Advertisement
“ನೀರ್ ದೋಸೆ’ ಚಿತ್ರದಲ್ಲೂ ನಾಲ್ಕು ವಿಭಿನ್ನ ಕಥೆಗಳನ್ನು ನೀರ್ ದೋಸೆ ಹೇಗೆ ಬೆಸೆಯುತ್ತದೆ ಎಂದು ತೋರಿಸಲಾಗಿತ್ತು. ಇಲ್ಲಿ ನೀರ್ ದೋಸೆ ಬದಲಿಗೆ ಹೊಸ ವರ್ಷವೊಂದು ಅಷ್ಟೂ ಕಥೆಗಳಿಗೆ ವೇದಿಕೆಯಾಗುತ್ತದೆ. ಹಾಗಾಗಿಯೇ ಈ ತರಹದ್ದೊಂದು ಪ್ರಯತ್ನ ಆಗಿಲ್ಲ ಎಂದು ಹೇಳುವುದು ಕಷ್ಟ. ಆದರೆ, ನಿರ್ದೇಶಕ ಪನ್ನಗ ತಮ್ಮ ಮೊದಲ ಚಿತ್ರದಲ್ಲೇ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ರೀತಿಯನ್ನು ಮೆಚ್ಚಬೇಕು.
Related Articles
Advertisement
ಕೆಲವರು ಹೊಸ ವರ್ಷದಂದು ಏನೋ ಗಳಿಸುತ್ತಾರೆ, ಇನ್ನೇನೋ ಕಳೆದುಕೊಳ್ಳುತ್ತಾರೆ. ಯಾರ್ಯಾರು ಏನೇನು ಕಳೆದುಕೊಳ್ಳುತ್ತಾರೆ ಮತ್ತು ಗಳಿಸುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಹಾಗೆ ನೋಡಿದರೆ ಒಂದಕ್ಕೊಂದು ಕಥೆಗಳಿಗೆ ಸಂಬಂಧವಿಲ್ಲ. ಒಮ್ಮೆ ಮಾತ್ರ ಪೊಲೀಸ್ ಪೇದೆ ಮತ್ತು ರೇಡಿಯೋ ಜಾಕಿ ಒಂದು ದೃಶ್ಯದಲ್ಲಿ ಒಟ್ಟಾಗುತ್ತಾರೆ ಎನ್ನುವುದು ಬಿಟ್ಟರೆ, ಕಥೆಗಳಿಗೂ ಮತ್ತು ಪಾತ್ರಗಳಿಗೂ ಸಂಬಂಧವಿಲ್ಲ.
ಹಾಗೆ ಒಂದೇ ಚಿತ್ರದಲ್ಲಿ ಇದ್ದೂ, ಒಂದೊಂದು ಕಥೆಗೂ ಪ್ರತ್ಯೇಕವಾದ ಐಡೆಂಟಿಟಿ ಕೊಟ್ಟಿರುವುದು ಒಂದು ಹೆಚ್ಚುಗಾರಿಕೆಯಾದರೆ. ಅದೇ ತರಹದ ಕೆಲವು ಮಿತಿಗಳಿವೆ. ಪ್ರಮುಖವಾಗಿ ಈ ಎಲ್ಲಾ ಕಥೆಗಳಿಗೂ ಒಂದು ಸ್ಪಷ್ಟ ಅರ್ಥ ಸಿಗುವುದು ಕೊನೆಯ 20 ನಿಮಿಷಗಳಲ್ಲಿ ಮಾತ್ರ. ಅದಕ್ಕೂ ಮುನ್ನ ಒಂದೊಂದು ಕಥೆಯ ಒಂದೊಂದು ಘಟನೆ ಒಂದರಹಿಂದೊಂದು ನಡೆಯುತ್ತಲೇ ಇರುತ್ತದೆ. ಹೀಗೆ ಒಂದರಹಿಂದೊಂದು ಘಟನೆಗಳು ನಡೆಯುವುದರಿಂದ, ಯಾವುದಕ್ಕೂ ಒಂದು ಸ್ಪಷ್ಟ ಚಿತ್ರಣ ಸಿಗುವುದಿಲ್ಲ.
ಹಾಗೆಯೇ ಯಾವುದೋ ಕಥೆಯಲ್ಲಿ ಒಂದೊಳ್ಳೆಯ ತಿರುವು ಸಿಕ್ಕಿತು ಎನ್ನುವಷ್ಟರಲ್ಲಿ ಇನ್ನೊಂದು ಕಥೆಗೆ ಶಿಫ್ಟ್ ಆಗುವುದರಿಂದ ತುಂಡರಿಸಿದಂತಾಗುತ್ತದೆ. ಹಾಗಾಗಿ ಚಿತ್ರದಲ್ಲಿ ತರಹೇವಾರಿ ಎಮೋಷನ್‌ಗಳಿದ್ದರೂ, ಅದು ಹಿಡಿದಿಡುವುದಿಲ್ಲ. ಆಗಾಗ ಸ್ವಲ್ಪ ತಟ್ಟಿ ಮಾಯವಾಗುತ್ತದೆ. ಬಹುಶಃ ಕಥೆಗಳ ಸಂಖ್ಯೆ ಕಡಿಮೆ ಮಾಡಿದ್ದರೆ ಮತ್ತು ಎಲ್ಲಾ ಕಥೆಗಳಿಗೂ ಒಂದಿಷ್ಟು ಕತ್ತರಿ ಆಡಿಸಿದ್ದರೆ, ಚಿತ್ರ ಇನ್ನಷ್ಟು ಅರ್ಥಪೂರ್ಣವಾಗಿರುತಿತ್ತು. ಈ ತರಹದ ವಿಷಯಗಳನ್ನು ಬಿಟ್ಟರೆ, ಚಿತ್ರದಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಕಷ್ಟ.
ಮಿಕ್ಕಂತೆ ಅಭಿನಯ, ಛಾಯಾಗ್ರಹಣ, ಸಂಗೀತ ಎಲ್ಲಾ ವಿಷಯದಲ್ಲೂ ಚಿತ್ರದಲ್ಲಿ ಪ್ಲಸ್ ಜಾಸ್ತಿಯಾಗಿಯೇ ಇದೆ. ಐದೂ ಕಥೆಗಳ ಐದು ನಾಯಕಿಯರು, ನಾಯಕಿಯರು ತಮ¤ಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಸಾಯಿಕುಮಾರ್ ಮತ್ತು ಧನಂಜಯ್ ಒಂದು ಹೆಜ್ಜೆ ಮುಂದೆಯೇ ಎಂದರೆ ತಪ್ಪಿಲ್ಲ. ಸಾಯಿಕುಮಾರ್ ನಾಟಿ ಮಧ್ಯವಯಸ್ಕನಾಗಿ ಹೆಚ್ಚು ಗಮನಸೆಳೆಯುತ್ತಾರೆ. ಶ್ರೀಷ ಕೂದುವಳ್ಳಿ ಚಂದವಾದ ಪರಿಸರ ಕಟ್ಟಿಕೊಟ್ಟರೆ, ರಘು ದೀಕ್ಷಿತ್ ಸಂದರ್ಭಕ್ಕೆ ತಕ್ಕ ಸಂಗೀತ ಒದಗಿಸಿದ್ದಾರೆ.
ಚಿತ್ರ: ಹ್ಯಾಪಿ ನ್ಯೂ ಇಯರ್ನಿರ್ದೇಶನ: ಪನ್ನಗ ಭರಣ
ನಿರ್ಮಾಣ: ವನಜಾ ಪಾಟೀಲ್
ತಾರಾಗಣ: ಧನಂಜಯ್, ವಿಜಯ್ ರಾಘವೇಂದ್ರ, ದಿಗಂತ್, ಬಿ.ಸಿ. ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೃಷ್ಠಿ ಪಾಟೀಲ್ ಮುಂತಾದವರು * ಚೇತನ್ ನಾಡಿಗೇರ್