ಮನುಷ್ಯ ತನ್ನ ಏಕತಾನತೆಯಿಂದ ಮತ್ತೊಂದು ಹೊಸ ಮಗಲಿನೆಡೆ ತಿರುಗುವ ಸಮಯ. ಇಲ್ಲಿ ಯಾವುದೂ ಶಾಶ್ವತವಲ್ಲ, ಪ್ರತೀ ದಿನ, ಸಮಯ, ಖುಷಿ, ಬೇಸರ ಎಲ್ಲವೂ ಕ್ಷಣಿಕ. ಪ್ರತೀ ದಿನ ರಾತ್ರಿ ಮಲಗುವಾಗ ನಾಳೆಯ ಹೊಸ ಭರವಸೆಯನ್ನು ನಿರೀಕ್ಷಿಸುತ್ತೇವೆ. ಮರುದಿನ ಹೊಸ ಸುರ್ಯೋ ದಯದ ಬೆಳಕು ನಮಗೆ ಭರವಸೆ ನೀಡುತ್ತವೆ.
ಹಾಗೆಯೆ ಹಳೆಯ ಕಾಲದ ಪರದೆಯನ್ನು ಸರಿಸಿ ಹೊಸ ದಿಕ್ಕಿನೆಡೆ ದೃಷ್ಟಿ ಹಾಯಿಸುವ ಕಾಲವಿದು. ತಮ್ಮ ದುಃಖ, ದುಗುಡ-ದುಮ್ಮಾನ ಗಳನ್ನು ಮರೆತು, ಬದಿಗೊತ್ತಿ ನವ ವರ್ಷದ ಪರ್ವವನ್ನು ಕಾಣಲು ಸಜ್ಜಾಗಬೇಕಿದೆ. ಹೊಸ ಸಂವತ್ಸರವನ್ನು ಹೊಸ ಹುರುಪು, ಉತ್ಸಾಹಗಳಿಂದ ಸ್ವಾಗತಿಸಲು ಸರ್ವರು ಕಾತು ರರಾಗಿದ್ದಾರೆ. 2025ರ ಹೊಸ ವರುಷ ಎಲ್ಲರನ್ನು ಬೆಳಗಲಿ ಎಂಬುದು ಆಶಯ.
ಮನುಷ್ಯ ನಿರಂತರ ಹೊಸತನ್ನು ನಿರೀಕ್ಷಿಸುವ, ಬಯಸುವ ಜೀವಿ. ಏಕತಾನತೆ ಅವನಿಗೆ ಬೇಸರ ತರುತ್ತದೆ. ಪ್ರತಿನಿತ್ಯ ಏನಾದರೊಂದು ಹೊಸತು ಎಲ್ಲರಿಗೂ ಬೇಕು. ಹೊಸದಕ್ಕೆ ತುಡಿಯುವ ಮನುಷ್ಯನ ಈ ಬುದ್ಧಿಯೇ ನಮ್ಮ ಎಲ್ಲ ಹಬ್ಬಗಳಿಗೆ, ಆಚರಣೆಗಳಿಗೆ, ಆವಿಷ್ಕಾರಗಳಿಗೆ ಕಾರಣ. ಪ್ರಪಂಚದ ಎಲ್ಲ ಮಾನವ ಸಂಸ್ಕೃತಿಗಳಲ್ಲಿ ಕಂಡು ಬರುವ ಹಬ್ಬಗಳು, ಆಚರಣೆಗಳು ನನ್ನ ಈ ವಾದವನ್ನು ಪುಷ್ಟಿಗೊಳಿಸುತ್ತದೆ.
ಹೊಸತು ಏನೇ ಆಗಿದ್ದರೂ ಅದು ಕುತೂಹಲ, ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಒಂದು ಮಗುವಿಗೆ ಹೊಸ ಆಟಿಕೆಯೊಂದನ್ನು ತಂದು ಕೊಟ್ಟರೆ ಅದು ಮಗುವಿನ ಮನಸ್ಸಿನಲ್ಲಿ ಎಷ್ಟೊಂದು ಸಂತಸದ ಭಾವನೆಗಳನ್ನು ಅರಳಿಸುತ್ತದೆ!! ಅಂತೆಯೇ ಹೊಸ ವರ್ಷ. ಹೊಸ ನೀರೀಕ್ಷೆ, ಹುರುಪು, ಉತ್ಸಾಹ, ಹುಮ್ಮಸ್ಸುಗಳನ್ನು ಹೊತ್ತು ತರುವ ಸಂವತ್ಸರವನ್ನು ಎಲ್ಲರೂ ಎದುರು ನೋಡುತ್ತಿರುತ್ತಾರೆ. ಕಳೆದ ಕಾಲದಲ್ಲಾದ ಕಷ್ಟಗಳು ಮುಂದಿನ ಕಾಲದಲ್ಲಿ ಬಾರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಕಾಲ ಚಕ್ರದ ಉರುಳನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಅದು ತಿರುಗುತ್ತಲೇ ಇರಬೇಕು. ತಿರುಗುವ ಕಾಲದ ನಡುವಿನ ರಸ ನಿಮಿಷಗಳೇ ಜೀವನ. ಆದ್ದರಿಂದಲೇ ಒಂದು ಕಾಲಘಟ್ಟ ಮುಗಿದು ಇನ್ನೊಂದು ಆರಂಭವಾಗುವ ಹೊತ್ತು ಮನುಷ್ಯನಿಗೆ ಅಪ್ಯಾಯಮಾನ.
ಭಾರತೀಯ ಪಂಚಾಂಗದಲ್ಲಿ ಹೊಸ ಸಂವತ್ಸರದ ಆಗಮನವನ್ನು ಯುಗಾದಿ ಎಂದು ಸಂಭ್ರಮಿಸಿತ್ತೇವೆ. ಚೀನದಲ್ಲಿ ಅವರದ್ದೇ ಕ್ಯಾಲೆಂಡರ್‌ನ ಹೊಸವರ್ಷವನ್ನು ಆಚರಿಸುತ್ತಾರೆ. ಮೊಹರಂ ಮುಸಲ್ಮಾನರಿಗೆ ಹೊಸವರ್ಷವನ್ನು ತರುವ ತಿಂಗಳು. ಹೀಗೆ ಪ್ರಪಂಚದ ಎಲ್ಲ ಮೂಲೆಗಳಲ್ಲೂ ಹೊಸ ಕಾಲಘಟ್ಟವನ್ನು ಸಂಭ್ರಮದಿಂದ ಸ್ವಾಗತಿಸುವ ಪದ್ಧತಿ ಅನಾದಿಕಾಲದಿಂದಲೂ ಬಂದಿದೆ.
ಕಾಲಘಟ್ಟದ ಬಗೆಗೆ ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈಗ ನಾವೆಲ್ಲ ಗ್ರೇಗೊರಿಯನ್ ಕ್ಯಾಲೆಂಡರಿನ 2024ನೆಯ ಇಸವಿಯನ್ನು ಮುಗಿಸಿ 2025 ಎಂಬ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವು ವ್ಯವಹಾರಕ್ಕಾಗಿ ಒಪ್ಪಿಕೊಂಡಿರುವ ಈ ಕ್ಯಾಲೆಂಡರ್‌ಮತ್ತು ಅದರ ಆಚರಣೆಗಳು ಎಲ್ಲ ದೇಶ, ಸಂಸ್ಕೃತಿಗಳಿಗೂ ಮುಖ್ಯವೆನಿಸುತ್ತದೆ.
ಹಾಗಾಗಿ ದೇಶ, ಧರ್ಮಗಳ ಭೇದವಿಲ್ಲದೇ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಈ ಹೊಸವರ್ಷವನ್ನು ವೈಭವೋಪೇತವಾಗಿ ಆಚರಿಸಲಾಗುತ್ತದೆ. ಪೂರ್ವದ ಜಪಾನ್‌ನಿಂದ ಹಿಡಿದು ಪಶ್ಚಿಮದ ಅಮೆರಿಕದ ಪಶ್ಚಿಮ ತೀರದವರೆಗೆ ನಡೆಯುವ ಹೊಸ ವರ್ಷದ ಸಂಭ್ರಮಗಳನ್ನು ನಾವು ಮನೆಯಲ್ಲಿಯೇ ಕುಳಿತು ನೋಡಬಹುದು. ನ್ಯೂಯಾರ್ಕ್‌ನ ಟೈಮ್ ಚೌಕ್, ಅಸ್ಟ್ರೇಲಿಯಾದ ಸಿಡ್ನಿ, ದುಬಾೖಯ ಬುರ್ಜ್ ಕಾಲೀಫಾ- ಇಂತಹ ಕಡೆಗಳಲ್ಲಿ ಹೊಸವರ್ಷದ ಆರಂಭದ ಕ್ಷಣಗಣನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹೊಸವರ್ಷವನ್ನು ಸ್ವಾಗತಿಸುವ ಪದ್ಧತಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ. ಇದನ್ನು ನೋಡಲು ಎಲ್ಲ ಕಡೆಗಳಿಂದಲೂ ಜನ ಹೋಗುವುದರಿಂದ ಆ ಊರುಗಳೇ ವರ್ಷದ ಕೊನೆಯ ದಿನಗಳಲ್ಲಿ ಜನಗಳಿಂದ ತುಂಬಿರುತ್ತದೆ.
ಈ ಎಲ್ಲ ಊರುಗಳಲ್ಲಿ ಡಿಸೆಂಬರ್ 31ರಂದು ವಾಹನ ಹಿಡಿದು ಹೊರಗೆ ಹೋಗಲಾರದಷ್ಟು ಸಂಚಾರ ದಟ್ಟಣೆ ಇರುತ್ತದೆ. ಹೊಟೇಲ್, ಪ್ರವಾಸ ಮುಂತಾದ ಉದ್ದಿಮೆಗಳಿಗೆ ಇದು ಸುಗ್ಗಿಯ ಕಾಲ. ಪತ್ರಿಕೆಗಳಲ್ಲಿ ಎಲ್ಲಿ ನೋಡಿದರೂ ರಿಯಾಯಿತಿ ಮಾರಾಟದ ಜಾಹೀರಾತುಗಳೇ! ಈಗಿನ ಸಾಮಾಜಿಕ ಜಾಲತಾಣದ ಸಮಯದಲ್ಲಂತೂ ಎಲ್ಲರಿಗೂ ತಮ್ಮ ಸಂಭ್ರಮ ವಿಭಿನ್ನವಾಗಿರಬೇಕು ಎಂಬ ಒತ್ತಡ ಬೇರೆ. ತಮ್ಮ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಫ್, ಇನ್‌ಸ್ಟಾ , ಫೇಸ್‌ಬುಕ್‌ಗಳಲ್ಲಿ ಫೋಟೋ ಹಾಕಲೆಂದಾದರೂ ಒಂದು ಮೋಜು ಕೂಟವನ್ನು ಮಾಡುತ್ತಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಈ ಹೊಸವರ್ಷದ ಆಚರಣೆಯ ತುಡಿತ ಜಾಸ್ತಿಯಾಗಿ ನಗರಗಳಲ್ಲಿ ಇದು ಪೊಲೀಸರಿಗೊಂದು ತಲೆನೋವಾಗಿಯೂ ಪರಿಣಮಿಸುತ್ತದೆ.
ಬರಿಯ ಮೋಜು ಕೂಟಗಳಲ್ಲದೇ ಈ ಸಂದ ರ್ಭವು ಎಲ್ಲರಿಗೂ ಆತ್ಮಾವಲೋಕನಕ್ಕೂ ಒಂದು ಅವಕಾಶ. ಕಳೆದ ವರ್ಷದಲ್ಲಾದ ತಪ್ಪುಗಳನ್ನು ತಿದ್ದಿಕೊಳ್ಳಲು, ಹೊಸ ಗುರಿಗಳನ್ನು ಮುಂದಿನ ವರ್ಷದಲ್ಲಿ ರೂಪಿಸಿಕೊಂಡು ಅವುಗಳನ್ನು ಸಾಧಿಸಲು ಶ್ರಮಿಸಲು ಒಂದು ಅವಕಾಶ. ನನಗಂತೂ ಪ್ರತೀ ವರ್ಷದ ಅಂತ್ಯದಲ್ಲಿ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರುವ ಈ ವರ್ಷದ ಸಾಧನೆ, ಸಾಧಕರು, ಪ್ರಮುಖ ಘಟನೆಗಳನ್ನು ಓದುವುದು, ಕೇಳುವುದು ತಿಳಿದುಕೊಳ್ಳುವುದು ಒಂದು ಅತ್ಯಂತ ಸಂತಸದ ಚಟುವಟಿಕೆ.
ಈಗಿನ ಕೃತಕ ಬುದ್ಧಿಮತ್ತೆಯ, ವೇಗದ ಯುಗದಲ್ಲಿ ಒಂದು ಕಡೆ ಕುಳಿತು ಕಳೆದ ಕಾಲಮಾನದ ಬಗೆಗೆ ಚಿಂತಿಸಲು, ವೇಗಕ್ಕೊಂದು ಕಡಿವಾಣ ಹಾಕಿ ಶಾಂತವಾಗಿ ಯೋಚಿಸಲು ಇದೊಂದು ಸಂದರ್ಭ ಎನ್ನುವುದು ನನ್ನ ಅಭಿಮತ. ಅವರವರ ಭಾವಕ್ಕೆ ತಕ್ಕಂತೆ ಹೊಸವರ್ಷವನ್ನು ಬರಮಾಡಿಕೊಳ್ಳಬಹುದು.
“ವರುಷ ವರುಷ ಕಳೆದರೂ ಹೊಸವರುಷ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಮರಳಿ ಮರಳಿ ತರುತ್ತಿದೆ’- ಎಂದು ಬೇಂದ್ರೆಯವರ ಕವನವನ್ನು ಸ್ವಲ್ಪ ಬದಲಿಸಿ ಹೇಳುತ್ತಾ ಎಲ್ಲರಿಗೂ 2025 ಶುಭವನ್ನು ತರಲಿ ಎಂದು ಹಾರೈಸುತ್ತೇನೆ.
*ಸುಧಾ ಶಶಿಕಾಂತ್, ಮಸ್ಕತ್