Advertisement

ಮಣಿಪಾಲ: ನಾಲ್ವರಿಗೆ ಹೊಸ ವರ್ಷದ ಪ್ರಶಸ್ತಿ

05:01 AM Jan 12, 2019 | |

ಉಡುಪಿ: ಮಣಿಪಾಲದ ಪ್ರತಿಷ್ಠಿತ ಸಂಸ್ಥೆಗಳಾದ ಮಾಹೆ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಮತ್ತು ಸಿಂಡಿಕೇಟ್‌ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ  ವರ್ಷಾರಂಭದಲ್ಲಿ ನೀಡುವ ಪುರಸ್ಕಾರ ಘೋಷಿಸಲಾಗಿದ್ದು, ಶನಿವಾರ ಅವರನ್ನು ಮಣಿಪಾಲದ ಫಾರ್ಚೂನ್‌ ಇನ್‌ ವ್ಯಾಲಿವ್ಯೂ  ಸಭಾಂಗಣದಲ್ಲಿ  ಗೌರವಿಸಲಾಗುವುದು. ಅವರ ಕಿರು ಪರಿಚಯ ಇಲ್ಲಿದೆ.

Advertisement

ಡಾ| ಸಂಧ್ಯಾ ಎಸ್‌. ಪೈ
ತರಂಗ, ತುಷಾರ, ರೂಪತಾರಾ, ತುಂತುರು ಪತ್ರಿಕೆಗಳನ್ನು ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ. ಮೂಲಕ ಪ್ರಕಟಿಸುತ್ತಿರುವ ಡಾ| ಸಂಧ್ಯಾ ಎಸ್‌.ಪೈ ಸಮರ್ಥ ಆಡಳಿತ, ಕ್ರಿಯಾತ್ಮಕ ಯೋಜನೆಗಳ ಕತೃ ಮಾತ್ರವಲ್ಲದೆ ಸೃಷ್ಟಿಶೀಲ ಬರಹಗಾರ್ತಿಯಾಗಿಯೂ ಗುರುತಿಸಲ್ಪಟ್ಟವರು. ಅಸಂಖ್ಯ ಸಂಪಾದಕೀಯಗಳು, ಪತ್ರಿಕಾ ಲೇಖನಗಳು, ಅನೇಕ ಗ್ರಂಥಗಳ ಮುಖಾಂತರ ಜನಮನ್ನಣೆ ಪಡೆದ ಮಾಧ್ಯಮ ರಂಗದ ಅನನ್ಯ ಮಹಿಳೆ. 

ಪತಿ ಪತ್ರಿಕೋದ್ಯಮಿ ಟಿ. ಸತೀಶ್‌ ಯು. ಪೈ ಅವರ ಶಕ್ತಿ ಕೇಂದ್ರವಾಗಿ ಅವರು ಮಾಡಿದ ಸಾಧನೆ ದೊಡ್ಡದು. ತರಂಗದಲ್ಲಿ ಅವರ ಜನಪ್ರಿಯ ಅಂಕಣ “ಪ್ರಿಯ ಓದುಗರೇ’ ಮುಟ್ಟದ ಹೃದಯ ವಿಲ್ಲ. ಮನೋರಂಜನ ಮಾಧ್ಯಮದಲ್ಲೂ ಅವ ರದು ದೊಡ್ಡ ಸಾಧನೆ. ಬಿದಿಗೆ ಚಂದ್ರಮ, ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಅಗ್ನಿಶಿಖೆ ಬಹಳಷ್ಟು ಜನಪ್ರಿಯತೆ ಗಳಿಸಿವೆ. ಪ್ರತಿಷ್ಠಿತ ಅತ್ತಿಮಬ್ಬೆ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿಗೆ ಪಾತ್ರರಾದ ಅವರು ಆದರ್ಶ ಗೃಹಿಣಿಯೂ ಆಗಿ ತಮ್ಮ  ಹಿರಿಮೆಯನ್ನು ಮತ್ತೂ ಹಿರಿದಾಗಿಸಿದ್ದಾರೆ.

ಡಾ| ಕೆ. ಆರ್‌. ಶೆಟ್ಟಿ


ಖ್ಯಾತ ನರರೋಗ ತಜ್ಞ ಡಾ| ಕೆ.ಆರ್‌. ಶೆಟ್ಟಿ. ಉಡುಪಿ ಎಂಜಿಎಂ ಕಾಲೇಜಿನಲ್ಲಿ ಇಂಟರ್‌ ಮೀಡಿಯೆಟ್‌, ಚೆನ್ನೈಯ
ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌, ಮುಂಬಯಿಯ ಗ್ರಾಂಟ್‌ ಮೆಡಿಕಲ್‌ ಕಾಲೇಜಿನಲ್ಲಿ ಎಂಡಿ ಪದವಿ ಪಡೆದವರು. ಮುಂಬಯಿಯ ಜೆ.ಜೆ. ಹಾಸ್ಪಿಟಲ್‌ ರಿಜಿಸ್ಟ್ರಾರ್‌ ಆಗಿ ಕೆಲಸ ಮಾಡಿದ್ದಾರೆ. ಲಂಡನಿನ ಇನ್‌ಸ್ಟಿಟ್ಯೂಟ್‌ ಆಫ್ ನ್ಯೂರೋಲಜಿ, ನರರೋಗ ಚಿಕಿತ್ಸೆಯ ನ್ಯಾಶನಲ್‌ ಹಾಸ್ಪಿಟಲ್‌ನಲ್ಲಿ ಕಾಮನ್‌ವೆಲ್ತ್‌ ಫೆಲೋ ಆಗಿ ತಜ್ಞತೆಯನ್ನು ಪಡೆದಿದ್ದಾರೆ. ಮಂಗಳೂರಿನ ಕೆಎಂಸಿಯಲ್ಲಿ ನರರೋಗ ಶಾಸ್ತ್ರದ ಪ್ರೊಫೆಸರ್‌ ಮತ್ತು ಪ್ರಿನ್ಸಿಪಾಲ್‌ ಆಗಿ ಕಾರ್ಯನಿರ್ವಹಿಸುತ್ತಲೇ ಯುನಿವರ್ಸಿಟಿ ಮೆಡಿಕಲ್‌ ಸೆಂಟರ್‌ (ಈಗಿನ ಅಂಬೇಡ್ಕರ್‌ ವೃತ್ತದ ಕೆಎಂಸಿ ಆಸ್ಪತ್ರೆ, ಮಂಗಳೂರು) ನಿರ್ದೇಶಕರಾಗಿಯೂ ಖ್ಯಾತರಾದರು. ನಿಟ್ಟೆ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿ ಸ್ಥಾಪನೆಯಾದಾಗ ಗೌರವ ಸಲಹೆಗಾರರಾಗಿದ್ದಾರೆ. ಡಾ| ಟಿ.ಎಂ.ಎ. ಪೈ ಅವರ ನಿಕಟವರ್ತಿಯಾಗಿದ್ದ ಡಾ| ಕೆ.ಆರ್‌. ಶೆಟ್ಟಿ, ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

ಎಚ್‌.ಎಸ್‌. ಉಪೇಂದ್ರ ಕಾಮತ್‌


ಇವರು ಖ್ಯಾತ ಬ್ಯಾಂಕಿಂಗ್‌ ಮುತ್ಸದ್ದಿ. ಕಾಂಞಂಗಾಡಿನಲ್ಲಿ ಹುಟ್ಟಿ ಬೆಳೆದವರು. ಬ್ಯಾಂಕ್‌ ಆಡಳಿತದಲ್ಲಿ ಮುಂದೆ ಸರಿಸಾಟಿಯಿಲ್ಲದ ನೇತಾರರಾಗಿ ಬೆಳಗಿದವರು. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಪದವಿ ಪಡೆದ ಕಾಮತ್‌ 1973ರಲ್ಲಿ ಯೂನಿ ಯನ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಪ್ರೊಬೆಶ ನರಿ ಆಫೀಸರ್‌ ಆಗಿ ನೇಮಕಗೊಂಡರು. 2006ರಲ್ಲಿ ಜಿಎಂ ಹುದ್ದೆಗೇರಿದರು. ತಮ್ಮ ಸೇವಾವಧಿಯಲ್ಲಿ ಬ್ಯಾಂಕಿನ ಸಾಲ ನಿರ್ವಹಣಾ ವಿಭಾಗಗಳಲ್ಲಿ ಪರಿಣಾಮಕಾರಿ ಬದಲಾವಣೆ ಗಳನ್ನು ಅಳವಡಿಸಿದರು. 2009ರಲ್ಲಿ ಭಾರತ ಸರಕಾರ ಅವರನ್ನು ಕೆನರಾ ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ನಿಯುಕ್ತಿಗೊಳಿಸಿತು. 2011ರಲ್ಲಿ ವಿಜಯ ಬ್ಯಾಂಕಿನ ಸಿಎಂಡಿ ಆಗಿ ಭಡ್ತಿ ಹೊಂದಿದರು. ಬ್ಯಾಂಕಿನ ಯಶಸ್ಸಿಗೆ ಕಾರಣರಾದರು. 2013ರಲ್ಲಿ ನಿವೃತ್ತರಾದರು. ದೇಶ ವಿದೇಶಗಳಲ್ಲಿ ವಿವಿಧ ವ್ಯವಹಾರ ಸಂಬಂಧೀ ಸೆಮಿನಾರ್‌, ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅವರೊಬ್ಬ ಅನುಭವಿ, ತಜ್ಞ ಸಲಹೆಗಾರರಾಗಿದ್ದಾರೆ.

ಅಂಬಾತನಯ ಮುದ್ರಾಡಿ


1935ರಲ್ಲಿ  ಮುದ್ರಾಡಿಯೆಂಬ ಹಳ್ಳಿಯಲ್ಲಿ ಜನಿಸಿದ ಕೇಶವ ಶೆಟ್ಟಿಗಾರರು ಅಂಬಾತನಯ ಎಂದೇ ಖ್ಯಾತರು. 36 ವರ್ಷ ಶಾಲಾ ಶಿಕ್ಷಕರಾಗಿ ದುಡಿದ ಅವರ ಕಾರ್ಯಕ್ಷೇತ್ರದ ಹರಹು ದೊಡ್ಡದು. ಚಿಂತಕ, ಕವಿ, ಶಿಕ್ಷಕರ ಶಿಕ್ಷಕ, ನಾಡಿನಗಲ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸಂಚಾರಗೈದ ಪರಿವ್ರಾಜಕ, ಕನ್ನಡದ ಕಟ್ಟಾಳು, ಹರಿದಾಸ, ಏಕೈಕ ಜಿನದಾಸ, ಗ್ರಂಥಕರ್ತ, ಸಾಹಿತ್ಯದ ಎಲ್ಲ ಪ್ರಕಾರಗಳ ಸೃಷ್ಟಿಯಲ್ಲಿ ಸಿದ್ಧಿ ಪಡೆದ ಪ್ರತಿಭಾವಂತ, ಏಕಾಂಕ ನಾಟಕ, ಶಿಶುಗೀತ, ಸುನೀತಗಳು, ಕಥನ ಕಾವ್ಯ, ಜೀವನ ಚರಿತ್ರೆ, ವ್ಯಂಗ್ಯ ಲೇಖನಗಳು, ಭಕ್ತಿ ಗೀತೆಗಳು, ಯಕ್ಷಗಾನ ಪ್ರಸಂಗಗಳು, ನಾಟಕಗಳು, ಕಾವ್ಯ ವಿಶ್ಲೇಷಣೆ, ನುಡಿಗಟ್ಟುಗಳ ಕೈಪಿಡಿ – ಅವರು ರಚಿಸದ ಸಾಹಿತ್ಯ ಪ್ರಕಾರಗಳಿಲ್ಲ. ಎಂಬತ್ತು ಮೀರಿದ ಹರೆಯದಲ್ಲೂ ಸಾಹಿತ್ಯ ಸೃಷ್ಟಿಯಲ್ಲಿ ನಿರತರಾಗಿರುವುದು ಅವರ ವೈಶಿಷ್ಟ. ಆರ್ಥಿಕ ಬಲವಿಲ್ಲದೆ ಅವರ ಅನೇಕ ಕೃತಿಗಳು ಪ್ರಕಟವಾಗದೆ ಉಳಿದಿವೆ. ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳಲ್ಲೂ ಭಾಗವಹಿಸಿದವರು. ಮೇಳ ನಡೆಸಿದ ಅನುಭವವೂ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next