Advertisement

ಮತ್ತೆ ಮತ್ತೆ ಹೊಸವರ್ಷ  

06:15 AM Jan 07, 2018 | Team Udayavani |

ಹೊಸವರ್ಷದ ಆಗಮನವನ್ನು ಕಳೆದ ರವಿವಾರ “ಸಾಪ್ತಾಹಿಕ ಸಂಪದ’ದಲ್ಲಿ ಜಯಂತ ಕಾಯ್ಕಿಣಿ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದರು. ಅದರ ಕುರಿತ  ಈ ಪ್ರತಿಸ್ಪಂದನ ಹೊಸವರ್ಷದ ಸಂಭ್ರಮವನ್ನು ಈ ರವಿವಾರಕ್ಕೂ ದಾಟಿಸಿದೆ.

Advertisement

ಪ್ರಿಯ ಜಯಂತ, 
ಕಳೆದ ವಾರದ ಉದಯವಾಣಿ “ಸಾಪ್ತಾಹಿಕ ಸಂಪದ’ದ ನಿನ್ನ ಕವಿತೆ “ಕಾರ್ಯಕ್ರಮ’ವನ್ನು ಮತ್ತೆ ಮತ್ತೆ ಓದುತ್ತ ನನ್ನ ಹೊಸವರ್ಷ ನಿಜಕ್ಕೂ ಹೊಸದಾಗುತ್ತಿದೆ. ಪರಿಪಕ್ವವಾದ ಅಷ್ಟೇ ಆಳವಾದ ಪ್ರತಿಭೆ ಇದರಲ್ಲಿ ಪ್ರತಿಫ‌ಲಿಸಿದೆ. ದಿನನಿತ್ಯದ ಹುಲುವಿವರಗಳಲ್ಲೇ ನೀನು ಅದ್ಭುತವನ್ನು ಮನಗಾಣುವ ರೀತಿ ವಿಶೇಷವಾದದ್ದು. ಅಡಿಗರ “ಮೋಹನ ಮುರಲಿ’ ಸೆಳೆಯುವ “ತೀರ’ ಒಂದು ಬಗೆಯದಾದರೆ, ನಿನ್ನ ಈ ಕವಿತೆಯಲ್ಲಿ ಸೆಳೆಯುವ “ಸಮುದ್ರ’ ಇನ್ನೊಂದು ಬಗೆಯದು. ಅಲೆ ಅಲೆಯಾಗಿ ಕರೆಯುವಂಥಾದ್ದು. ಮೂರರಲ್ಲಿ ಎರಡು ಸಾಲು ಸಮುದ್ರ, ಒಂದು ಸಾಲು ಭೂಮಿ ! ನಿನ್ನ ಕವಿತೆ ಹೇಳುತ್ತದೆ, “ಹುಷಾರು! ಹುಷಾರು!’. ವಾಹ್‌ ವಾಹ್‌ ಅಂತೇನೆ ನಾನು. ಸಮುದ್ರವೇ ಒಂದು ಇಡಿ. ಭೂಮಿ ಅನ್ನೋದು ಮಾನವ, ಪಶು, ವಿಹಗ, ಜಂತು, ವೃಕ್ಷ ಮತ್ತು ಪಾಷಾಣಗಳಿಗೆ ಸಿಕ್ಕ ಒಂದು ಅವಕಾಶ. ಪ್ರಜ್ಞಾಪೂರ್ವಕವಾಗಿಯೋ ಸುಪ್ತಪ್ರಜ್ಞಾಪೂರ್ವಕವಾಗಿಯೋ ನೀನೊಂದು ಮಾಸ್ಟರ್‌ ಪೀಸನ್ನು ರಚಿಸಿರುವಿ. ಆಶಯ ಮತ್ತು ಆಕೃತಿ ಅಂತೆಲ್ಲ ಹೇಳುತ್ತಾರೆ. ನೀನಂತೂ ಕಾವ್ಯ ಮತ್ತು ಗದ್ಯದ ನಡುವಿನ ಸೂಕ್ಷ್ಮ ಗೆರೆಯನ್ನು ಅಳಿಸಿಬಿಟ್ಟಿರುವಿ. ಲೆಕ್ಕಣಿಕೆಯನ್ನು ಚಲಿಸುವ ನಿನ್ನ ಕೈಗಳಿಗೆ ಇನ್ನೂ ಹೆಚ್ಚಿನ ಕಸುವನ್ನು ಹಾರೈಸುತ್ತೇನೆ. ಜೈ ಹೋ!

– ನಿದ್ದೆಯಲ್ಲಿರುವ ಮಗು ದೇವರೊಂದಿಗೆ ಸಂಭಾಷಿಸುತ್ತಿರುವ‌ ಕ್ಷಣ ಹೊಸತೇ.
– ಮುಂಜಾವ ಹೂವನ್ನು ಅರಳಿಸುವ ಮೂಲಕ ಭೂಮಿ ಆಕಾಶವನ್ನು ನೋಡಿ ನಗುತ್ತಿರುವ ಕ್ಷಣ ಹೊಸತೇ.
– ಜಗವೆಲ್ಲ ನಿದ್ದೆಯಲ್ಲಿರುವಾಗ ಮೂಡಲಮನೆಯಲ್ಲಿ ಸೂರ್ಯ ಇದ್ದಕ್ಕಿದ್ದಂತೆ ಎದ್ದು ಕುಳಿತುಕೊಳ್ಳುತ್ತಿರುವ ಕ್ಷಣ ಹೊಸತೇ.
– ಪ್ರತಿದಿನ ಬೆಳಗನ್ನು ಬೆರಗಿನಿಂದ ಕಾಣುವ ಕಣ್ಣುಗಳು ತೆರೆಯುತ್ತಿರುವ ಕ್ಷಣ ಹೊಸತೇ.
– ಇಷ್ಟೆಲ್ಲ ಹೊಸತಿರುವಾಗ  ಹೊಸವರ್ಷದ ಸಂಭ್ರಮ ಮುಗಿಯಲುಂಟೆ?
 

– ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next