Advertisement

ಬಂದೋಬಸ್ತ್ ನಲ್ಲಿ ಹೊಸ ವರ್ಷಾಚರಣೆ

11:06 AM Dec 28, 2017 | |

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ಈ ಸಾರಿ ಭಾರಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ನಗರಾದ್ಯಂತ 15 ಸಾವಿರ ಮಂದಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಪೈಕಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ 500ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಸೇರಿದಂತೆ ಎರಡೂವರೆ ಸಾವಿರ ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಹೇಳಿದರು.

Advertisement

ನಾಲ್ವರು ಹೆಚ್ಚುವರಿ ಪೊಲೀಸ್‌ ಆಯುಕ್ತರು, ಇಬ್ಬರು ಜಂಟಿ ಪೊಲೀಸ್‌ ಆಯುಕ್ತರು, 19 ಮಂದಿ ಡಿಸಿಪಿ, 49 ಮಂದಿ ಎಸಿಪಿ, 250 ಇನ್‌ಸ್ಪೆಕ್ಟರ್‌, 400 ಪಿಎಸ್‌ಐ, 700 ಎಎಸ್‌ಐ ಮತ್ತು 40 ಕೆಎಸ್‌ಆರ್‌ಪಿ ಹಾಗೂ 30 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ 1,500 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಅಷ್ಟೇ ಅಲ್ಲದೇ, ಒಂದು ಸಾವಿರ ಸಿವಿಲ್‌ ಡೆಫೆನ್ಸ್‌ ಸಿಬ್ಬಂದಿ ಕೂಡ ಭದ್ರತೆ ಒದಗಿಸಲಿದ್ದಾರೆ. ನಗರಾದ್ಯಂತ ಇರುವ ಸಿಸಿಟಿವಿಗಳ ಜೊತೆಗೆ ಹೆಚ್ಚುವರಿಯಾಗಿ 500 ಸಿಸಿಟಿವಿ ಕ್ಯಾಮರಾ ಹಾಗೂ 500 ಹೊಯ್ಸಳ ವಾಹನ ಗಸ್ತು, 250 ದ್ವಿಚಕ್ರ ಚಿತಾ ವಾಹನಗಳು ಗಸ್ತುತಿರಗಲಿವೆ.

2 ಗಂಟೆವರೆಗೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌: ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಗಳಿಗೆ ತಡರಾತ್ರಿ 1 ಗಂಟೆವರೆಗೆ ತೆರೆಯಲು ಇರುವ ಅವಕಾಶವನ್ನು ಡಿ.31ರಂದು 2 ಗಂಟೆವರಗೆ ವಿಸ್ತರಿಸಲಾಗಿದೆ. ಆದರೆ, ಮದ್ಯ ಸೇವಿಸಿ ಅಪರಿಚಿತ ವ್ಯಕ್ತಿಗಳಿಗೆ(ಮಹಿಳೆ ಅಥವಾ ಪುರುಷರು) ಬಲವಂತದಿಂದ ಶುಭಾಶಯ ಕೋರಿ, ಕಿರಿಕಿರಿ ಉಂಟು ಮಾಡುವುದು. ಬಾಟಲಿ ಎಸೆದು ದಾಂಧಲೆ ನಡೆಸಿದರೆ ಬಂಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮದ್ಯ ತಪಾಸಣೆ
ಡಿ.31ರ ರಾತ್ರಿ 9 ಗಂಟೆಯಿಂದಲೇ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ನಿಗಾ ವಹಿಸಲು ಸಂಚಾರ ಪೊಲೀಸರು ಮದ್ಯ ತಪಾಸಣೆ ಕಾರ್ಯಕೈಗೊಳ್ಳಲಿದ್ದಾರೆ. ಒಂದು ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಜತೆಗೆ ರಾತ್ರಿ ವೇಳೆ ವೀಲಿಂಗ್‌ ಮಾಡುವವರ ವಿರುದ್ಧ ನಿಗಾ ವಹಿಸಲಾಗಿದೆ. ಹೊಸೂರು, ಮೈಸೂರು ರಸ್ತೆ, ಹೆಬ್ಟಾಳ ರಸ್ತೆ ಸೇರಿದಂತೆ ಪ್ರಮುಖ ಫ್ಲೈಓವರ್‌ಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

Advertisement

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಕಟ್ಟೆಚ್ಚರ, 300 ಸಿಸಿಟಿವಿ ಕ್ಯಾಮರಾ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಮತ್ತು ಚರ್ಚ್‌ಸ್ಟ್ರೀಟ್‌ಗಳಲ್ಲಿ ವಿಶೇಷ ಆದ್ಯತೆ ಮೇರೆಗೆ ಸುಮಾರು 30-40 ಮೀಟರ್‌ ಸುತ್ತಳತೆಯಲ್ಲಿ 300 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ವಿಶೇಷವಾಗಿ ಅಧಿಕ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ನಿಲುಗಡೆ ಹಾಗೂ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಅಲ್ಲದೇ ಸಂಭ್ರಮಾಚರಣೆಗೂ ಒಂದು ಗಂಟೆ ಮೊದಲೇ ಸಂಚಾರ ನಿರ್ಬಂಧಿಸಲಾಗುವುದು. ಭಾನುವಾರ 12 ಗಂಟೆಗೆ ಸಂಭ್ರಮಾಚರಣೆ ಆರಂಭವಾಗಿ ಕೇವಲ 40 ನಿಮಿಷಗಳು ಮಾತ್ರ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಸಾರ್ವಜನಿಕರು ಇರಬಹುದು. ನಂತರ ಈ ರಸ್ತೆಗಳಲ್ಲಿ ಸಂಭ್ರಮಾಚರಣೆಗೆ ಅವಕಾಶವಿಲ್ಲ. ಕೂಡಲೇ ಸಾರ್ವಜನಿಕರು ತಮ್ಮ ಮನೆಗಳಿಗೆ ತೆರಳಬೇಕು. ಮದ್ಯ ಸೇವಿಸಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದರೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸುತ್ತೇವೆ. ಸ್ಥಳದಲ್ಲಿ ಶ್ವಾನದಳ ಸೇರಿದಂತೆ ರಕ್ಷಣಾ ಪಡೆಗಳು ಕರ್ತವ್ಯ ನಿರ್ವಹಿಸಲಿವೆ ಎಂದು ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next