ಹೊಡೆದಿದ್ದಾನೆ.

ಇದರಿಂದ ಕಿಶೋರ್‌ ಪಕ್ಕದಲ್ಲೇ ಕುಳಿತಿದ್ದ ಸಂತೋಷ್‌ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಕಿಶೋರ್‌ ಚಿಕಿತ್ಸೆ ಫ‌ಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಇವರೊಂದಿಗೆ ಇದ್ದ ಇನ್ನಿಬ್ಬರು ಯುವಕರು ಮತ್ತು ಎದುರಿನಿಂದ ಬರುತ್ತಿದ್ದ ಕ್ಯಾಬ್‌ ಚಾಲಕ ಮಂಜುನಾಥ್‌ ಎಂಬುವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಕಿಶೋರ್‌ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

Advertisement

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಮತ್ತೂಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೈಕ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ವಿದ್ಯಾರ್ಥಿ ಮೃತಪಟ್ಟು, ಸವಾರ ಗಾಯಗೊಂಡಿರುವ ಘಟನೆ ಬಾಗಲೂರು ಮುಖ್ಯರಸ್ತೆಯಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. 

ಬಾಗಲೂರು ಮುಖ್ಯರಸ್ತೆಯ ವಿನಾಯಕ ನಗರ ನಿವಾಸಿ ರಂಜಿತ್‌ ಕುಮಾರ್‌ ಮೃತ ದುರ್ದೈವಿ. ಚಿಕ್ಕಬಾಣವಾರದಲ್ಲಿರುವ ಆಚಾರ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಫ್ಯಾಷನ್‌ ಡಿಸೈನರ್‌ ವಿದ್ಯಾರ್ಥಿಯಾಗಿದ್ದ ರಂಜಿತ್‌ ಕುಮಾರ್‌ ತನ್ನ ಸ್ನೇಹಿತ ಪ್ರೇಮ್‌ಕುಮಾರ್‌ ಜತೆ ರೇವಾ ಕಾಲೇಜು ಬಳಿ ಸ್ನೇಹಿತರನ್ನು ಭೇಟಿ ಮಾಡಿ ಮನೆಗೆ ತೆರಳುತ್ತಿದ್ದ. ಪ್ರೇಮ್‌ಕುಮಾರ್‌ ವೇಗವಾಗಿ ಬೈಕ್‌ ಓಡಿಸುತ್ತಿದ್ದು, ಬಾಗಲೂರು ಮುಖ್ಯರಸ್ತೆಯ ಬೃಂದಾವನ ಕಾಲೇಜು ಬಳಿ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ.

ಇದರಿಂದ ಗಂಭೀರ ಗಾಯಗೊಂಡ ರಂಜಿತ್‌ಕುಮಾರ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ಪ್ರೇಮ್‌ಕುಮಾರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಬೈಕ್‌ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದು, ಈ ಸಂಬಂಧ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಂಗಮದಲ್ಲಿ ನಗರದ ವಿದ್ಯಾರ್ಥಿ ನೀರುಪಾಲು
ಕನಕಪುರ:
ಹೊಸ ವರ್ಷಾಚರಣೆಗೆಂದು ಪ್ರವಾಸಿ ತಾಣವಾದ ಸಂಗಮಕ್ಕೆ ಸ್ನೇಹಿತರೊಡನೆ ¬ಬಂದಿದ್ದ ಬೆಂಗಳೂರಿನ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಬೆಂಗಳೂರಿನ ಕೊತ್ತನೂರು ದಿಣ್ಣೆಯ ನಿವಾಸಿ ಗೌತಮ್‌ (26) ಮೃತ ದುರ್ದೈವಿ. ಮೂಲತಃ ಮಾಲೂರು ತಾಲೂಕಿನ ಚಿಕ್ಕ ಇಗ್ಗಲೂರು ಗ್ರಾಮದವನಾದ ಗೌತಮ್‌, ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಥಮ ಎಂ.ಎ. ವ್ಯಾಸಂಗ ಮಾಡುತ್ತಿದ್ದನು.

ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ತನ್ನ 12 ಜನ ಸ್ನೇಹಿತರ ಜತೆ ಕಾವೇರಿ ಸಂಗಮಕ್ಕೆ ಬಂದಿದ್ದನು. ಗೌತಮ್‌ ಹಾಗೂ ಸ್ನೇಹಿತರು ನೀರಿನಲ್ಲಿ ಈಜಾಡುತಿದ್ದಾಗ ಈ ದುರ್ಘ‌ಟನೆ ಸಂಭವಿಸಿದ್ದು  ಈತನ ಜತೆ  3 ಸ್ನೇಹಿತರು ಕೂಡ ನೀರಿನಲ್ಲಿ ಮುಳುಗುತ್ತಿದ್ದಾಗ ಸಮೀಪದಲ್ಲಿದ್ದವರು ರಕ್ಷಿಸಿದ್ದಾರೆ. ಮೃತನ ತಂದೆ ಗೋಪಾಲ್‌ ಅವರು ಜಿಗಣಿಯಲ್ಲಿ ಬೇಕರಿ ಇಟ್ಟುಕೊಂಡಿದ್ದಾರೆ. ಸ್ಥಳಕ್ಕೆ ಪಿಎಸ್‌ಐ. ಸಿದ್ದೇಗೌಡ, ಸಿಪಿಐ ಭಾಸ್ಕರ್‌ ಭೇಟಿಕೊಟ್ಟಿದ್ದು ಶವವನ್ನು ತಂದೆಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next