ಸಕಲೇಶಪುರ: ನೂತನ ವರ್ಷ ಸ್ವಾಗತಕ್ಕೆ ಪ್ರವಾಸಿಗರ ದಂಡು ತಾಲೂಕಿನತ್ತ ಮುಖ ಮಾಡಿದ್ದ ಹಿನ್ನೆಲೆ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಗರಿಗೆದರಿತ್ತು. ತಾಲೂಕಿಗೆ ಸಾವಿರಾರು ಪ್ರವಾಸಿಗರು ಆಗಮಿಸಿ ಮನರಂಜನೆಯೊಂದಿಗೆ ನೂತನ ವರ್ಷ ವನ್ನು ಸಂಭ್ರಮದಿಂದ ಸ್ವಾಗತಿಸಿದರು.
ತಾಲೂಕು ಆಡಳಿತದ ಬಿಗಿ ನಿಯಮದ ನಡುವೆಯೂ ರೆಸಾರ್ಟ್ ಹಾಗೂ ಹೋಂಸ್ಟೇಗಳಲ್ಲಿ ಹೊಸ ವರ್ಷಾಚರಣೆ ನಡೆಯಿತು. ಪಟ್ಟಣದ ಪ್ರಮುಖ 3 ಕ್ಲಬ್‌ಗಳಲ್ಲಿ ಹೊಸ ವರ್ಷ ಆಚರಣೆ ಮಾಡಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬೇಕರಿ, ಹೋಟೆಲ್‌ಗಳು, ಮಾಂಸದ ಅಂಗಡಿಗಳು, ಕ್ಯಾಂಟೀನ್‌ಗಳಲ್ಲಿ ಭರ್ಜರಿ ವ್ಯಾಪಾರ ವ್ಯವಹಾರ ನಡೆಯಿತು. ಕೆಲವು ಪ್ರವಾಸಿಗರು ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಕಾಲ ಕಳೆದರೆ, ಕೆಲವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದು ಕಂಡು ಬಂದಿತು.
ಪಟ್ಟಣದಲ್ಲಿ ಎಲ್ಲಿ ನೋಡಿದರೂ ಕಾರುಗಳ ಸಾಲೆ ಕಾಣುತ್ತಿತ್ತು. ಜಲಪಾತ ವೀಕ್ಷಣೆ: ತಾಲೂಕಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಮಂಜ್ರಾಬಾದ್ ಕೋಟೆ, ಬಿಸಿಲೆಘಾಟ್, ಮೂಕನಮನೆ ಜಲಪಾತ, ಮಗಜಹಳ್ಳಿ ಜಲಪಾತ, ಪಟ್ಲ ಬೆಟ್ಟ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೆಲವು ಕುಟುಂಬಗಳು ಸಹ ಅಲ್ಲಲ್ಲಿ ಸರಳವಾಗಿ ಹೊಸ ವರ್ಷಾಚರಣೆ ಮಾಡಿದ್ದು ಕಂಡು ಬಂದಿತು.
ಒಟ್ಟಾರೆ ತಾಲೂಕಿನಲ್ಲಿ ಹೊಸ ವರ್ಷದ ಆಚರಣೆ ಭರ್ಜರಿಯಾಗಿ ನಡೆದಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ತುಂಬುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕಾಗಿದೆ.
ಯುವಕರ ತಂಡ ಬೆಟ್ಟ ಗುಡ್ಡಕ್ಕೆ : ಹೊರ ಊರುಗಳಿಂದ ಬಂದ ಪ್ರವಾಸಿಗರು ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಸಂಭ್ರಮಿಸಿದರೆ, ತಾಲೂಕಿನ ಕೆಲವು ಯುವಕರ ತಂಡಗಳು ಬೆಟ್ಟ ಗುಡ್ಡಗಳಲ್ಲಿ ಬೆಂಕಿ ಹಚ್ಚಿ ಆಚರಣೆ ಮಾಡಿದ್ದು ಕಂಡು ಬಂದಿತು. ಹಲವು ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ನರ್ತನ ಮಾಡುವ ಮುಖಾಂತರ ಪ್ರವಾಸಿಗರು ಸಂಭ್ರಮಿಸಿದರು.
-ಸುಧೀರ್ ಎಸ್.ಎಲ್.