Advertisement
ವಿಧಾನಸೌಧ, ಕೇಂದ್ರೀಯ ಗ್ರಂಥಾಲಯ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರ ಮಂಗಲ, ವೈಟ್‌ಫೀಲ್ಡ್, ಕಮ್ಮನಹಳ್ಳಿ, ಜಯ ನಗರ, ಬಿಟಿಎಂ ಲೇಔಟ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರಂಗೋಲಿ ಬಿಡಿಸಿದರೆ, ಖ್ಯಾತ ಕಟ್ಟಡಗಳನ್ನು ಕಲರ್ ಕಲರ್ ವಿದ್ಯುತ್ ದೀಪಗಳಿಂದ ಅಲಂಕರಿ ಸಲಾಗಿದೆ.
Related Articles
Advertisement
ಹೊಸ ವರ್ಷಕ್ಕೆ ಸಜ್ಜಾಗಿರುವ ನಗರದ ಸ್ಥಳಗಳು:
ಎಂ.ಜಿ.ರಸ್ತೆ
ನಗರದಲ್ಲಿಯೇ ಹೊಸ ವರ್ಷವನ್ನು ಅತ್ಯಂತ ವಿಜೃಂಭಣೆಯಿಂದ ಅಲಂಕಾರಗೊಳ್ಳುವ ಸ್ಥಳ ಎಂದರೆ ಮಹಾತ್ಮ ಗಾಂಧಿ ರಸ್ತೆ. ಹೊಸ ವರ್ಷಕ್ಕೆ ಹೊಸದಂತೆ ಕಾಣುವ ಪ್ರದೇಶವಾಗಿದ್ದು, ಬಹುತೇಕರು ಇಲ್ಲಿಗೆ ಆಗಮಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬಯಸುತ್ತಾರೆ. ಎಂ.ಜಿ.ರಸ್ತೆ ಸಂಪೂರ್ಣ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಭಾನುವಾರ ಮಧ್ಯರಾತ್ರಿವರೆಗೂ ಜನಸಾಗರದಿಂದ ತುಂಬಿರುತ್ತದೆ. ಇಲ್ಲಿನ ಅಂಗಡಿ- ಮುಂಗಟ್ಟುಗಳು, ಹೋಟೆಲ್‌ಗಳನ್ನು ಲೈಟಿಂಗ್ಸ್‌ನಿಂದ ಅಲಂಕರಿಸಿದ್ದು, 2024ಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಸಿಂಗರಿಸಲಾಗುತ್ತದೆ.
ಚರ್ಚ್ ಸ್ಟ್ರೀಟ್:
ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಆಚರಣೆಯನ್ನು ಕಣ್ತುಂಬಿಕೊಳ್ಳಬಹುದು. ಬಗೆ ಬಗೆಯ ಲೈಟ್ಸ್‌ಗಳು ಕಂಗೊಳಿಸುವ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು. ಇಲ್ಲಿ ಪಬ್, ಕ್ಲಬ್, ರೆಸ್ಟೋರೆಂಟ್‌ಗಳು ಹೆಚ್ಚಾಗಿರುವುದರಿಂದ ರಸ್ತೆಯಲ್ಲಿ ಸೌಂಡ್ ಸ್ಪೀಕರ್ ಅಳವಡಿಸಲಾಗುತ್ತದೆ. ಸಾರ್ವಜನಿಕವಾಗಿ ಹಾಡು ಕುಣಿತವೂ ಇದೆ.
ಬ್ರಿಗೇಡ್ ರಸ್ತೆ:
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಬ್ರಿಗೇಟ್ ರಸ್ತೆಯಲ್ಲೂ ಮಾಯಾಲೋಕವೇ ಸೃಷ್ಟಿಯಾಗಿದೆ. ಇಲ್ಲಿ ಶಾಪಿಂಗ್ ಮಳಿಗೆಗಳು ಹೆಚ್ಚಾಗಿದ್ದು, ಇಲ್ಲಿ ಬೀದಿಗಳನ್ನು ಸುಂದರವಾಗಿ ಶೃಂಗರಿಸಲಾಗಿದೆ. ಜತೆಗೆ ಸಾರ್ವಜನಿಕರು ಹೆಚ್ಚಾಗಿ ಬರುವ ಸ್ಥಳವಾಗಿದೆ. ಕೆಲವರು ಕೇಕ್ ಕತ್ತರಿಸುವ ಮೂಲಕ ಆಚರಿಸಿದರೆ, ಇನ್ನೂ ಕೆಲವರು ಹಾಡು ಕುಣಿತದೊಂದಿಗೆ ಎಂಜಾಯ್ ಮಾಡುತ್ತಾರೆ.
ವಿಧಾನಸೌಧ:
ಹೊಸ ವರ್ಷ ಹಿನ್ನೆಲೆಯಲ್ಲಿ ವಿಧಾನಸೌಧ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಇದನ್ನು ನಿಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬಸ್ಥರೊಂದಿಗೆ ಕಣ್ತುಂಬಿಕೊಳ್ಳಲು ಡಿ.31ರ ಸಂಜೆ ಭೇಟಿ ನೀಡಿ, ಫೋಟೋ ಶೂಟ್ ಕೂಡ ಮಾಡಬಹುದು.
ವರ್ಷಾಚರಣೆ: ಪೊಲೀಸ್ ಕಣ್ಗಾವಲು:
ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಇಂದಿರಾ ನಗರ, ವೈಟ್‌ಫೀಲ್ಡ್, ಕೋರಮಂಗಲ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ದಲ್ಲಿ ಭಾರೀ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿದೆ. ಅಲ್ಲದೆ, ಸುಗಮ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಟೋಯಿಂಗ್ ವಾಹನ ಪೊಲೀಸರು ಬಳಸುತ್ತಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಹೆಚ್ಚು ವರಿ ಪೊಲೀಸ್ ಆಯುಕ್ತ ಸತೀಶ್‌ಕುಮಾರ್, ಜಂಟಿ ಪೊಲೀಸ್ ಆಯುಕ್ತ ಎಂ. ಎನ್.ಅನು ಚೇತ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರ ಮಂಗಲ, ಇಂದಿರಾನಗರ, ಬ್ಯಾಟರಾಯ ನಪುರ ಸೇರಿ ನಗರದ ಕೆಲ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಮತ್ತೂಂದೆಡೆ ಎರಡು ದಿನಗಳಿಂದ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಶೇಷ ತಂಡಗಳು ಎಲ್ಲೆಡೆ ತಪಾಸಣೆ ನಡೆಸುತ್ತಿದ್ದು, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಿದ್ದಾರೆ.
7 ಸಾವಿರ ಪೊಲೀಸರ ನಿಯೋಜನೆ: ನಗರದಲ್ಲಿ ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಭದ್ರತೆ ಕೈಗೊಳ್ಳ ಲಾಗಿದೆ. ಇಬ್ಬರು ಹೆಚ್ಚುವರಿ ಆಯುಕ್ತರು, ಒಬ್ಬ ಜಂಟಿ ಪೊಲೀಸ್ ಆಯುಕ್ತ, 20 ಡಿಸಿಪಿಗಳು, 50 ಮಂದಿ ಎಸಿಪಿಗಳು ಸೇರಿ 7 ಸಾವಿರ ಪೊಲೀಸ್ ಅಧಿಕಾರಿ- ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಮುಖವಾಗಿ ಕೇಂದ್ರ ವಲಯದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಹೆಚ್ಚಿನ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದು, ಈ ಭಾಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ 18 ಮಂದಿ ಮಹಿಳಾ ಸೇಫ್ಟಿ ಐಲ್ಯಾಂಡ್, 16 ವಾಚ್ ಟವರ್, 14 ಕೆಎಸ್‌ಆರ್‌ಪಿ ತುಕಡಿ, ಎರಡು ಮೊಬೈಲ್ ಕಮಾಂಡ್ ಸೆಂಟರ್ ಸ್ಥಳದಲ್ಲಿ ಇರಲಿವೆ. ಜತೆಗೆ 10ಕ್ಕೂ ಅಗ್ನಿಶಾಮಕ ಸಿಬ್ಬಂದಿ ಮತ್ತು ವಾಹನಗಳನ್ನು ಮುಂಜಾಗೃತಾ ಕ್ರಮವಾಗಿ ನಿಯೋಜಿಸಲಾಗಿದೆ.
ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್
ವರ್ಷಾಚರಣೆ ಮುಗಿದ ಮೇಲೆ ಏಕಕಾಲಕ್ಕೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರು ನುಗ್ಗುವುದರಿಂದ ಜನ ದಟ್ಟಣೆ ಉಂಟಾಗುತ್ತದೆ. ಆದ್ದರಿಂದ ಈ ಬಾರಿ ಡಿ.31ರ ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ನಿರ್ಗಮಿಸಲು ಅವಕಾಶ ಇರುವುದಿಲ್ಲ. ಬದಲಿಗೆ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಮೂಲಕ ನಿರ್ಗಮಿಸಬೇಕು.
ಮೇಲು ಸೇತುವೆ ಸಂಚಾರ ಬಂದ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲು ಸೇತುವೆ ಹೊರತುಪಡಿಸಿದರೆ ಉಳಿದ ನಗರದ ಎಲ್ಲ ಮೇಲು ಸೇತುವೆಗಳ ಸಂಚಾರ ವನ್ನು ಡಿ.31ರ ರಾತ್ರಿ 8 ಗಂಟೆಯಿಂದ ಜ.1ರ ಬೆಳಗಿನ ಜಾವ 6 ಗಂಟೆ ವರೆಗೂ ನಿಷೇಧ ಮಾಡಲಾಗಿದೆ. ಸಂಭ್ರಮಾಚರಣೆಗೆ ಬರುವ ಸಾರ್ವ ಜನಿಕರಿಗಾಗಿ ಪಿಕ್ ಅಪ್ ಆ್ಯಂಡ್ ಡ್ರಾಪ್ ಪಾಯಿಂಟ್ ಮಾಡಲಾಗಿದ್ದು, ಇಲ್ಲಿಯೇ ಇಳಿಯುವುದು ಅಥವಾ ಹತ್ತಬೇಕು. ಜತೆಗೆ ನಗರದ ಆಯ್ದ ಸ್ಥಳಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಸಿಬ್ಬಂದಿ ಜತೆಗೆ ಸಂಚಾರ ವಿಭಾಗದ ಎಸ್‌ಐ ಅಥವಾ ಪಿಎಸ್‌ಐ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾತ್ಕಾಲಿಕ ಟೋಯಿಂಗ್ ಬಳಕೆ
ಕೆಲ ವರ್ಷಗಳಿಂದ ಸಾರ್ವಜನಿಕರ ಆರೋಪಗಳ ಹಿನ್ನೆಲೆಯಲ್ಲಿ ಟೋಯಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ, ಡಿ.31ರ ಸಂಜೆಯಿಂದ 2024ರ ಜ.1ರ ಮುಂಜಾನೆವರೆಗೆ ತಾತ್ಕಾಲಿಕವಾಗಿ ಟೋಯಿಂಗ್ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆ. ರಸ್ತೆ ಬದಿ ಹಾಗೂ ನೋ ಪಾರ್ಕಿಂಗ್ ಸ್ಥಳ ಅಥವಾ ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ವಾಹನ ನಿಲುಗಡೆ ಮಾಡಿದ್ದರೆ, ಅಂತಹ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದ್ದಾರೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿ ಎಲ್ಲೆಡೆ ಸಾವಿರಾರು ಪೊಲೀಸರ ಭದ್ರತೆಗೆ ನಿಯೋಜಿಸಲಾಗಿದೆ. ಹಾಗೆಯೇ ಮಹಿಳೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಜತೆಗೆ ತಾತ್ಕಾಲಿಕವಾಗಿ ಟೋಯಿಂಗ್ ವಾಹನ ಬಳಸಲಾಗುತ್ತದೆ. ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು 112ಗೆ ಕರೆ ಮಾಡಬಹುದು.-ಬಿ.ದಯಾನಂದ, ಪೊಲೀಸ್ ಆಯುಕ್ತರು.