Advertisement

New Year: ಪಬ್‌ಗಳಲ್ಲಿ ಖ್ಯಾತ ಡಿಜೆಗಳಿಂದ ಪಾಪ್‌ ಮ್ಯೂಸಿಕ್‌

10:12 AM Dec 30, 2024 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. 2024ಕ್ಕೆ ಬೈ ಬೈ ಹೇಳಿ, 2025ನೇ ಹೊಸ ವರ್ಷಕ್ಕೆ ಹಾಯ್‌ ಹಾಯ್‌ ಹೇಳಲು ಸಿಲಿಕಾನ್‌ಸಿಟಿಗರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ದೇಶ-ವಿದೇಶಗಳ ಖ್ಯಾತ ಡಿ.ಜೆ.ಗಳು ಬೆಂಗಳೂರಿಗೆ ಕಾಲಿಟ್ಟಿದ್ದಾರೆ.

Advertisement

ಬೆಂಗಳೂರಿನ ಪಬ್‌ಗಳು, ಪಂಚತಾರಾ ಹೋಟೆಲ್‌ ಗಳು, ರೆಸಾರ್ಟ್‌ಗಳಲ್ಲಿ ಡಿಜೆ ನೈಟ್‌, ಬಾಲಿವುಡ್‌ ನೈಟ್‌, ಫ‌ುಡ್‌ ಆ್ಯಂಡ್‌ ಡ್ರಿಂಕ್‌, ಪಂಜಾಬಿ ನೈಟ್‌, ರೀಜನಲ್‌ ಎಕ್ಸ್‌ಪೀರಿಯೆನ್ಸ್‌, ಹಿಪ್‌ ಹಾಪ್‌ ಸೇರಿ ವಿವಿಧ ನೈಟ್‌ ಲೈಫ್ ಕಾರ್ಯಕ್ರಮ ಆಯೋಜಿಸಿರುವುದು ಈ ಬಾರಿಯ ಹೊಸ ವರ್ಷದ ವಿಶೇಷತೆ. ಬೆಂಗಳೂರಿನಲ್ಲಿ ಡಿ.31ರಂದು ರಾತ್ರಿ ಹೊಸ ವರ್ಷಾಚರಣೆಗಾಗಿ ಪಬ್‌ಗಳು, ಐಷಾರಾಮಿ ಹೋಟೆಲ್‌ಗ‌ಳಲ್ಲಿ ವಿವಿಧ ಡಿಜೆಗಳು ವಿಶೇಷ ನೈಟ್‌ ಲೈಫ್ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

ಹೊಸ ವರ್ಷದ ಮುನ್ನ ದಿನ ಕುಮಾರಕೃಪಾ ರಸ್ತೆಯ ಲಲಿತಾ ಅಶೋಕ್‌ನಲ್ಲಿ ರಾತ್ರಿ 8 ರಿಂದ ಖ್ಯಾತ ಗಾಯಕಿ ಉಷಾ ಉತ್ತಪ್ಪ ಹಾಗೂ ಡಿಜೆ ಹರ್ಷ ಬೌಟಾನಿ ಸಂಗೀತ ಕಾರ್ಯಕ್ರಮ ರಸದೌತಣ ನೀಡಲಿದೆ. ಕೋರಮಂಗಲದ ಕೆಎಚ್‌ಬಿ ಬ್ಲಾಕ್‌ ಬಳಿ ಗಿಲ್ಲೀಸ್‌ ರೆಡಿಫೈಂಡ್‌ನ‌ಲ್ಲಿ ಖ್ಯಾತ ಡಿಜೆ ಹಂಶಿ, ಡಿಜೆ ಹೈಶ್‌ ಡಿಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇಲ್ಲಿ ಒಮ್ಮೆ ಎಂಟ್ರಿ ಕೊಟ್ಟರೆ ಅನಿಮಿಯತ ಊಟ-ವಿವಿಧ ಬ್ರ್ಯಾಂಡ್‌ಗಳ ಮದ್ಯ ಸೇವಿಸಿ ಎಂಜಾಯ್‌ ಮಾಡಬಹುದು.

ಇನ್ನು ಎಂ.ಜಿ. ರಸ್ತೆಯ ತಾಜ್‌ ಹೋಟೆಲ್‌ನಲ್ಲಿ ಡಿಜೆನೈಟ್‌, ಫ‌ುಡ್‌ ಆ್ಯಂಡ್‌ ಡ್ರಿಂಕ್ಸ್‌, ಎಲೆಕ್ಟ್ರಾನಿಕ್‌ ಸಿಟಿಯ ಒಟೆರಾ ಹೋಟೆಲ್‌ನಲ್ಲಿ 2,999 ರಿಂದ 17,499 ರೂ.ವರೆಗೆ ವಿಶೇಷವಾದ ಡಿಜೆ ನೈಟ್‌, ಬಾಲಿವುಡ್‌ ನೈಟ್‌ನಲ್ಲಿ ಮಿಂದೇಳಬಹುದು. ಬೆಳ್ಳಂದೂರಿನ ಕೋರ್ಟ್‌ ಯಾರ್ಡ್‌ ಬೈ ಮೆರಿಟ್ಟೋ, ಬ್ರಿಗೇಡ್‌ ರಸ್ತೆಯ ಎವಾ ಮಾಲ್‌ನಲ್ಲಿ ಗುಂಡಿನ ಜೊತೆ ಖ್ಯಾತ ಬಾಲಿವುಡ್‌ ಹಾಡಿಗೆ ಹೆಜ್ಜೆ ಹಾಕಬಹುದು. ತಾಜ್‌ ಯಶವಂತಪುರದಲ್ಲಿ ಡಿಜೆ ಜಿತಿನ್‌, ಎಂಸಿ ಆಲಿ ಅವರು ವಿಶೇಷ ಡಿಜೆ ಕಾರ್ಯಕ್ರಮ ನಡೆಸಿಕೊಡುವುದು ಈ ಬಾರಿಯ ವಿಶೇಷವಾಗಿದೆ.

ವಿಶೇಷ ಖಾದ್ಯ, ಮದ್ಯ: ಇಂದಿರಾನಗರ, ಕೋರಮಂಗಲ, ಮಾರತ್ತಹಳ್ಳಿಯ ಕೆಲವು ಪಬ್‌ಗಳಲ್ಲಿ ಖ್ಯಾತ ಗಾಯಕರ ಹಾಡು ಆಲಿಸುತ್ತಾ, ಒಂದೊಂದೇ ಪೆಗ್‌ ಇಳಿಸಿಕೊಳ್ಳುವವರಿಗಾಗಿಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಬಹುತೇಕ್‌ ಪಬ್‌ಗಳಿಗೆ 18 ಅಥವಾ 21 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಕಲ್ಪಿಸಿದರೆ, ಬೆರಳೆಣಿಕೆಯಷ್ಟು ಪಬ್‌ಗಳು ಕುಟುಂಬಸ್ಥರಿಗೆ ವಿಶೇಷ ಖಾದ್ಯ, ಮದ್ಯ ಉಣ ಬಡಿಸಲು ಸಜ್ಜಾಗಿದೆ. ಚರ್ಚ್ ಸ್ಟ್ರೀಟ್‌ನ ಕೆಲವು ಪಬ್‌, ಡ್ಯಾನ್ಸ್‌ಬಾರ್‌ಗಳು ಲಲನೆಯರ ಮೈ ಬಳುಕಿಸುವ ನೃತ್ಯಕ್ಕೆ ಸಜ್ಜಾಗಿದೆ.

Advertisement

ಪಬ್‌, ಹೋಟೆಲ್‌ಗ‌ಳಲ್ಲಿ ಆರಂಭಿಕ ಶುಲ್ಕ: ಎಂ.ಜಿ.ರಸ್ತೆಯ ತಾಜ್‌ ಪಬ್‌ನಲ್ಲಿ 3,250 ರೂ. ಆರಂಭಿಕ ಶುಲ್ಕ ಇದೆ. ಬ್ರಿಗೇಡ್‌ ರಸ್ತೆಯ ಇವಾ ಮಾಲ್‌ 1,999 ರೂ. ಲಲಿತ್‌ ಅಶೋಕ್‌ 999 ರೂ., ಕೋರಮಂಗಲದ ಸನ್‌ಬರ್ನ್ ಯೂನಿಯನ್‌- 1,050, ಯಶವಂತಪುರದ ತಾಜ್‌-1,999, ಬಿವೈಜಿ ಬ್ರೇವಸ್ಕಿ ಬ್ರೇವಿಂಗ್‌ ಕಂಪನಿ-399, ಸರ್ಜಾಪುರ ರಸ್ತೆಯ ಹಾಟ್‌ ಕಫೆ-ಬ್ರೇವರಿ- 1,799, ಎಚ್‌ಎಸ್‌ಆರ್‌ ಲೇಔಟ್‌ ಡೋಂಟ್‌ ಟೆಲ್‌ ಮಾಮ-1999, ಮಾರತ್ತ ಹಳ್ಳಿ ರ್ಯಾಡಿಸನ್‌ ಬ್ಲೂ 1,499, ಬೆಂಗಳೂರು, ದೇವನ ಹಳ್ಳಿಯ ತಾಜ್‌ 1,490, ಮಲ್ಲೇಶ್ವರದ ಹೈ ಅಲ್ಟ್ರಾ ಲಂಗ್‌-2,499, ವೈಟ್‌ ಫೀಲ್ಡ್‌ನ ರಾಧಾ ಹೋಮ್‌ ಮೇಟಲ್‌,-999, ವಿಟಲ್‌ ಮಲ್ಯ ರಸ್ತೆಜೆಡಬ್ಲೂ ಮೆರಿಟ್ಟೋ 2,499, ಬನ್ನೇರುಘಟ್ಟ ರಸ್ತೆಯ ಗೆಸ್ಟಿ ಕಾಕ್‌ ಟೈಲ್ಸ್‌ ಆ್ಯಂಡ್‌ ಕಾಯ್‌ಸೆನ್ಸ್‌ -1,499, ಕೋರಮಂಗಲದ ದೇವಾನಾಂ ಸರೋವರ್‌ ಪೋರ್ಟಿಗೋ ಹೋಟೆಲ್‌-500, ಮಾರತ್ತಹಳ್ಳಿಯ ಇರೋಹಿಲ್‌ ಪಬ್‌ನಲ್ಲಿ 999 ರೂ. ಪ್ರಾರಂಭಿಕ ಶುಲ್ಕ ನಿಗದಿಪಡಿಸಲಾಗಿದೆ.

ಹೊಸ ವರ್ಷಾಚರಣೆಗೆ ವಿದೇಶಿಗರ ದಂಡು: ಬೆಂಗಳೂರಿನ ಈ ಬಾರಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಸಾವಿರಾರು ಮಂದಿ ಹೊಸ ವರ್ಷಾಚರಣೆ ಆಚರಿಸಲೆಂದೇ ಬೆಂಗಳೂರಿಗೆ ಕಾಲಿಡಲಿದ್ದಾರೆ. ಫ್ರಾನ್ಸ್‌, ಇಂಗ್ಲೆಂಡ್‌, ಜರ್ಮನಿ ಸೇರಿ ವಿವಿಧ ದೇಶಗಳಿಂದ ವಿದೇಶಿಗರು ಬೆಂಗಳೂರಿನ ಹೊಸ ವರ್ಷ ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಗರದಲ್ಲಿ ಹೊಸ ವರ್ಷವನ್ನು ಅತ್ಯಂತ ವಿಜೃಂಭಣೆಯಿಂದ ಅಲಂಕಾರಗೊಳ್ಳುವ ಸ್ಥಳ ಎಂದರೆ ಎಂ.ಜಿ. ರೋಡ್‌ ಹಾಗೂ ಬ್ರಿಗೇಡ್‌ ರೋಡ್‌. ಬಹುತೇಕರು ಇಲ್ಲಿಗೆ ಆಗಮಿಸಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಬಯಸುತ್ತಾರೆ. ಈ 2 ರಸ್ತೆಗಳಲ್ಲಿ ಮಾಯಾಲೋಕವೇ ಸೃಷ್ಟಿಯಾಗಿದ್ದು, ಚರ್ಚ್‌ಸ್ಟ್ರೀಟ್‌ನ ಗಲ್ಲಿ-ಗಲ್ಲಿಗಳ ಪಬ್‌ಗಳಲ್ಲಿ ಹೊಸ ವರ್ಷದ ನೈಟ್‌ ಲೈಫ್‌ ಅಲ್ಲಿ ಭಾಗಿಯಾಗಲು ಬಹುತೇಕ ಜೋಡಿಗಳು ಈಗಾಗಲೇ ಆಯೋಜಕರಿಗೆ ಹಣ ಪಾವತಿಸಿದ್ದಾರೆ. ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next